ನ್ಯಾಯದಾನದ ಬೆಳಕು; ಭರವಸೆ ತಂದ ಹೊಸ ಕಾನೂನುಗಳು

Law
Published on

ಸಂಸತ್​ನ ಅಂಗೀಕಾರ ಪಡೆದ ಮೂರು ಹೊಸ ಕ್ರಿಮಿನಲ್ ಕಾನೂನು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುಮು ಸೋಮವಾರ ಅಂಕಿತ ಹಾಕಿದ್ದಾರೆ. ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರಿಕ ರಕ್ಷಣಾ ಸಂಹಿತೆ-2023 ಮತ್ತು ಭಾರತೀಯ ಸಾಕ್ಷ ್ಯ ಮಸೂದೆಗೆ ರಾಷ್ಟ್ರಪತಿಗಳ ಅಂಕಿತದ ಮೂಲಕ ಅವು ಈಗ ಕಾನೂನಿನ ರೂಪವನ್ನು ಪಡೆದುಕೊಂಡಿವೆ.

ಬ್ರಿಟಿಷರ ಕಾಲದಲ್ಲಿ ರೂಪಿಸಲಾಗಿದ್ದ ಐಪಿಸಿ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆ- ಈ ಮೂರು ಕಾಯ್ದೆಗಳ ಜಾಗವನ್ನು ಈ ಹೊಸ ಕಾನೂನುಗಳು ತುಂಬುತ್ತವೆ. ಇದರಿಂದ, ಬ್ರಿಟನ್ನಿನ ಕಾನೂನುಗಳನ್ನು ಮಾತ್ರವಲ್ಲದೆ, ವಸಾಹತುಶಾಹಿ ಮನಸ್ಥಿತಿಯನ್ನೂ ಭಾರತದಿಂದ ತೆಗೆದುಹಾಕಿದಂತಾಗುತ್ತದೆ. ಹೊಸ ಕಾನೂನುಗಳು ನ್ಯಾಯದಾನವನ್ನು ಸುಲಲಿತವಾಗಿಸುತ್ತವೆ. ಸಂತ್ರಸ್ತರ ಹಿತರಕ್ಷಣೆಯನ್ನೇ ಗುರಿಯಾಗಿಸಿಕೊಂಡಿವೆ. ನ್ಯಾಯಾಂಗ ತಜ್ಞರು, ಚುನಾಯಿತ ಜನಪ್ರತಿನಿಧಿಗಳು, ಐಎಎಸ್-ಐಪಿಎಸ್ ಅಧಿಕಾರಿಗಳೂ ಸೇರಿದಂತೆ 3200ಕ್ಕೂ ಹೆಚ್ಚು ಜನರ ಸಲಹೆ ಪಡೆದು ಈ ಹೊಸ ಕಾನೂನುಗಳನ್ನು ರೂಪಿಸಲಾಗಿದ್ದು, ಇವುಗಳಿಂದ ದೇಶದ ನ್ಯಾಯದಾನ ವ್ಯವಸ್ಥೆ ಇನ್ನಷ್ಟು ವೇಗ ಮತ್ತು ನಿಖರತೆಯನ್ನು ಪಡೆಯುವಂತಾಗಬೇಕು.

ವೈಯಕ್ತಿಕ ಸ್ವಾತಂತ್ರ್ಯ, ಮಾನವ ಹಕ್ಕುಗಳು ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವ ಮೂರು ತತ್ವಗಳ ಆಧಾರದ ಮೇಲೆ ಹೊಸ ಕಾನೂನುಗಳನ್ನು ರಚನೆ ಮಾಡಲಾಗಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ಮೂರೂ ಕಾನೂನುಗಳನ್ನು ಮಾನವೀಯ ಆಧಾರದ ಮೇಲೆ ತಿದ್ದುಪಡಿ ಮಾಡಲಾಗಿರುವುದು ಗಮನಾರ್ಹ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಒತ್ತು ನೀಡಲಾಗಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ದೇಶದ ಭದ್ರತೆಗೆ ಸಂಬಂಧಿಸಿದ ಕಾನೂನುಗಳಿಗೆ ಆದ್ಯತೆ ನೀಡಲಾಗಿದೆ. ಸಾಮೂಹಿಕ ಹತ್ಯೆ (ಮಾಬ್ ಲಿಂಚಿಂಗ್)ಯಂಥ ಘೊರ ಅಪರಾಧಕ್ಕೆ ಹೊಸ ಕಾನೂನಿನಲ್ಲಿ ಮರಣದಂಡನೆ ವಿಧಿಸುವ ಅವಕಾಶವಿದೆ. ಸಿಆರ್​ಪಿಸಿಯಲ್ಲಿ ಸೆಕ್ಷನ್​ಗಳ ಸಂಖ್ಯೆ 484ರಿಂದ 531ಕ್ಕೆ ಏರಿಕೆಯಾಗಿದ್ದು, 177 ಸೆಕ್ಷನ್​ಗಳಲ್ಲಿ ಬದಲಾವಣೆ ಮಾಡಲಾಗಿದೆ. 9 ಹೊಸ ಸೆಕ್ಷನ್ ಮತ್ತು 39 ಉಪ ಸೆಕ್ಷನ್ ಅಳವಡಿಸಲಾಗಿದೆ.

ಆರೋಪಿಗಳಿಗೆ ಮೇಲ್ಮನವಿ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ನ್ಯಾಯಾಧೀಶರು ವಿಚಾರಣೆ ನಡೆಸಬೇಕಾಗುತ್ತದೆ. ಪ್ರಕರಣದ ವಿಚಾರಣೆಯನ್ನು ಆರಂಭಿಸಲು ಗರಿಷ್ಠ 120 ದಿನಗಳ ಕಾಲಾವಕಾಶ ನೀಡಲಾಗಿದೆ. ಮೊದಲು ಯಾವುದೇ ಸಮಯ ಮಿತಿ ಇರಲಿಲ್ಲ. ಅಪರಾಧ ಕಾನೂನಿನ ಹೊಸ ಸ್ವರೂಪ ನ್ಯಾಯಪ್ರಾಪ್ತಿ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿಸಿದ್ದು, ಮುಂಬರುವ ದಿನಗಳಲ್ಲಿ ಈ ಬದಲಾವಣೆಯ ಚಿತ್ರಣ ಸಿಗಲಿದೆ. ಕಾನೂನುಗಳ ಕೊರತೆ ನಿವಾರಿಸಿ, ಕಾಲಕಾಲಕ್ಕೆ ಅವನ್ನು ಬಲಗೊಳಿಸಿದರೆ ಮಾತ್ರ ಸಮಾಜ ಸಶಕ್ತವಾಗಬಲ್ಲದು. ತುಂಬ ಹಳೆಯ, ಅಪ್ರಸ್ತುತ ಕಾನೂನುಗಳನ್ನು ಈ ಹಿಂದೆ ರದ್ದುಪಡಿಸಿದ್ದ ಕೇಂದ್ರ ಸರ್ಕಾರ ಈಗ ಕ್ರಿಮಿನಲ್ ಕಾನೂನಿಗೆ ಹೊಸ ರೂಪ ನೀಡಿರುವುದು ಸಮಯೋಚಿತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net