

ಡಾ. ಯೋಗೀಶ ಕೈರೋಡಿ
ಪ್ರತಿಯೊಬ್ಬ ದಾರ್ಶನಿಕನ ಅವತಾರಕ್ಕೂ ಅವ್ಯಕ್ತ ಕಾರಣಗಳಿರುತ್ತವೆ. ಬ್ರಹ್ಮಶ್ರೀ ನಾರಾಯಣಗುರುಗಳು ಪರಿಶ್ರಮದ ಮೂಲಕ ಸಿದ್ಧಿ ಸಂಪಾದಿಸಿದವರು. ಕೇರಳದ ಚೆಂಬಳಂತಿ ಎಂಬಲ್ಲಿ ಸಂಸ್ಕಾರವಂತ ರೈತಾಪಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಮಾಡಾನ್ ಆಶಾನ್ ಜ್ಯೋತಿಷ್ಯ, ಆಯುರ್ವೆದ ಬಲ್ಲ ಶಾಲಾ ಶಿಕ್ಷಕರು. ರಾಮಾಯಣ ಮಹಾಭಾರತ ಪ್ರವಚನ ಪ್ರವೀಣರು. ಮಾವ ಕೃಷ್ಣ ವೈದ್ಯರ್ ಮಲಯಾಳ-ಸಂಸ್ಕೃತ ವಿದ್ವಾಂಸ, ಆಯುರ್ವೆದ ಪಂಡಿತ. ಗುರುಗಳ ಅಜ್ಜಿ ಕೋಚನ್ ಸಂಸ್ಕೃತದಲ್ಲಿ ಪಾಂಡಿತ್ಯವುಳ್ಳ ದೈವಭಕ್ತೆ. ಇಂತಹ ಪರಿಸರದಲ್ಲಿ ಬೆಳೆದ ನಾರಾಯಣಗುರು ಅವರಿಗೆ ಸಮಾಜದಲ್ಲಿದ್ದ ಅಸ್ಪಶ್ಯತೆ, ಅಂಧಶ್ರದ್ಧೆ ವಿಚಿತ್ರವೆನಿಸಿದವು. ಕುಟುಂಬದಲ್ಲಿ ಸಂಭವಿಸಿದ ಸಾವು-ನೋವುಗಳನ್ನು ನೋಡಿ ಅವರ ಮನಸ್ಸು ವೈರಾಗ್ಯದತ್ತ ವಾಲಿತು. ವಾರಣಾಪಳ್ಳಿಯ ರಾಮನ್ ಪಿಳ್ಳೆ ಅವರಲ್ಲಿ ಸಂಸ್ಕೃತಾಭ್ಯಾಸ. ತೃಕಾಡ್ ಅಯ್ಯಸ್ವಾಮಿಯಿಂದ ಯೋಗಾಭ್ಯಾಸ. ಹೀಗೆ ಲೌಕಿಕ, ಆಧ್ಯಾತ್ಮಿಕ ಶಿಕ್ಷಣ ಪಡೆಯುತ್ತ ‘ನಾಣು’ ಎಂಬ ಈ ಬಾಲಕ ಜನಮಾನಸದಲ್ಲಿ ನಾರಾಯಣಗುರುವಾದ ಬಗೆ ರೋಚಕ. ಗುರುಗಳು ಶಿಕ್ಷಣವಂಚಿತ ತಳ ಸಮುದಾಯಗಳಿಗೆ ಅಕ್ಷರಾಭ್ಯಾಸ ಕಲಿಸಿದರು. ನೋವುಂಡವರನ್ನು ಕರುಣೆಯ ಕಣ್ಣುಗಳಲ್ಲಿ ಕಂಡು ನೆರವಾದರು. 1500 ಅಡಿ ಎತ್ತರದ ಮರುತ್ವಮಲೆಯಲ್ಲಿ ದೀರ್ಘಕಾಲ ಕಠಿಣ ತಪಸ್ಸಿನಲ್ಲಿ ನಿರತರಾಗಿ ಲೋಕ ಬೆಳಗಿಸುವ ಬೆಳಕನ್ನು ಪಡೆದರು. ಸಮಾಜ ಪರಿವರ್ತನೆಯ ಶಕ್ತಿಯನ್ನು ಕಠಿಣ ಶ್ರಮದಿಂದ ಸಂಪಾದಿಸಿ ಕತ್ತಲೆಯ ನಾಡಿಗೆ ಬೆಳಕು ಚೆಲ್ಲಿದರು.
‘ಕಳೆದುಕೊಂಡಲ್ಲೇ ಹುಡುಕಬೇಕು’ ಎಂಬಂತೆ ಅರವಿಪುರಂನಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಹೊಸ ಚಳವಳಿಗೆ ನಾಂದಿ ಹಾಡಿದರು. ಚಿದಂಬರ ಕ್ಷೇತ್ರದಲ್ಲಿ ಜ್ಞಾನದ ಸಂಕೇತವಾದ ದೀಪ ಹಚ್ಚಿ ಆ ದೀಪವನ್ನೇ ಪ್ರತಿಷ್ಠಾಪಿಸಿದರು. ಶಕ್ತೀಶ್ವರ ಕ್ಷೇತ್ರದಲ್ಲಿ ‘ಓಂ ಶಾಂತಿ’ ಎಂದು ಬರೆದ ಕನ್ನಡಿಯನ್ನು ದೇವರ ಮೂರ್ತಿ ಜತೆಗೆ ಪ್ರತಿಷ್ಠಾಪಿಸಿ ‘ನಿನ್ನಲ್ಲೇ ದೇವರನ್ನು ನೋಡು’ ಎಂಬ ಸಂದೇಶ ಸಾರಿದರು.
ಸಂಘರ್ಷವಲ್ಲ, ಸಮನ್ವಯ: ಗುರುಗಳ ಜೀವನ - ಸಂದೇಶದಲ್ಲಿ ಸಂಘರ್ಷಕ್ಕೆ ಆಸ್ಪದವಿಲ್ಲ. ‘ಧರ್ಮ’ ಇರುವುದು ‘ವಾದಿಸಲಿಕ್ಕೂ ಅಲ್ಲ. ವಾದಿಸಿ ಗೆಲ್ಲುವುದಕ್ಕೂ ಅಲ್ಲ’ ಎಂಬ ನಿಲುವು ಅವರದು. ತಳವರ್ಗಕ್ಕೆ ಪ್ರವೇಶವಿಲ್ಲದ ದೇವಾಲಯಗಳ ವಿರುದ್ಧ ಸಂಘರ್ಷಕ್ಕೆ ಇಳಿಯಲಿಲ್ಲ. ತಾವೇ ದೇವಾಲಯ ಕಟ್ಟಿದರು. ಗಂಭೀರ ಸಮಸ್ಯೆಯನ್ನು ಸರಳವಾಗಿಸಿದರು. ಒಂದು ವ್ಯವಸ್ಥೆಯಿಂದ ಹೊರಬರುವಂತೆ ಕರೆ ಕೊಡಲಿಲ್ಲ. ವ್ಯವಸ್ಥೆಯ ವಿರುದ್ಧವೂ ನಿಲ್ಲಲಿಲ್ಲ. ವ್ಯವಸ್ಥೆಯನ್ನು ಪರಿಷ್ಕರಿಸುವ ಉನ್ನತ ದಾರಿ ಕಂಡುಕೊಂಡರು. ಆರೋಗ್ಯಪೂರ್ಣ ಜೀವನಕ್ಕೆ ಬೇಕಾದ ಚಿಕ್ಕ ಕುಟುಂಬ, ಸರಳ ಆರಾಧನಾ ಪದ್ಧತಿ, ಸರಳ ವಿವಾಹ, ದುಶ್ಚಟಮುಕ್ತ ಜೀವನ, ಗರ್ಭಿಣಿ ಆರೋಗ್ಯ, ಶಿಶುಗಳ ಆರೈಕೆ, ದೇವಾಲಯದ ಸುತ್ತ ಗಿಡಮರ, ಗುಡಿ ಕೈಗಾರಿಕೆ, ಶಿಕ್ಷಣ ಸಂಸ್ಥೆ, ತ್ರಿಭಾಷೆಗಳ ಮಹತ್ವ ಹೀಗೆ ಜೀವನಮುಖಿ ಸಂದೇಶ ನೀಡಿದರು. ಸಾಮಾಜಿಕ ವ್ಯವಸ್ಥೆಯಲ್ಲಿರುವ ಅಸಮಾನತೆ ಮತ್ತಿತರ ವಿಕಾರಗಳಿಂದ ಮಾನವಕುಲವನ್ನು ಪಾರು ಗೊಳಿಸುವುದಕ್ಕೆ ಉದ್ಯೋಗ, ಶಿಕ್ಷಣದ ಕಡೆಗೆ ನೋವುಂಡ ಸಮುದಾಯಗಳು ತೆರೆದುಕೊಳ್ಳಬೇಕಾಗಿದೆ. ಸಂಘಟಿತರಾಗ ಬೇಕಿದೆ. ಶಿಕ್ಷಣ ಪಡೆದು ಆರ್ಥಿಕ ಸ್ವಾವಲಂಬನೆ ಪಡೆಯಬೇಕಿದೆ. ಮೂಢನಂಬಿಕೆ, ದುಶ್ಚಟ, ದುಂದು ನಿವಾರಿಸಲು ಸಂಘಟನೆಗಳು ಕಾರ್ಯಪ್ರವೃತ್ತವಾಗಬೇಕಿದೆ ಎಂಬುದು ಗುರುಗಳ ಅಚಲ ಆಶಯ. ಸ್ವಾಭಿಮಾನದ ಬದುಕನ್ನು ಸಂಘಟನೆ ಮೂಲಕ ರೂಪಿಸುವುದಕ್ಕೆ ಗುರುಗಳು ದಾರಿ ತೋರಿಸಿದರು.
ಇದುವೇ ಮೌನಕ್ರಾಂತಿ!: ವಿಘಟನೆಗಾಗಲಿ ಅನ್ಯದ್ವೇಷಕ್ಕಾಗಲಿ ಗುರುಚಿಂತನೆಯಲ್ಲಿ ಜಾಗವಿಲ್ಲ. ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದ ಗೊಂದಲಗಳಿಗೆ ಸಂಘರ್ಷದ ದಾರಿ ಹಿಡಿಯಲಿಲ್ಲ. ಪ್ರವೇಶಕ್ಕೆ ಅವಕಾಶವಿಲ್ಲದವರಿಗೆ ದೇವಾಲಯ ನಿರ್ವಿುಸಿ ಸ್ವತಃ ದೇವರ ಪ್ರತಿಷ್ಠಾಪನೆ ಕಾರ್ಯ ಕೈಗೊಂಡರು. ‘ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು’ ಎಂಬ ಸಂದೇಶ ಬಿತ್ತಿದರು. ಇದು ಮೇಲ್ನೋಟಕ್ಕೆ ಸರಳವೆನಿಸಿದರೂ ಉಪನಿಷತ್ತಿನ ಅಧ್ಯಯನ ಮತ್ತು ಧ್ಯಾನದ ಮೂಲಕ ಕಂಡುಕೊಂಡ ಸತ್ಯ. ಆತ್ಮ- ಪರಮಾತ್ಮ ಪ್ರತ್ಯೇಕವಲ್ಲ ಎಂಬ ಅದ್ವೈತ ತತ್ವದಲ್ಲಿ ಗುರುಗಳು ನಂಬಿಕೆ ಇರಿಸಿದವರು. ಉಪನಿಷತ್ತಿನ ಮೂಲತತ್ವ ಪುರಸ್ಕರಿಸುತ್ತ ಹೊಸ ಆಯಾಮಗಳೊಂದಿಗೆ ‘ದರ್ಶನ ಮಾಲಾ’ ಎಂಬ ಕೃತಿ ರಚಿಸಿದರು. ಸಮಾಜದಲ್ಲಿ ಸಂಸ್ಕೃತಿಯ ನೆಲೆಯಲ್ಲಿ ಬಹುಭಾಷೆ ಬಹುಧರ್ಮ ಬಹುಜಾತಿಗಳಿವೆ. ಅಧ್ಯಾತ್ಮದ ದೃಷ್ಟಿಯಿಂದ ಎಲ್ಲರೂ ಸಮಾನರು. ‘ದೇವರೂ ಒಬ್ಬನೇ’ ಎಂದು ಸಾರಿದರು.
ವರ್ತಮಾನದಲ್ಲಿ ನಾರಾಯಣಗುರು: ಕೇರಳದಲ್ಲಿ ನಾರಾಯಣಗುರುಗಳ ತತ್ವ ಚಳವಳಿ ರೂಪ ಪಡೆದು ದೇವಾಲಯಗಳ ಸ್ಥಾಪನೆಯಲ್ಲಿ ನಿಲ್ಲದೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಪ್ರೇರಣೆಯಾಗಿ, ಹೆಚ್ಚು ಮಂದಿ ವಿದ್ಯಾವಂತರಾಗುವುದಕ್ಕೆ ಕಾರಣವಾಯಿತು. ಕರ್ನಾಟಕದ ಕರಾವಳಿಗೆ ನಾರಾಯಣಗುರುಗಳ ಪ್ರವೇಶದ ಮೂಲಕ ಬಹುಸಂಖ್ಯೆಯ ಜನಸಮುದಾಯಕ್ಕೆ ತಮ್ಮದೇ ಆದ ದೇವಾಲಯ ಹಾಗೂ ಪೂಜೆ ಮಾಡುವ ಸ್ವಾತಂತ್ರ್ಯ ಲಭಿಸಿದೆ. ಗುರುಮಂದಿರಗಳನ್ನು ನಿರ್ವಿುಸುವ ಮೂಲಕ ಗುರುವಿಗೆ ಕೃತಜ್ಞತೆಯ ಗೌರವ ಸಮರ್ಪಣೆಯಾಗಿದೆ. ಸರಳ ವಿವಾಹ, ವ್ಯಸನಮುಕ್ತ ಸಮಾಜ ನಿರ್ಮಾಣ ಮೊದಲಾದ ಗುರುಗಳ ಆಶಯದ ವಿಷಯದಲ್ಲಿ ಜಾಣಮೌನ ತಳೆದಂತೆ ಕಾಣುತ್ತದೆ. ಗುರುಗಳ ಆರಾಧನೆ ನಡೆಯುತ್ತಿದೆ. ಸುಂದರ ಮಂದಿರದಲ್ಲಿ ಪ್ರಶಾಂತವಾದ ಗುರುಮೂರ್ತಿಗೆ ಪೂಜೆ ನಡೆಯುತ್ತಿದೆ.
ಒಂದೂವರೆ ಶತಮಾನದ ಹಿಂದಿನ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಸಮಕಾಲೀನರಾದ ನಾರಾಯಣ ಗುರುಗಳು ದೇವರಾಗಿದ್ದಾರೆ. ಇದು ಈ ಗುರುಗಳಿಗೆ ಸಲ್ಲಿಸಿದ ಗೌರವ. ಆದರೆ ಇಷ್ಟಕ್ಕೆ ಸೀಮಿತಗೊಳಿಸುವುದು ಗುರುಗಳಿಗೆ ಮಾಡುವ ಅವಮಾನ. ಅವರ ಉನ್ನತ ಆದರ್ಶಗಳನ್ನು ವರ್ತಮಾನದ ಅಗತ್ಯಗಳಿಗೆ ಅನುಸಾರವಾಗಿ ಅನುಷ್ಠಾನಗೊಳಿಸುವುದು ಗುರುಗಳಿಗೆ ಸಲ್ಲಿಸುವ ನಿಜವಾದ ಮಹಾಪೂಜೆ. ಹೃದಯ ಮಂದಿರದಲ್ಲಿ ಗುರುವಿಗೆ ಸ್ಥಾನ ನೀಡಬೇಕು. ‘ವಿದ್ಯೆಯಿಂದ ಸ್ವತಂತ್ರರಾಗಿ’ ಎಂಬ ಮಾತಿನ ವ್ಯಾಪ್ತಿಯನ್ನು ಹಿಗ್ಗಿಸಬೇಕಾಗಿದೆ. ಅದರರ್ಥ ‘ಶಿಕ್ಷಣ’ ಮತ್ತು ‘ಉದ್ಯೋಗ’ಮಾತ್ರ ಅಲ್ಲ. ಮಾರುಕಟ್ಟೆ ಜಗತ್ತು ಎಲ್ಲವನ್ನೂ ನಿಯಂತ್ರಿಸುತ್ತಿದೆ. ಮನಸ್ಸು ಸಾಮಾಜಿಕ ಜಾಲತಾಣಗಳ ಸುಳಿಯಲ್ಲಿ ಒದ್ದಾಡುತ್ತಿವೆ. ಸ್ವತಂತ್ರ ಆಯೋಚನೆ ಮಾತ್ರ ನಮ್ಮನ್ನು ಕಾಪಾಡಬಹುದು. ಪಕ್ಷಪಾತಿಗಳ ದಾಸರಾಗದಂತೆ ತಡೆಯಬಹುದು. ಗುರುಗಳ ಸಂದೇಶ ಬೆಳಕಿನಲ್ಲಿ ವರ್ತಮಾನದ ಬಹು ಬಗೆಯ ಕತ್ತಲೆಯಿಂದ ಪಾರಾಗಬಹುದು.
(ಲೇಖಕರು ಪ್ರಾಧ್ಯಾಪಕರು ಹಾಗೂ ವಾಗ್ಮಿ)