ಮಗುವಿನ ನಿರ್ವಹಣೆ ತಂದೆಯದೇ ಹೊಣೆ; ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಹೈಕೋರ್ಟ್ ಅಭಿಮತ

high court
Published on

| ಪವಿತ್ರಾ ಕುಂದಾಪುರ ಬೆಂಗಳೂರು

ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿ ಹಾಗೂ ಮಗುವಿಗೆ ಜೀವನಾಂಶ ನೀಡಬೇಕಾದ್ದು ಪತಿಯ ಕರ್ತವ್ಯ. ತಂದೆಯಾದವನು ನೆಪ ಹೇಳಿ ಮಗುವಿನ ನಿರ್ವಹಣೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಮಧ್ಯಂತರ ಜೀವನಾಂಶವಾಗಿ ಪತ್ನಿ ಮತ್ತು ಮಗುವಿಗೆ ತಲಾ 5 ಸಾವಿರ ರೂ. ನೀಡುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನೂ ವಜಾಗೊಳಿಸಿದೆ.

ಪ್ರಕರಣ ಸಂಬಂಧ ಬಳ್ಳಾರಿ ಮೂಲದ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ. ಪತ್ನಿಯು ಮಗುವಿನ ಲಾಲನೆ-ಪಾಲನೆಗಾಗಿ ಉದ್ಯೋಗ ತೊರೆದಿದ್ದಾಳೆ. ತಂದೆಯು ಮಗುವಿನ ಶಾಲಾ ಶುಲ್ಕ ಪಾವತಿಸಿರಬಹುದು. ಹಾಗೆಂದ ಮಾತ್ರಕ್ಕೆ ಜೀವನಾಂಶ ಮೊತ್ತ ಪಾವತಿಸುವುದರಿಂದ ತಪ್ಪಿಸಿಕೊಳ್ಳಲಾಗದು ಎಂದು ನ್ಯಾಯಪೀಠ ಖಾರವಾಗಿ ಹೇಳಿದೆ.

ಪತಿಯ ವಾದವೇನು?: ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರು ಬಳ್ಳಾರಿಯ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಮಾಸಿಕ 30 ಸಾವಿರ ವೇತನ ಪಡೆಯುತ್ತಿದ್ದಾರೆ. ಹೀಗಿರುವಾಗ ತಿಂಗಳಿಗೆ ತಲಾ 5 ಸಾವಿರ ರೂ. ಜೀವನಾಂಶ ನೀಡುವುದು ಕಷ್ಟ ಸಾಧ್ಯ ಎಂದು ವಿವರಿಸಿದರು. ಅಲ್ಲದೆ 2022ರಿಂದ ಮಗುವಿನ ಶಾಲೆಯ ಶುಲ್ಕವನ್ನು ಅರ್ಜಿದಾರರೇ ಪಾವತಿಸುತ್ತಿದ್ದಾರೆ. ಪತ್ನಿಯು ಇನ್ಪೋಸಿಸ್ ಉದ್ಯೋಗಿಯಾಗಿದ್ದು, ಜೀವನಾಂಶದ ಅವಶ್ಯಕತೆ ಆಕೆಗಿಲ್ಲ. ಇದೆಲ್ಲ ಅಂಶವನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸುವಂತೆ ಮನವಿ ಮಾಡಿದರು.

ಪತ್ನಿ ವಾದವೇನು?: ಪ್ರಕರಣದಲ್ಲಿ 1ನೇ ಪ್ರತಿವಾದಿಯಾಗಿರುವ ಪತ್ನಿ ಪರ ವಾದ ಮಂಡಿಸಿದ ವಕೀಲರು, ಮಗು ಜನಿಸಿದ ಬಳಿಕ ಪತ್ನಿಯೂ ಉದ್ಯೋಗ ತೊರೆದು ಮಗುವಿನ ಆರೈಕೆಯಲ್ಲಿ ನಿರತಳಾಗಿದ್ದಾಳೆ. ವಿಚಾರಣಾ ನ್ಯಾಯಾಲಯವು ತಿಳಿಸಿದ ಮೊತ್ತ ಅರ್ಜಿದಾರರಿಗೆ ಭರಿಸಲಾಗದ್ದೇನೂ ಅಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದರು.

ಇನ್ನೂ 3.70 ಲಕ್ಷ ರೂ. ಬಾಕಿ: ಪ್ರತಿವಾದಿಗಳ ಪರ ವಕೀಲರ ಹೇಳಿಕೆಯಂತೆ ವಿಚಾರಣಾ ನ್ಯಾಯಾಲಯದ ಆದೇಶದ ಬಳಿಕ ಅರ್ಜಿದಾರರು ಕೇವಲ 30 ಸಾವಿರ ರೂ. ಜೀವನಾಂಶ ರೂಪದಲ್ಲಿ ಪಾವತಿ ಮಾಡಿದ್ದಾರೆ. ಇನ್ನೂ 3.70 ಲಕ್ಷ ರೂ. ಬಾಕಿಯಿದೆ. ಬಾಕಿ ಮೊತ್ತ ಪಾವತಿಸುವ ಸ್ಥಿತಿಯಲ್ಲಿಲ್ಲ ಎಂದಿದ್ದಾರೆ. ಆದರೆ ಈ ಅಂಶವನ್ನು ಬಲವಾಗಿ ತಳ್ಳಿ ಹಾಕಿರುವ ನ್ಯಾಯಾಲಯ ಪತ್ನಿಗೆ ಜೀವನ ನಿರ್ವಹಣೆಗೆ ಹಣ ನೀಡುವಂತೆ ಸೂಚಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣವೇನು?: 2017ರ ಸೆ.1ರಂದು ಮದುವೆಯಾಗಿದ್ದು, ದಂಪತಿಗೆ ಐದು ವರ್ಷದ ಮಗುವಿದೆ. ವಿವಾಹದ ಕೆಲ ದಿನಗಳ ಬಳಿಕ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. 2021ರ ಜ.15 ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಚಿತ್ರದುರ್ಗದ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಲಯ ಅರ್ಜಿ ಮಾನ್ಯ ಮಾಡಿದೆ. ಪತ್ನಿ ಹಾಗೂ ಮಗುವಿಗೆ ಮಾಸಿಕ ತಲಾ 5 ಸಾವಿರ ರೂ. ಪಾವತಿಸುವಂತೆ 2021 ಸೆ.16ರಂದು ಆದೇಶ ಹೊರಡಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net