ಆರೋಪಿಗಳನ್ನು ಸತಾಯಿಸಲು ಕಾನೂನನ್ನು ಬಳಸಬಾರದು: ಸುಪ್ರೀಂ ಕೋರ್ಟ್

supreme court
supreme court
Published on

ನವದೆಹಲಿ: ಯಾವುದೇ ಪ್ರಕರಣಗಳ ಆರೋಪಿಗಳಿಗೆ ಕಿರುಕುಳ ನೀಡಲು ಕಾನೂನನ್ನು ಸಾಧನವಾಗಿ ಬಳಸಬಾರದು. ಕ್ಷುಲ್ಲಕ ಪ್ರಕರಣಗಳ ಕಾರಣದಿಂದ ಕಾನೂನಿನ ಪಾವಿತ್ರ್ಯ ‘ವಿಕೃತಗೊಳ್ಳಲು’ ಕೋರ್ಟ್​ಗಳು ಅವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಬ್ಬರು ವ್ಯಕ್ತಿಗಳ ವಿರುದ್ಧ ಚೆನ್ನೈ ಕೋರ್ಟ್​ವೊಂದರಲ್ಲಿ ಬಾಕಿಯಿರುವ ಕ್ರಿಮಿನಲ್ ಪ್ರಕರಣವನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಾನೂನು ಮುಗ್ಧರನ್ನು ರಕ್ಷಿಸಲು ಇರುವ ಸಾಧನವೇ ಹೊರತು ಅವರನ್ನು ಹೆದರಿಸುವ ಖಡ್ಗವಾಗಿ ಅದನ್ನು ಪ್ರಯೋಗಿಸಬಾರದು ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಎಸ್.ಆರ್. ಭಟ್ ಇದ್ದ ನ್ಯಾಯಪೀಠ ಹೇಳಿದೆ. 1940ರ ಔಷಧ ಮತ್ತು ಸೌಂದರ್ಯವರ್ಧಕ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ದಾಖಲಾಗಿದ್ದ ದೂರೊಂದನ್ನು ವಜಾ ಮಾಡುವಂತೆ ಕೋರಿದ್ದ ಅರ್ಜಿಯನ್ನು ಮದ್ರಾಸ್ ಹೈ ಕೋರ್ಟ್ ವಜಾ ಮಾಡಿತ್ತು. ಅದರ ವಿರುದ್ಧ ಸಂತ್ರಸ್ತರು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು.

ಐಐಟಿಯಲ್ಲಿ ಮೀಸಲು ಪಾಲನೆಗೆ ನಿರ್ದೇಶನ: ಭಾರತೀಯ ತಾಂತ್ರಿಕ ಸಂಸ್ಥೆಗಳ (ಐಐಟಿ) ಸಂಶೋಧನಾ ಪದವಿ ಕಾರ್ಯಕ್ರಮಗಳ ಪ್ರವೇಶ ಮತ್ತು ಅವುಗಳ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ಮೀಸಲಾತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರ ಮತ್ತು ಐಐಟಿಗಳಿಗೆ ನಿರ್ದೇಶನ ನೀಡಿದೆ. 2019ರ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಕೇಡರ್ ಮೀಸಲಾತಿ ಕಾನೂನು ಅನ್ವಯ ಮೀಸಲಾತಿ ಒದಗಿಸಬೇಕು ಎಂದಿದೆ. ಈ ಸಂಬಂಧ ಎಸ್.ಎನ್. ಪಾಂಡೆ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಸಿ.ಟಿ. ರವಿಕುಮಾರ್ ಇದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಮೀಸಲು ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಅರ್ಜಿದಾರರು ದೂರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net