

ಬಾಗಲಕೋಟೆ: ಈ ಹದಿನೈದು ವರ್ಷ ವಯಸ್ಸಿನ ಬಾಲಕಿ ಬದುಕಿನ ಬಗ್ಗೆ ಏನೇನೋ ಕನಸುಗಳನ್ನು ಕಟ್ಟಿಕೊಂಡಿದ್ದಳು. ಪ್ರೀತಿಸಿದವನನ್ನೇ ಬಾಳಸಂಗಾತಿಯಾಗಿ ಮಾಡಿಕೊಂಡು ಇಡೀ ಜೀವನ ಕಳೆಯಬೇಕು ಎಂದುಕೊಂಡಿದ್ದಳು. ಆದರೆ ಆ ಪ್ರಿಯಕರನೇ ಈಕೆಯ ಬಾಳಿಗೆ ‘ವಿಲನ್’ ಆಗಿ ಮಾರ್ಪಟ್ಟಿದ್ದಾನೆ.
ಹುನಗುಂದ ತಾಲೂಕಿನ ಕೂಡಲಸಂಗಮದ 15 ವರ್ಷದ ಬಾಲಕಿಯೇ ಈ ನತದೃಷ್ಟೆ. ಈಕೆಯ ಜತೆಗೆ ಪ್ರೀತಿಯ ನಾಟಕ ಆಡಿರುವವನು ಅದೇ ಗ್ರಾಮದ ಅಪ್ರಾಪ್ತ ವಯಸ್ಕ. ಇವರಿಬ್ಬರೂ ಜತೆಗಿರುವ ವಿಡಿಯೋ ಹಾಗೂ ಫೋಟೋಗಳನ್ನು ಇವರದೇ ತಂಡದ ಇನ್ನೊಬ್ಬ ಹುಡುಗ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದ.
ಅದ್ಯಾವ ಘಳಿಗೆಯಲ್ಲಿ ಕೆಟ್ಟ ವಿಚಾರ ಬಂತೋ; ಆ ಹುಡುಗರೆಲ್ಲ ಆ ವಿಡಿಯೋ ಮತ್ತು ಫೋಟೊಗಳನ್ನು ಮುಂದಿಟ್ಟುಕೊಂಡು ಬಾಲಕಿಗೆ ಇನ್ನಿಲ್ಲದ ಲೈಂಗಿಕ ಕಿರುಕುಳ ನೀಡಲಾರಂಭಿಸಿದರು. ಅವಳ ಪ್ರಿಯಕರ ಸಹ ಆ ಕಾಮಪಿಪಾಸುಗಳ ಜತೆ ಕೈಜೋಡಿರುವುದು ಬಾಲಕಿಗೆ ಆಘಾತವನ್ನು ಉಂಟು ಮಾಡಿತ್ತು.
ಇವರ ಕಿರುಕುಳ ದಿನೇ ದಿನೆ ತೀವ್ರಗೊಂಡಿದ್ದರಿಂದ ಮನನೊಂದ ಬಾಲಕಿ ಕೆಲವು ದಿನಗಳಿಂದ ಮನೆ ಬಿಟ್ಟು ಹೊರಗೇ ಬರಲಿಲ್ಲ. ಯಾರ ಜತೆಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ದೇವರ ಕೋಣೆಯಲ್ಲಿ ಒಬ್ಬಂಟಿಯಾಗಿ ಇರತೊಡಗಿದ್ದಳು. ಕೊನೆಗೆ ಖಿನ್ನತೆಗೊಳಗಾಗಿ ಏ. 15ರಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೆಳಕಿಗೆ ಬರಲು ಬಿಡಲಿಲ್ಲ:
ಆರಂಭದಲ್ಲಿ ಈ ಪ್ರಕರಣ ಬೆಳಕಿಗೆ ಬರದಂತೆ ಆರೋಪಿಗಳ ಕಡೆಯವರು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾರೆ. ಏ.15 ರಂದೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಈ ವರೆಗೂ ಪ್ರಕರಣ ದಾಖಲಾಗಿರಲಿಲ್ಲ. ಆದರೆ, ಹೆತ್ತ ಮಗಳನ್ನು ಕಳೆದುಕೊಂಡು ಸಂಕಟ ಅನುಭವಿಸುತ್ತಿರುವ ಬಾಲಕಿಯ ತಂದೆ ಪೊಲೀಸರ ಮೇಲೆ ನಿರಂತರ ಒತ್ತಡ ಹಾಕಿದ್ದರಿಂದ ಏ. 25ರಂದು ಶನಿವಾರ ನಸುಕಿನ ಜಾವ 3.15ಕ್ಕೆ ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯ ಪ್ರೇಮಿ ಸೇರಿ ಮೂವರನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಇದರ ಹಿಂದೆ ಇರಬಹುದು ಎನ್ನಲಾದ ಜಾಲದ ವಿರುದ್ಧ ಪೊಲೀಸರು ಬಲೆ ಬೀಸಿದ್ದಾರೆ.
ಮೂವರು ಆರೋಪಿಗಳ ವಿರುದ್ಧ ಪೋಕ್ಸೊ, ಐಪಿಸಿ ಕಲಂ 354(ಸಿ), 354(ಡಿ) ಹಾಗೂ 306, 506 ಪ್ರಕರಣಗಳು ದಾಖಲಾಗಿವೆ. ಆದರೆ, ಪ್ರಕರಣ ದಾಖಲಿಸುವಲ್ಲಿ ವಿಳಂಬವಾಗಿದ್ದಕ್ಕೆ ಹಲವು ಅನುಮಾನಗಳನ್ನು ಹುಟ್ಟಿಸಿದೆ. ಪ್ರಕರಣ ಮುಚ್ಚಿಹಾಕಲು ರಾಜಕೀಯ ಪ್ರಭಾವ ಹಾಗೂ ಕಾಣದ ಕೈಗಳ ನಿರಂತರ ಒತ್ತಡ ಇತ್ತು. ಆದರೆ, ಇದಕ್ಕೆ ಅಪ್ರಾಪ್ತೆಯ ತಂದೆ ಮಣೆಹಾಕದೆ ತನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಬಿಗಿಪಟ್ಟು ಹಿಡಿದ ಪರಿಣಾಮ ದೂರು ದಾಖಲಾಗಿ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಡೆತ್ ನೋಟ್ ಇದೆಯಾ...?:
ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಡೆತ್ ನೋಟ್ ಬರೆದಿದ್ದಳು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಾಯುವ ಮುನ್ನ ತನ್ನ ತಂದೆಗೆ ನಡೆದಿರುವ ಘಟನೆ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದಳು. ಇದು ನಿಜವೇ ಆಗಿದ್ದರೆ ಸದ್ಯ ಡೆತ್ ನೋಟ್ ಯಾರ ಬಳಿ ಇದೆ? ಅದರಲ್ಲಿ ಆಕೆ ಏನೆಲ್ಲ ಬರೆದಿದ್ದಾಳೆ? ಸದ್ಯ ಡೆತ್‌ನೋಟ್ ಪೊಲೀಸರ ವಶದಲ್ಲಿ ಇದೆಯಾ? ಎಂಬ ವಿಷಯಗಳು ಹೊರಬರಬೇಕಿದೆ.
ಇನ್ನು ದುರುಳರು ಲೈಂಗಿಕ ಕಿರುಕುಳದ ಜೊತೆಗೆ ದುಡ್ಡಿನ ಬೇಡಿಕೆಯನ್ನು ಸಹ ಇಟ್ಟಿದ್ದರು. ಮೊಬೈಲ್‌ನಲ್ಲಿ ಸಂಭಾಷಣೆ ನಡೆಸಿರುವುದು, ವಿಡಿಯೋ ಚಿತ್ರೀಕರಣದ ತುಣುಕುಗಳು, ಫೋಟೋಗಳು ಇದ್ದವು ಎಂದು ಹೇಳಲಾಗುತ್ತಿದೆ.
ಇದೇ ಕಾರಣಕ್ಕೆ ಇದೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣದ ಬಗ್ಗೆ ಎಲ್ಲ ಆಯಾಮಗಳಿಂದಲೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹುನಗುಂದ ಸಿಪಿಐ ಅವರಿಗೆ ಖಡಕ್ ಸೂಚನೆ ನೀಡಿದ್ದಾಗಿ ತಿಳಿದು ಬಂದಿದೆ.
ಕಾಮ ಪಿಪಾಸುಗಳ ಜಾಲ ಇದೆಯಾ?:
ಕೂಡಲಸಂಗಮ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಇಂತಹ ದುಷ್ಕರ್ಮಿಗಳ ಒಂದು ಜಾಲವೇ ಇದೆ ಎನ್ನುವ ಮಾತುಗಳು ಆ ಭಾಗದಲ್ಲಿ ಕೇಳಿ ಬರುತ್ತಿವೆ. ಬಾಲಕಿಯ ಆತ್ಮಹತ್ಯೆಯಿಂದ ಒಂದು ದುಷ್ಕೃತ್ಯ ಮಾತ್ರ ಬೆಳಕಿಗೆ ಬಂದಿದೆ. ಬೆಳಕಿಗೆ ಬಾರದೆ ಈ ದುರುಳರ ಅಟ್ಟಹಾಸಕ್ಕೆ ಸಿಕ್ಕು ನೊಂದಿರುವ ಇನ್ನೂ ಅನೇಕರು ಇದ್ದಾರೆ ಎನ್ನಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಪ್ರೇಮಿಗಳು ಅಲ್ಲಿನ ಏಕಾಂತದಲ್ಲಿ ಕುಳಿತು ಮಾತನಾಡುವ ವೇಳೆ ಮರೆಯಲ್ಲಿ ಇದ್ದು, ವಿಡಿಯೋ ಮಾಡುವುದು, ಬಳಿಕ ಅದನ್ನು ಇಟ್ಟುಕೊಂಡು ಅವರನ್ನು ಬೆದರಿಸುವುದು, ಲೈಂಗಿಕ ಕಿರುಕುಳ ನೀಡುವುದು ಮುಂತಾದ ಕೃತ್ಯಗಳನ್ನು ನಡೆಸುತ್ತಾರೆ. ಈ ಬಗ್ಗೆ ವಿಶೇಷ ತಂಡದ ಮೂಲಕ ತನಿಖೆ ನಡೆಸಿದಲ್ಲಿ ಜಾಲ ಪತ್ತೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ತನಿಖೆಗೆ ಆದೇಶ:
ಕೂಡಲಸಂಗಮದ ಬಾಲಕಿಯ ಆತ್ಮಹತ್ಯೆ ಪ್ರಕರಣವನ್ನು ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲು ಹುನಗುಂದ ಠಾಣೆ ಸಿಪಿಐ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿದ್ದಾರೆ.
ಘಟನೆಯಲ್ಲಿ ಇನ್ನೂ ಯಾರು ಇದ್ದಾರೆ? ಈ ಹಿಂದೆ ಏನಾದರೂ ಇಂಥ ಪ್ರಕರಣಗಳು ನಡೆದಿವೆಯೆ? ಅಲ್ಲಿಗೆ ಬರುವ ಪ್ರವಾಸಿಗರಿಗೆ ಏನಾದರೂ ತೊಂದರೆ ಆಗುತ್ತಿದೆಯಾ? ಇಂಥದ್ದೊಂದು ಜಾಲವೇನಾದರೂ ಇದೆಯಾ? ಈ ಬಗ್ಗೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಜಗಲಾಸರ್ ಸ್ಪಷ್ಟಪಡಿಸಿದ್ದಾರೆ.