ಚಿಂತಾಮಣಿ: ತಾಲೂಕಿನ ಮಿಂಡಿಗಲ್ ಗ್ರಾಮದ ಹೊರವಲಯದಲ್ಲಿ ಕೇದಿಗೆ ಗಿಡದಲ್ಲಿ ಎಲೆ ಕೀಳಲು ಬಂದ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಟನೆ ತಡವಾಗಿ ಬೆಳಕಿಗೆ ಬಂದಿದೆ. ಬುಧವಾರ ಗ್ರಾಮಸ್ಥರ ಮಾಹಿತಿ ಮೆರೆಗೆ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಸಮೀಪದ ಚಿಕ್ಕನಹಳ್ಳಿಯ ಹೊನ್ನಪ್ಪ (60 )ಮೃತ. ದುರ್ನಾತ ಬರುತ್ತಿರುವುದನ್ನು ಗಮನಿಸಿದ ಪಕ್ಕದ ಜಮೀನಿನ ರೈತರು ಶವವನ್ನು ಪತ್ತೆ ಹಚ್ಚಿದ್ದು, ಸಮೀಪದಲ್ಲಿ ದ್ವಿಚಕ್ರ ವಾಹನ ಹಾಗೂ ಕೇದಿಗೆ ಗಿಡದ ಎಲೆಗಳು ಕಂಡುಬಂದಿವೆ. ಎಲೆ ಕೀಳುವ ಸಂದರ್ಭದಲ್ಲಿ ಹೃದಯಾಘಾತವಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.