

ರಾಮಾಯಣದಂತೆ ಭಾಗವತವೂ ಪಾರಾಯಣಾದಿಗಳಿಂದ ಸನ್ಮಾನ್ಯವಾಗಿರುವ ಗ್ರಂಥ. ಭಾಗವತವನ್ನು ಓದಿದರೆ ಭಕ್ತಿಯಿಲ್ಲದವರು ಭಕ್ತರಾಗುತ್ತಾರೆ: ಭಕ್ತರ ಭಕ್ತಿ ದೃಢವಾಗುತ್ತದೆ. ಅದರಿಂದ ಭಾಗವತವನ್ನು ಎಲ್ಲರೂ ಗೌರವಿಸುತ್ತಾರೆ.
‘ದೇವರು ಎಲ್ಲೆಲ್ಲೂ ಇದ್ದಾನೆ’, ‘ಎಲ್ಲವೂ ನಡೆಯುವುದು ಆತನಿಂದ’, ‘ಆತನು ತನ್ನನ್ನು ನಂಬಿದವರನ್ನು ಕೈ ಬಿಡುವುದಿಲ್ಲ’ ಎಂಬ ಈ ಸಿದ್ಧಾಂತಗಳು ಹಲವು ನಮ್ಮ ಮನೆಮಾತುಗಳಾಗಿವೆ. ಇವು ಬಹುಕಾಲದಿಂದ ಬಳಕೆಯಲ್ಲಿದ್ದು ಸವೆದ ನಾಣ್ಯಗಳಂತಾಗಿವೆ. ಭಾಗವತ ಓದಿದರೆ, ಈ ನಾಣ್ಯಗಳಿಗೆ ಹೊಸತನ ಬರುತ್ತದೆ.
ಪ್ರಹ್ಲಾದ ಚರಿತ್ರೆಯನ್ನು ಓದಿದರೆ, ‘ಹೌದು ದೇವರು ಎಲ್ಲೆಲ್ಲೂ ಇದ್ದಾನೆ. ಅದನ್ನು ಪ್ರಹ್ಲಾದನು ತಿಳಿದ. ಅದರಿಂದಲೇ ಭಾಗವತರ ಪಂಕ್ತಿಯಲ್ಲಿ ಆತನಿಗೆ ಗುರುಗಳಾದ ನಾರದರಿಗಿಂತ ಹಿರಿಯ ಸ್ಥಾನ ಬಂತು. ಈಗಲೂ ‘ಪ್ರಹ್ಲಾದ ನಾರದ ಪರಾಶರ’ ಎನ್ನುತ್ತಾರೆ’ ಎಂಬುದು ಮನಸ್ಸಿಗೆ ಹಿಡಿಯುತ್ತದೆ. ಹಾಗೆಯೇ ಧ್ರುವಚರಿತ್ರೆಯಿಂದ ‘‘ಎಲ್ಲವೂ ನಡೆಯುವುದು ಆತನಿಂದ. ಆತನ ಚೈತನ್ಯವು ಒಳಹೊಕ್ಕು ನಮ್ಮ ಮಾತನ್ನು ನುಡಿಸುತ್ತದೆ’’ ಎಂಬುದರ ಅರಿವಾಗುತ್ತದೆ.
ಅಂಬರೀಷನ ಚರಿತ್ರೆ ‘‘ಸ್ವಾಮಿಯು ತನ್ನನ್ನು ನಂಬಿದವರನ್ನು ಕೈಬಿಡುವುದಿಲ್ಲ’’ ಎಂಬ ಸಿದ್ಧಾಂತದಲ್ಲಿ ನಂಬಿಕೆಯನ್ನು ಹುಟ್ಟಿಸುತ್ತದೆ. ಹೀಗೆಯೇ ಇತರ ಚರಿತ್ರೆಗಳೂ ಮನುಷ್ಯನನ್ನು ಮೃಗದ ಮಟ್ಟದಿಂದ ಮೇಲಕ್ಕೆತ್ತಿ ಉದ್ಧಾರದ ಹಾದಿ ತೋರಿಸುತ್ತವೆ. ಅದರಿಂದ ಆಸ್ತಿಕರು ಈ ಗ್ರಂಥವನ್ನು ಪಾರಾಯಣ, ಶ್ರವಣ, ಮನನಾದಿಗಳಿಂದ ಆರಾಧಿಸುತ್ತಾರೆ.
| ದೇವುಡು ನರಸಿಂಹ ಶಾಸ್ತ್ರಿ. (‘ಸಂಗ್ರಹ ಭಾಗವತ’ದ ಪೀಠಿಕೆ)