ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳ ಪಟ್ಟಿ ಬಹಿರಂಗ

karnataka-lokayukta
Published on

ಬೆಂಗಳೂರು: ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳ ವಿವರವನ್ನು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.
ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ಲೋಕಾಯುಕ್ತವು ಆಸ್ತಿ ವಿವರ ಸಲ್ಲಿಸಿದ ಕರ್ನಾಟಕದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಪಟ್ಟಿಯನ್ನು ಬಹಿರಂಗಪಡಿಸಿದೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆ ಪ್ರಕಾರ ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸದಿದ್ದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಆಯ್ಕೆಯಾದ ಮೂರು ತಿಂಗಳೊಳಗೆ ಸದಸ್ಯರು ತಮ್ಮ ಆಸ್ತಿ ವಿವರನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂಬ ನಿಯಮ ಇದೆ. ಆದರೆ ಹಲವು ಶಾಸಕರು ಹಾಗೂ ಪರಿಷತ್ ಸದಸ್ಯರು ಇದುವರೆಗೂ ಲೋಕಾಯುಕ್ತ ಕಚೇರಿಗೆ ಆಸ್ತಿ ವಿವರವನ್ನು ಸಲ್ಲಿಸಿಲ್ಲ. ಇದೀಗ ಅಂತಿಮವಾಗಿ ಲೋಕಾಯುಕ್ತ ಆಸ್ತಿ ವಿವರ ಸಲ್ಲಿಸದ ಶಾಸಕರುಗಳ ಹೆಸರುಗಳ ಪಟ್ಟಿಯನ್ನು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಕಳೆದ ಬಾರಿ ಸಚಿವರಾಗಿದ್ದ ಶ್ರೀರಾಮುಲು, ಕೆ.ಸಿ.ನಾರಾಯಣಗೌಡ, ಎಸ್.ಅಂಗಾರ ಆಸ್ತಿ ವಿವರ ಸಲ್ಲಿಸದೇ ನಿಮಯ ಉಲ್ಲಂಘಿಸಿದ್ದರು. ಈ ಬಾರಿ ಸಚಿವರಾದ ರಹೀಂಖಾನ್, ಕೆ.ಎನ್.ರಾಜಣ್ಣ, ಜಮೀರ್ ಅಹಮದ್ ಖಾನ್, ರಾಮಲಿಂಗಾ ರೆಡ್ಡಿ, ಕೆ.ಎಚ್.ಮುನಿಯಪ್ಪ ಅವರು ಸಹ ಆಸ್ತಿ ವಿವರ ಸಲ್ಲಿಸಿಲ್ಲ. ಹೀಗೆ ಕಳೆದ ವಿಧಾನಸಭೆ ಅವಧಿಯಲ್ಲಿ ೮೧ ಮಂದಿ ಶಾಸಕರಿಂದ ಆಸ್ತಿ ವಿವರ ಸಲ್ಲಿಸದೇ ಲೋಪ ಎಸಗಿದ್ದಾರೆ.
ಈ ಬಾರಿ ಅಂದರೆ ೨೦೨೩ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಅವಧಿಯ ೫೧ ಮಂದಿ ಶಾಸಕರ ಆಸ್ತಿ ವಿವರ ಸಲ್ಲಿಕೆಯಾಗಿಲ್ಲ. ಹಾಗೇ ೨೧ ವಿಧಾನ ಪರಿಷತ್ ಸದಸ್ಯರು ಸಹ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ. ಇನ್ನು ಸಚಿವ ಮಧು ಬಂಗಾರಪ್ಪ ಹಾಗೂ ಮಾಜಿ ಸಚಿವ ಮುರಿಗೇಶ್ ನಿರಾಣಿ ಸೇರಿ ಹಲವರು ಗಡುವು ಮುಗಿದ ಅಂದರೆ ಜೂನ್ ೩೦ ರ ಬಳಿಕ ಆಸ್ತಿ ವಿವರ ಸಲ್ಲಿಕೆ ಮಾಡಿದ್ದಾರೆ. ಅವಧಿ ಮುಗಿದ ಬಳಿಕ ೧೦ ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯ ಆಸ್ತಿ ವಿವರ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲಾ ೨೨೪ ಶಾಸಕರಿಗೂ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಅವರು ಜೂನ್ ೩೦ ರವರೆಗೆ ಗಡುವು ನೀಡಿದ್ದರು. ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಎಲ್ಲಾ ಪಕ್ಷದ ಶಾಸಕರ ಆಸ್ತಿ ವಿವರ ಪಡೆದು ಸಲ್ಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಮೌಖಿಕ ಸೂಚನೆ ನೀಡಿದ್ದರು.
ಕಳೆದ ಬಾರಿ ಆಸ್ತಿ ವಿವರ ಸಲ್ಲಿಸಿದ್ದೇವೆಂದು ಸುಮ್ಮನಿರುವಂತಿಲ್ಲ. ಪುನರ್ ಆಯ್ಕೆಯಾದ ಶಾಸಕರು ಮತ್ತೊಮ್ಮೆ ಆಸ್ತಿ ವಿವರ ಸಲ್ಲಿಸಬೇಕು. ಮೊದಲ ಬಾರಿ ಆಯ್ಕೆಯಾದ ಶಾಸಕರು ಕೂಡ ಆಸ್ತಿ ವಿವರ ಸಲ್ಲಿಸಬೇಕು. ಒಂದು ವೇಳೆ ಜೂ.೩೦ರೊಳಗೆ ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಸದಿದ್ದರೆ ಶಿಸ್ತು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಏನಿದು ನಿಯಮ?:
ಕರ್ನಾಟಕ ಲೋಕಾಯುಕ್ತ ಕಾಯಿದೆ ೧೯೮೪ರ ಕಲಂ ೨೨(೧), ಕಲಂ ೭ರ ಉಪಕಲಂ (೧)ರಂತೆ ಸರ್ಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕರ ನೌಕರ ಈ ಕಾಯಿದೆಯಂತೆ, ಈ ಅಧಿನಿಯಮ ಜಾರಿಗೆ ಬಂದ ಮೂರು ತಿಂಗಳೊಳಗೆ ಮತ್ತು ಜೂನ್‌ಗಿಂತ ಮುಂಚಿತವಾಗಿ ಪ್ರತಿ ವರ್ಷವೂ ಪ್ರತಿ ವರ್ಷ ತನ್ನ ಮತ್ತು ಕುಟುಂಬದ ಸದಸ್ಯರ ಆಸ್ತಿ ವಿವರಗಳನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕೆಂಬ ನಿಯಮವಿದ್ದು ಅದು ಕಡ್ಡಾಯವಾಗಿದೆ.
ಒಂದು ವೇಳೆ ಆಸ್ತಿ ವಿವರ ಸಲ್ಲಿಸದಿದ್ದಲ್ಲಿ ಸಾರ್ವಜನಿಕ ಸೇವಕರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಕ್ಷಮ ಪ್ರಾಧಿಕಾರ (ರಾಜ್ಯಪಾಲರು) ವರದಿ ಸಲ್ಲಿಸಬೇಕು. ಅಂತಹ ಶಾಸಕರ ಹೆಸರುಗಳನ್ನು ರಾಜ್ಯದಾದ್ಯಂತ ಪ್ರಸರಣ ಹೊಂದಿರುವ ಮೂರು ದಿನಪತ್ರಿಕೆಗಳಲ್ಲಿ ಪ್ರಕಟಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net