ಐಟಿಗೆ ಕಾಡುತಿದೆ ಲೇಆಫ್ ಸಾಂಕ್ರಾಮಿಕ; ಕಂಪನಿಗಳಿಗೆ ಲಾಭ, ಉದ್ಯೋಗಿಗಳಿಗೆ ಆತಂಕ

Untitled design (2)
Published on

ಕೃತಕ ಬುದ್ಧಿಮತ್ತೆ (ಎಐ) ಬಳಕೆ ವ್ಯಾಪಕವಾಗುತ್ತಿದ್ದಂತೆ ಉದ್ಯೋಗ ನಷ್ಟದ ಪ್ರಮಾಣ ಹೆಚ್ಚುತ್ತಿರುವುದು ಹೊಸ ಆತಂಕವನ್ನು ಸೃಷ್ಟಿಸಿದೆ. ಮಾಹಿತಿ-ತಂತ್ರಜ್ಞಾನ ವಲಯದಲ್ಲಂತೂ ಲೇಆಫ್ ಸಾಂಕ್ರಾಮಿಕದಂತೆ ಹಬ್ಬಿದ್ದು, ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಈ ಹೊಸ ಸವಾಲಿಗೆ ಪರಿಹಾರವೇನು? ಮಾನವನ ಕೌಶಲ, ಸೃಜನಶೀಲತೆ ಮತ್ತು ಹೊಸ ಚಿಂತನೆಗಳಿಗೆ ಎಐ ಪರ್ಯಾಯವಾಗಲು ಸಾಧ್ಯವೇ? ಈ ಬೆಳವಣಿಗೆ ಹೀಗೆ ಮುಂದುವರಿದರೆ ಉದ್ಯೋಗರಂಗದ ಭವಿಷ್ಯವೇನು? ಈ ಕುರಿತಾದ ಸಮಗ್ರ ವಿವರ ಇಲ್ಲಿದೆ.

ಜಾಗತಿಕವಾಗಿ ಒಂದೆಡೆ ತೆರಿಗೆ ಸಮರದ ಕಾಮೋಡವು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರೆ, ಮತ್ತೊಂದೆಡೆ 2025ರ ಆರಂಭದಿಂದಲೇ ಮಾಹಿತಿ ಮತ್ತು ತಂತ್ರಜ್ಞಾನ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ವಿಪರ್ಯಾಸವೆಂಬಂತೆ ಕೃತಕ ಬುದ್ಧಿಮತ್ತೆ ಆಧಾರಿತ ಯಂತ್ರಾಂಶ, ತಂತ್ರಾಂಶ ಅಭಿವೃದ್ಧಿ ಪಡಿಸಿದ ಇಂಜಿನಿಯರ್​ಗಳು ಲೇಆಫ್ ಅಸ್ತ್ರಕ್ಕೆ ಮೊದಲು ಬಲಿಯಾಗುತ್ತಿದ್ದಾರೆ. ಟೆಕ್ ಮತ್ತು ಇ-ಕಾಮರ್ಸ್ ದೈತ್ಯ ಕಂಪನಿಗಳಾದ ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್, ಇಂಟಲ್ ಇದೇ ವರ್ಷ ಸಾವಿರಾರು ಸಿಬ್ಬಂದಿಯನ್ನು ಕೈಬಿಟ್ಟಿವೆ. ಆದರೆ, ಐಟಿ ರಂಗಕ್ಕೆ ಮತ್ತಷ್ಟು ಆಘಾತವಾಗಿದ್ದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಈ ಆರ್ಥಿಕ ವರ್ಷದಲ್ಲಿ ಸುಮಾರು 12,200 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಘೋಷಿಸಿದ ನಂತರ. ಆದರೆ, ಈ ಸಂಕಷ್ಟದ ಸರಣಿ ಇಲ್ಲಿಗೆ ಮುಗಿಯುವುದಿಲ್ಲ.

ಟಿಸಿಎಸ್ ನಿರ್ಣಯದ ನಂತರ ಇತರ ಐಟಿ ಕಂಪನಿಗಳು ಕೂಡ ಲೇಆಫ್ ನಿರ್ಧಾರ ತಳೆಯಲು ಮುಂದಾಗಿವೆ. ಎಐ ಬಂದ ಮೇಲೆ ಇಂಥ ಸ್ಥಿತಿ ಸೃಷ್ಟಿಯಾಗಲಿದೆ ಎಂಬ ಅಂದಾಜಿತ್ತು ಎಂದು ಕೆಲ ನುರಿತ ತಂತ್ರಜ್ಞರು ಪ್ರತಿಕ್ರಿಯಿಸಿದ್ದರೆ, ಈ ಬಗೆಯಲ್ಲಿ ಮಾನವ ಸಂಪನ್ಮೂಲ ಕಡಿತಗೊಳಿಸುವುದು ಭವಿಷ್ಯದಲ್ಲಿ ಕಂಪನಿಗಳಿಗೆ ಮಾರಕವಾಗಲಿದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು. ಒಟ್ಟಾರೆ ಈ ಬೆಳವಣಿಗೆಗಳು ಐಟಿ ರಂಗದ ನಿದ್ದೆಗೆಡಿಸಿದ್ದು, ಉದ್ಯೋಗ ಭದ್ರತೆ ಎಂಬುದು ಮರೀಚಿಕೆಯಾಗಿದೆ. ಅದರಲ್ಲೂ, ಇತ್ತೀಚೆಗೆ ಹೊಸದಾಗಿ ಉದ್ಯೋಗಕ್ಕೆ ಸೇರಿದ ಯುವ ಸಿಬ್ಬಂದಿ ಮತ್ತು ಇಂಟರ್ನಿಗಳನ್ನು ಕಂಪನಿಗಳು ಮುಲಾಜಿಲ್ಲದೆ ಕೈಬಿಡುತ್ತಿವೆ.

5 ಲಕ್ಷ ಉದ್ಯೋಗಿಗಳು ಮನೆಗೆ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರವೇಶದಿಂದ (2022ರಿಂದ) ಇಲ್ಲಿಯವರೆಗೆ ಐದು ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ! ಅಂದರೆ ವರ್ಷಕ್ಕೆ ಸರಾಸರಿ ಒಂದೂವರೆ ಲಕ್ಷಕ್ಕೂ ಅಧಿಕ. ಉದ್ಯೋಗ ಮಾರುಕಟ್ಟೆಯನ್ನೇ ಎಐ ಏರುಪೇರುಗೊಳಿಸುತ್ತಿದೆ. ಕಂಪನಿಗಳು ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಮುನ್ನವೇ, ಯಾವೆಲ್ಲ ಕೆಲಸಗಳು ಎಐನಿಂದ ಮಾಡಬಹುದು ಎಂಬ ನಿಖರ ಲೆಕ್ಕಾಚಾರ ಮಾಡುತ್ತಿವೆ. ಪರಿಣಾಮ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡುತ್ತ ಬರುತ್ತಿದ್ದರೆ ಮತ್ತೊಂದೆಡೆ ಅನುಭವಿ, ನುರಿತ ಸಿಬ್ಬಂದಿ, ತಂತ್ರಜ್ಞರನ್ನು ಮುಲಾಜಿಲ್ಲದೆ ವಜಾಗೊಳಿಸುತ್ತಿವೆ. ಭಾರತದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದ್ದರೂ, ಆರ್ಥಿಕ ಅಭಿವೃದ್ಧಿ ಆಶಾದಾಯಕವಾಗಿದ್ದರೂ ಭಾರತಮೂಲದ ಕಂಪನಿಗಳು ಸಿಬ್ಬಂದಿಯನ್ನು ವಜಾಗೊಳಿಸುತ್ತಿವೆ.

ಇದರ ಬದಲು ಕಡಿಮೆ ಖರ್ಚಿನಲ್ಲಿ ಸ್ವಯಂಚಾಲಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇವು ಕಂಪನಿಗಳಿಗೆ ಆರ್ಥಿಕ ಸ್ನೇಹಿಯಾಗಿಯೂ ಸಾಬೀತಾಗಿವೆ. 2022ರಿಂದ ಆಟೊಮೇಷನ್​ಗಳು ಹೆಚ್ಚಿವೆ. ಕೃತಕ ಬುದ್ಧಿಮತ್ತೆ ಆಧಾರಿತ ಶಿಫ್ಟ್​ಗಳು ಚಾಲ್ತಿಗೆ ಬಂದಿವೆ. ಆದರೆ, ಜಾಗತಿಕ ಮಟ್ಟದಲ್ಲಿ ಅವಲೋಕಿಸುವುದಾದರೆ ಸಮರಗಳು, ರಾಜಕೀಯ ಅನಿಶ್ಚಿತತೆ, ಹಣದುಬ್ಬರ, ಸುಂಕ ಸಮರದಂಥ ನೀತಿಗಳು ಸಿಬ್ಬಂದಿ ವಜಾಕ್ಕೆ ಕಾರಣವಾಗಿವೆ. ಅಮೆರಿಕದಲ್ಲಿ ಸದ್ಯ ಇತರ ಉದ್ಯೋಗಗಳಲ್ಲಿ ಇರುವವರನ್ನು ಹೋಲಿಸಿದರೆ ಐಟಿ ರಂಗದಲ್ಲಿ ದುಡಿಯುತ್ತಿರುವವರ ಉದ್ಯೋಗ ಕಡಿತ ಮೂರು ಪಟ್ಟು ಹೆಚ್ಚು.

ಕೃತಕ ಬುದ್ಧಿಮತ್ತೆ ಮುಖ್ಯ ಪಾತ್ರ ವಹಿಸುತ್ತಿರುವುದರಿಂದ ಹೊಸ ಯೋಜನೆ, ಅದರ ಗುಣಮಟ್ಟ ಮತ್ತು ನಾವೀನ್ಯತೆಯಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದ ಮೈಕ್ರೋಸಾಫ್ಟ್ ಅಧ್ಯಕ್ಷ ಸತ್ಯ ನಾದೆಳ್ಲಾ ಸಿಬ್ಬಂದಿ ಕಡಿತದ ಕ್ರಮವನ್ನು ಇತ್ತೀಚೆಗೆ ಸಮರ್ಥಿಸಿಕೊಂಡಿದ್ದರು. ಫೇಸ್​ಬುಕ್, ವಾಟ್ಸ್​ಆಪ್, ಇನ್ಸ್​ಟಾಗ್ರಾಂಗಳ ಒಡೆತನ ಹೊಂದಿರುವ ಮಾರ್ಕ್ ಜುಕರ್​ಬರ್ಗ್ ನೇತೃತ್ವದ ಮೆಟಾ ಕಂಪನಿ 2024ರಲ್ಲಿ 3,600 ನೌಕರರನ್ನು ವಜಾಗೊಳಿಸಿತ್ತು. ಆಲ್ಪಬೆಟ್ ಕಂಪನಿಯು 2023ರ ಏಪ್ರಿಲ್​ನಿಂದ 2024ರ ಮಾರ್ಚ್ ಅಂತ್ಯದವರೆಗೆ 10 ಸಾವಿರ ಸಿಬ್ಬಂದಿಯನ್ನು ವಜಾಗೊಳಿಸಿತ್ತು.

ಎಐ ತಂತ್ರಜ್ಞರಿಗೆ ಬೇಡಿಕೆ

ಟೆಕ್ ಕಂಪನಿಗಳ ಮಧ್ಯವಯಸ್ಸಿನ ಸಿಬ್ಬಂದಿಯ ಉದ್ಯೋಗಕ್ಕೆ ಕುತ್ತು ಬಂದಿದ್ದರೆ, ಮತ್ತೊಂದೆಡೆ ಕೃತಕ ಬುದ್ಧಿಮತ್ತೆ ಅಭಿವೃದ್ಧಿ ಪಡಿಸುವ ತಂತ್ರಜ್ಞರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಗೂಗಲ್ ಹಾಗೂ ಓಪನ್ ಎಐನಂಥ ಕಂಪನಿಗಳು ವಾರ್ಷಿಕ 10 ಕೋಟಿ ಡಾಲರ್​ಗೂ ಮೀರಿದ ಪರಿಹಾರ ಪ್ಯಾಕೇಜ್ ನಿಡಿ ಎಐ ತಂತ್ರಜ್ಞರನ್ನು ನೇಮಿಸಿಕೊಳ್ಳುತ್ತಿವೆ. 2030ರ ಹೊತ್ತಿಗೆ ಕೃತಕ ಬುದ್ಧಿಮತ್ತೆ ಕ್ಷೇತ್ರವು 4 ಟ್ರಿಲಿಯನ್ ಅಮೆರಿಕನ್ ಡಾಲರ್​ನಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂದಾಜಿಸಲಾಗಿದ್ದು, ಇದಕ್ಕೆ ಪೂರಕವಾಗಿ ಉದ್ಯೋಗಸೃಷ್ಟಿಯಾಗಲಿವೆ.

ಎಐ ಮಾಯೆ

ಕೃತಕ ಬುದ್ಧಿಮತ್ತೆ (ಎಐ) ಕಂಪನಿಗಳ ಪಾಲಿಗೆ ಲಾಭವಾಗಿ ಪರಿಣಮಿಸಿದೆ. ಕಡಿಮೆ ಖರ್ಚಿನಲ್ಲಿ, ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಎಐನಿಂದ ಸಾಧ್ಯವಾಗುತ್ತಿದೆ. ಹಾಗಾಗಿ, ಕಳೆದ ಮೂರು ವರ್ಷಗಳಿಂದ ಟೆಕ್ ಕಂಪನಿಗಳು ಎಐ ಅಳವಡಿಕೆಯ ಪ್ರಮಾಣ ಮತ್ತು ವ್ಯಾಪ್ತಿಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿವೆ. ಅಷ್ಟೇ ಅಲ್ಲ, ಮುಂಬರುವ ವರ್ಷಗಳಲ್ಲಿ ಎಐ ಅಬ್ಬರ ಇನ್ನಷ್ಟು ಹೆಚ್ಚಲಿದೆ ಎನ್ನುತ್ತಾರೆ ತಜ್ಞರು. ‘ತಾನು ತಯಾರಿಸುವ ಶೇಕಡ 30ರಷ್ಟು ಕೋಡ್​ಗಳು ಎಐ ಅಭಿವೃದ್ಧಿ ಪಡಿಸಿದ್ದು’ ಎಂದು ಇತ್ತೀಚೆಗೆ ಟೆಕ್ ದೈತ್ಯ ಮೈಕ್ರೋಸಾಫ್ಟ್ ಕಂಪನಿ ಹೇಳಿಕೆ ನೀಡಿರುವುದು ಎಐ ಪಾರಮ್ಯಕ್ಕೆ ಸ್ಪಷ್ಟ ನಿದರ್ಶನ.

ಮಾನಸಿಕ ಆರೋಗ್ಯಕ್ಕೆ ಪೆಟ್ಟು

ಏಕಾಏಕಿ ಕೆಲಸ ಕಳೆದುಕೊಳ್ಳುತ್ತಿರುವುದರಿಂದ ಐಟಿ ಉದ್ಯೋಗಿಗಳು ಚಿಂತಾಕ್ರಾಂತರಾಗಿದ್ದಾರೆ. ಹಲವು ಬಗೆಯ ಸಮಸ್ಯೆ ಸೃಷ್ಟಿಯಾಗಿದ್ದು, ಮುಖ್ಯವಾಗಿ ಮಾನಸಿಕ ಆರೋಗ್ಯಕ್ಕೆ ಪೆಟ್ಟು ಬಿದ್ದಿದೆ. ಉದ್ಯೋಗ ಕಳೆದುಕೊಂಡ ನೌಕರರ ಪೈಕಿ ಎಷ್ಟೋ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವು ಹಂಚಿಕೊಂಡಿದ್ದು, ಕಂಪನಿಯ ನೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉದ್ವೇಗ, ಖಿನ್ನತೆ, ಆತಂಕದ ಸ್ಥಿತಿ ಎದುರಿಸುತ್ತಿದ್ದು, ಮುಂದಿನ ದಾರಿ ಕಾಣದಂತಾಗಿದ್ದಾರೆ. ಕೆಲ ಕಂಪನಿಗಳು ಪರಿಹಾರ ಮೊತ್ತವನ್ನು ಹೆಚ್ಚಿಸಿದ್ದು, ಉಚಿತ ಕೌನ್ಸೆಲಿಂಗ್ ವ್ಯವಸ್ಥೆ ಮಾಡಿವೆ.

ಎಲ್ಲ ಕಡೆ ಇದೇ ಸ್ಥಿತಿ

  • ಲೇಆಫ್ ಭಾರತಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ. ಜಾಗತಿಕ ಮಟ್ಟದಲ್ಲಿ ಐಟಿ ಕಂಪನಿಗಳು ಈ ವರ್ಷ ನೇಮಕಾತಿ ಪ್ರಕ್ರಿಯೆಗಿಂತ ಸಿಬ್ಬಂದಿಯನ್ನು ವಜಾ ಮಾಡುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಿವೆ. 9 ಸಾವಿರ ಉದ್ಯೋಗಿಗಳನ್ನು ಕೈಬಿಡುವುದಾಗಿ ಮೈಕ್ರೋಸಾಫ್ಟ್ ಜುಲೈ ಮಧ್ಯದಲ್ಲಿ ಘೋಷಿಸಿದೆ. ಉದ್ಯೋಗಿಗಳ ವಜಾ ಪ್ರಕ್ರಿಯೆ ಐಟಿ ರಂಗವನ್ನು ತಲ್ಲಣಗೊಳಿಸಿದ್ದರೆ, ಸಾಫ್ಟ್ ವೇರ್ ಇಂಜಿನಿಯರ್​ಗಳು, ತಂತ್ರಜ್ಞರು ಮುಂದೇನು ಎಂದು ದಿಕ್ಕು ಕಾಣದಂತಾಗಿದ್ದಾರೆ.
  • ಸೆಮಿಕಂಡಕ್ಟರ್ ಕ್ಷೇತ್ರದ ದಿಗ್ಗಜ ಕಂಪನಿ ಇಂಟೆಲ್ ಈ ವರ್ಷದ ಆರಂಭದಲ್ಲೇ 500ಕ್ಕೂ ಹೆಚ್ಚು ಹುದ್ದೆಗಳನ್ನೇ ರದ್ದುಗೊಳಿಸಿದೆ.
  • ಕ್ಯಾಲಿಫೋರ್ನಿಯಾ ಒಂದರಲ್ಲೇ 107 ನೌಕರರನ್ನು ವಜಾಗೊಳಿಸಿದೆ. ಪ್ರಸ್ತುತ ಅಮೆರಿಕದಲ್ಲಿ 5,500 ಉದ್ಯೋಗಿಗಳನ್ನು ಕೈಬಿಡುವ ಯೋಜನೆ ಹಾಕಿಕೊಂಡಿದೆ.
  • ಅಮೆಜಾನ್ ಕಂಪನಿ ತನ್ನ ಕಾರ್ಯಾಚರಣೆಯಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಇನ್ನಷ್ಟು ಅಳವಡಿಸಿಕೊಳ್ಳುವ ಘೋಷಣೆ ಮಾಡಿದ್ದು, ಇದರಿಂದ ಅನಿವಾರ್ಯವಾಗಿ ಅದು ಸಾವಿರಾರು ಸಿಬ್ಬಂದಿಯನ್ನು ವಜಾಗೊಳಿಸುವ ಸ್ಥಿತಿ ಸೃಷ್ಟಿಯಾಗಲಿದೆ.
  • 2025ರ ಆರಂಭದಿಂದ ಈವರೆಗೆ ಜಾಗತಿಕ ಮಟ್ಟದಲ್ಲಿ 170 ಟೆಕ್ ಕಂಪನಿಗಳು 80 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿವೆ. 2025-26ರ ಆರ್ಥಿಕ ವರ್ಷ ಮುಗಿಯಲು ಏಳೆಂಟು ತಿಂಗಳುಗಳು ಇನ್ನು ಬಾಕಿ ಇರುವುದರಿಂದ ಲೇಆಫ್ ಪ್ರಮಾಣ ಹೆಚ್ಚಲಿದೆ ಎಂದಿವೆ ಮೂಲಗಳು.
  • 2024ರಲ್ಲಿ ಐಟಿ ರಂಗದಲ್ಲಿ 1.54 ಲಕ್ಷ ಉದ್ಯೋಗಿಗಳನ್ನು ಕೈಬಿಡಲಾಗಿತ್ತು. 2023ರಲ್ಲಿ ಈ ಸಂಖ್ಯೆ 2.64 ಲಕ್ಷ ಇತ್ತು. 2025ರ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲೇ 80 ಸಾವಿರ ಜನರು ಕೆಲಸ ಕಳೆದುಕೊಂಡಿದ್ದಾರೆ.
  • ಈ ಹಿಂದೆ 2000ರಿಂದ 2002ರ ಕಾಲಘಟ್ಟದಲ್ಲಿಯೂ ಐಟಿ ರಂಗ ಭಾರಿ ಆಘಾತ ಅನುಭವಿಸಿತ್ತು. ಆಗ ಎಐ ಅಬ್ಬರ ಇರಲಿಲ್ಲ. ನಿರ್ವಹಣಾ ವೆಚ್ಚ ಕಡಿತ, ಕಂಪನಿಯ ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಉದ್ಯೋಗಿಗಳನ್ನು ದಿಢೀರ್ ಆಗಿ ಮನೆಗೆ ಕಳುಹಿಸಲಾಯಿತು. 2000ರಿಂದ 2002ರವರೆಗಿನ ಮೂರೇ ವರ್ಷದ ಅವಧಿಯಲ್ಲಿ 8 ಲಕ್ಷ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದರು.
  • 2008-9ರ ಕಾಲಾವಧಿಯಲ್ಲಿ ಲೇಆಫ್ ಪ್ರಕ್ರಿಯೆಯ ಸರಣಿ ಪ್ರವೇಶಿಸಿದ್ದು ಹಣಕಾಸು ಸಂಸ್ಥೆಗಳಿಗೆ. ಆಗ 1.3 ಲಕ್ಷ ನೌಕರರು ವಜಾಗೊಂಡಿದ್ದರು.

ಸ್ಕಿಲ್ ಇದ್ದರೆ ಸೈ

ಉದ್ಯೋಗ ನಷ್ಟದಿಂದ ಧೃತಿಗೆಡಬೇಕಿಲ್ಲ. ಹೊಸ ಕೌಶಲಗಳನ್ನು ಕಲಿತು ಅಪ್​ಡೇಟ್ ಆಗಿದ್ದರೆ ಸಾಕು ಎನ್ನುತ್ತಾರೆ ಕೆಲ ವಿಶ್ಲೇಷಕರು. ಲೇಆಫ್​ನಿಂದ ಯುವಕರು ಮತ್ತು ಮಧ್ಯವಯಸ್ಕರು ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದು ಅವರ ವೃತ್ತಿಜೀವನಕ್ಕೆ ಮುಳುವಾಗಬಹುದು. ಆದ್ದರಿಂದ ಬಂದ ಸವಾಲನ್ನು ಸ್ವೀಕರಿಸುವ ಮನೋಸ್ಥೈರ್ಯ ಪ್ರದರ್ಶಿಸಬೇಕು. ಪ್ರತಿಭೆ ಮತ್ತು ಕೌಶಲ್ಯದ ಬಲದ ಮೇಲೆ ಹೊಸ ಅವಕಾಶಗಳಿಗಾಗಿ ಶೋಧ ನಡೆಸುವುದು ಸೂಕ್ತ. ಸದ್ಯದ ಮಟ್ಟಿಗಂತೂ ಐಟಿ ಮತ್ತು ಇತರ ಸಂಬಂಧಿತ ಕ್ಷೇತ್ರಗಳ ಉದ್ಯೋಗಿಗಳು ಖರ್ಚಿಗಿಂತ ಉಳಿತಾಯಕ್ಕೆ ಹೆಚ್ಚು ಒತ್ತು ನೀಡಬೇಕು.

ದುಬಾರಿ ಖರೀದಿಗಳನ್ನು ಕಡ್ಡಾಯವಾಗಿ ಮುಂದೂಡಬೇಕು ಹಾಗೂ ಹೊಸ ಸಾಲಗಳನ್ನು ಮಾಡಿಕೊಳ್ಳಬಾರದು. ಮೊದಲು ತುರ್ತನಿಧಿಯನ್ನು ಸ್ಥಾಪಿಸಿಕೊಂಡರೆ ಕೆಲಸ ಹೋದ ತಕ್ಷಣ ಕಂಗಾಲಾಗಬೇಕಿಲ್ಲ. ಒಂದಿಷ್ಟು ಅವಧಿ ಸ್ವಂತಕ್ಕಾಗಿ, ಹವ್ಯಾಸಕ್ಕಾಗಿ ಮೀಸಲಿಟ್ಟು, ಹೊಸ ಹಾದಿಯಲ್ಲಿ ಸಾಗುವ ನಿರ್ಧಾರಕ್ಕೆ ಬರಬಹುದು. ಒಟ್ಟಾರೆ ಭವಿಷ್ಯಕ್ಕಾಗಿ ಹೆಚ್ಚೆಚ್ಚು ಉಳಿತಾಯ ಮಾಡುವುದು ಈಗಿನ ಆದ್ಯತೆಯಾಗಬೇಕಿದೆ ಎಂಬುದು ವಿತ್ತೀಯ ತಜ್ಞರ ಅನಿಸಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net