

ನವೀನ್ ಬಿಲ್ಗುಣಿ ಶಿವಮೊಗ್ಗ
ಹಿಂದುಗಳ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ ಗೌರಿ-ಗಣೇಶ ಚತುರ್ಥಿಗೆ ಶಿವಮೊಗ್ಗ ಸಜ್ಜಾಗುತ್ತಿದೆ. ಕಳೆದ ಎರಡ್ಮೂರು ತಿಂಗಳಿಂದ ಮೂರ್ತಿಗಳ ತಯಾರಿಯೂ ಭರದಿಂದ ಸಾಗಿದೆ. ಈ ನಡುವೆ ಉತ್ತರ ಕರ್ನಾಟಕ ಭಾಗದಿಂದ ಗಣೇಶ ಮೂರ್ತಿಗಳನ್ನು ವ್ಯಾಪಾರಿಗಳು ತಂದು ಮಾರಾಟಕ್ಕೆ ಅಣಿಯಾಗಿರುವುದು ಮೂಲ ಕಲಾವಿದರ ಬದುಕನ್ನು ಅತಂತ್ರಗೊಳಿಸುತ್ತಿದೆ.
ಜಿಲ್ಲಾದ್ಯಂತ ಗಣೇಶ ಮೂರ್ತಿ ತಯಾರಿಕೆಯ ನೂರಾರು ಕಲಾವಿದರ ಕುಟುಂಬಗಳಿವೆ. ಶಿವಮೊಗ್ಗ ನಗರವೊಂದರಲ್ಲೇ 30ರಿಂದ 40 ಕುಟುಂಬಗಳು ಇದೇ ವೃತ್ತಿ ಮಾಡುತ್ತಿವೆ. ಇದೀಗ ಮೂಲ ಕಲಾವಿದರ ಸಂಖ್ಯೆಯೂ ಗಣನೀಯವಾಗಿ ಕುಸಿಯುತ್ತಿದೆ. ಸಿದ್ಧವಾಗಿರುವ ಮೂರ್ತಿಗಳನ್ನು ತಂದು ಮಾರಾಟ ಮಾಡುವುದನ್ನೇ ಕೆಲವರು ಕಾಯಕವನ್ನಾಗಿಸಿಕೊಂಡಿದ್ದು ಮೂಲ ಕಲಾವಿದರು ಮತ್ತು ವ್ಯಾಪಾರಿಗಳ ನಡುವೆ ಪೈಪೋಟಿ ಏರ್ಪಡುವಂತೆ ಮಾಡಿದೆ.
ಬಹುತೇಕ ಕಲಾವಿದರು ಶಿವಮೊಗ್ಗ ತಾಲೂಕಿನ ಹಾರನಹಳ್ಳಿ, ಕೋಟೆಗಂಗೂರು ಭಾಗದಲ್ಲಿ ಸಿಗುವ ಜೇಡಿಮಣ್ಣನ್ನು ತಂದು ಮೂರ್ತಿ ಸಿದ್ಧಪಡಿಸುತ್ತಾರೆ. ಇತ್ತ ವ್ಯಾಪಾರಿಗಳು ಗಣೇಶ ಹಬ್ಬ ಕೆಲವೇ ದಿನಗಳು ಇರುವಾಗ ಹೊರ ಜಿಲ್ಲೆಗಳಿಂದ ಮೂರ್ತಿಗಳನ್ನು ತಂದು ಬೇಕಾಬಿಟ್ಟಿಯಾಗಿ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದು ಎರಡ್ಮೂರು ತಿಂಗಳು ಶ್ರಮ ಹಾಕಿ ಮೂರ್ತಿಗಳನ್ನು ತಯಾರು ಮಾಡುತ್ತಿರುವ ಮೂಲ ಕಲಾವಿದರ ದುಡಿಮೆಗೆ ಪೆಟ್ಟು ನೀಡುತ್ತಿದೆ.
ಅಚ್ಚೊತ್ತಿದ ಮೂರ್ತಿಗಳು ಜಿಲ್ಲೆಗೆ ಲಗ್ಗೆ: ಈ ಹಿಂದೆ ಮೂರ್ನಾಲ್ಕು ತಿಂಗಳ ಮೊದಲೇ ಗಣೇಶ ಮೂರ್ತಿಗಳನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಒಂದೇ ದಿನಕ್ಕೆ ಮೂರ್ನಾಲ್ಕು ಮೂರ್ತಿಗಳು ರೆಡಿಯಾಗುತ್ತಿವೆ. ಅಚ್ಚೊತ್ತಿದ ಮೂರ್ತಿಗಳನ್ನು ಹೊರ ಜಿಲ್ಲೆಗಳಿಂದ ತಂದು ಮನಸ್ಸೋ ಇಚ್ಛೆಯಂತೆ ದರ ನಿಗದಿಪಡಿಸಿ ಮಾರಾಟ ಮಾಡುತ್ತಿದ್ದಾರೆ. ವಿಶೇಷವಾಗಿ ಬೆಳಗಾವಿ ಜಿಲ್ಲೆ ಗೋಕಾಕದಿಂದ ನೂರಾರು ಮೂರ್ತಿಗಳನ್ನು ತರಿಸಲಾಗುತ್ತಿದೆ. ಮೂರರಿಂದ ಐದು ಅಡಿವರೆಗಿನ ಮೂರ್ತಿಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಲು ಸಜ್ಜಾಗಿದ್ದಾರೆ. ಕೈಯಿಂದ ಮಾಡಿದ ಒಂದಡಿ ಮೂರ್ತಿಗಳಿಗೆ ಕಲಾವಿದರು 700-800 ರೂ. ದರ ನಿಗದಿ ಮಾಡಿದರೆ, ಅಚ್ಚೊತ್ತಿದ ಮೂರ್ತಿಗಳನ್ನು ಶಿವಮೊಗ್ಗದ ಮೀನಾಕ್ಷಿ ಭವನ, ಚೀಲೂರು, ಕುಂಸಿ, ಹಾರನಹಳ್ಳಿ, ಶಿಕಾರಿಪುರ ತಾಲೂಕಿನ ಹಿತ್ಲ, ಕಲ್ಮನೆ ಸೇರಿದಂತೆ ಹಲವೆಡೆ ಇರಿಸಿ 400-500 ರೂ.ಗೆ ಮಾರಾಟ ಮಾಡುತ್ತಾರೆ. ಇದು ಮೂಲ ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ.
ಅಂತಿಮ ಹಂತಕ್ಕೆ ಹಿಂದು ಮಹಾಗಣಪತಿ ಮೂರ್ತಿ
ಕೋಟೆ ರಸ್ತೆಯ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳುವ ಪ್ರತಿಷ್ಠಿತ ಹಿಂದು ಮಹಾಸಭಾ ಗಣಪತಿ ಮೂರ್ತಿಯು ಕುಂಬಾರಗುಂಡಿಯ ಜಿ.ಗಣೇಶಪ್ಪ ಅವರ ಮನೆಯಲ್ಲಿ ಸಿದ್ಧಗೊಳ್ಳುತ್ತಿದೆ. ಐದು ಅಡಿ ಎತ್ತರದ ಮೂರ್ತಿಯನ್ನು ಗಣೇಶಪ್ಪ ಕುಟುಂಬವು ಕಳೆದ ಎರಡ್ಮೂರು ತಿಂಗಳಿಂದ ನಿರ್ಮಾಣ ಮಾಡುತ್ತಿದೆ. ಬಹುತೇಕ ಅಂತಿಮ ರೂಪಕ್ಕೆ ಬಂದಿದೆ. 1947ರಲ್ಲಿ ಮೊದಲ ಬಾರಿಗೆ ಗಣೇಶಪ್ಪ ಅವರ ಅಜ್ಜ ಜಿ.ಎನ್.ನಂಜುಂಡಪ್ಪ ಅವರು ಮೊದಲ ಬಾರಿಗೆ ಹಿಂದು ಮಹಾಸಭಾ ಗಣಪತಿ ಮೂರ್ತಿಯನ್ನು ನಿರ್ಮಾಣ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಅದೇ ಕುಟುಂಬ ಮೂರ್ತಿ ನಿರ್ಮಾಣ ಮಾಡುತ್ತಿರುವುದು ವಿಶೇಷ. ನಂಜುಂಡಪ್ಪ ಅವರು 1972ರವರೆಗೆ ಮೂರ್ತಿ ನಿರ್ಮಿಸಿದರೆ ನಂತರ ಮೊಮ್ಮಗ ಜಿ.ಗಣೇಶಪ್ಪ ಅವರು ಹಿಂದೂ ಮಹಾಸಭಾ ಗಣಪತಿಯನ್ನು ಸಿದ್ಧಪಡಿಸಿಕೊಡುತ್ತಿದ್ದಾರೆ. ಪತ್ನಿ ರೇಣುಕಾ, ಪುತ್ರಿಯರಾದ ನಯನಾ ಮತ್ತು ಐಶ್ವರ್ಯಾ ಅವರಿಗೆ ಸಾಥ್ ನೀಡುತ್ತಿದ್ದಾರೆ.
ಆಟೋ ಚಾಲಕ, ಸಹೋದರರ ಕಮಾಲ್
ಬಿಬಿ ಸ್ಟ್ರೀಟ್‌ನಲ್ಲಿ ಆಟೋ ಚಾಲಕ ಸಹೋದರರಿಬ್ಬರು ಗಣೇಶ ಮೂರ್ತಿಗಳನ್ನು ಮಾಡುವ ಮೂಲಕ ವೃತ್ತಿ ಜತೆಗೆ ಪೂರ್ವಿಕರು ಮಾಡುತ್ತಿದ್ದ ಕಾಯಕವನ್ನೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಬಿಬಿ ಸ್ಟ್ರೀಟ್‌ನ ಆಟೋ ಚಾಲಕರಾದ ಗಣೇಶ್ ಮತ್ತು ಮಹೇಶ್ ಎರಡು ಅಡಿವರೆಗಿನ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಸ್ಕೂಲ್ ಟ್ರಿಪ್ ಮುಗಿಸಿ ಬಿಡುವಿನ ವೇಳೆಯಲ್ಲಿ ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ. ಅಜ್ಜ, ತಂದೆಯ ಕಾಲದಿಂದಲೂ ಮೂರ್ತಿಗಳನ್ನು ಮಾಡುತ್ತಿದ್ದು ಅದನ್ನು ಮೂರನೇ ತಲೆಮಾರಿಗೂ ಸಹೋದರರಿಬ್ಬರು ವಿಸ್ತರಿಸಿದ್ದಾರೆ.
ಎರಡ್ಮೂರು ತಿಂಗಳಿಂದ ಮೂರ್ತಿಗಳನ್ನು ನಿರ್ಮಿಸುತ್ತಿದ್ದೇವೆ. ಈಗಾಗಲೇ ಏಳೆಂಟು ಆರ್ಡರ್ ಬಂದಿವೆ. ಸಣ್ಣದು ಸೇರಿ 200 ಮೂರ್ತಿಗಳನ್ನು ಮಾಡುತ್ತೇವೆ. ಹಿಂದು ಮಹಾಸಭಾ ಗಣಪತಿಯನ್ನು ನಮ್ಮ ಕುಟುಂಬವೇ ಪ್ರತಿ ವರ್ಷ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಆದರೆ ಇತ್ತೀಚಿನ ದಿನಗಳಲ್ಲಿ ಅಚ್ಚೊತ್ತಿದ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಿರುವುದು ಮೂಲ ಕಲಾವಿದರ ಆದಾಯಕ್ಕೆ ಕುತ್ತು ತರುತ್ತಿದೆ. ಅದಕ್ಕೆ ಕಡಿವಾಣ ಹಾಕಬೇಕಿದೆ.- ಜಿ.ಗಣೇಶಪ್ಪ, ಮೂರ್ತಿ ಕಲಾವಿದ, ಕುಂಬಾರಗುಂಡಿ