ಮುಸ್ಲಿಂ ರಾಜರ ಆಡಳಿತದಲ್ಲಿ ಸೊರಗಿದ್ದ ತಿರುಪತಿಗೆ ಮರುಳಿ ವೈಭೋಗ ತಂದಿದ್ದು ಮೈಸೂರು ಅರಸರು! ಏನೆಲ್ಲ ಕೊಡುಗೆ ನೀಡಿದ್ದಾರೆ?

Tirupathi
Published on

ಬೆಂಗಳೂರು: ಮುಸ್ಲಿಂ ರಾಜರ ಆಡಳಿತದಲ್ಲಿ ಬಡವಾಗಿದ್ದ ತಿರುಪತಿಯಲ್ಲಿ ಮತ್ತೆ ವೈಭೋಗ ಮರುಕಳಿಸುವಂತೆ ಮಾಡುವಲ್ಲಿ ಮೈಸೂರು ಮಹಾರಾಜರ ಪಾತ್ರ ಅಗಾಧವಾದದ್ದು ಎಂದು ಕೆಎಸ್‌ಒಯು ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮುಖ್ಯಸ್ಥ ಶಲ್ವಪ್ಪಿಳ್ಳೈ ಅಯ್ಯಂಗಾರ್ ತಿಳಿಸಿದರು.

ಅಭಿಜ್ಞಾನ ಪ್ರಕಟಣೆಯು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೇಖಕ ಸಾ.ಕೃ. ರಾಮಚಂದ್ರರಾವ್ ಅವರ ರಚನೆಯ ‘ತಿರುಪತಿ ತಿಮ್ಮಪ್ಪ’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪಲ್ಲವರು, ಚೋಳರು, ವಿಜಯನಗರ ರಾಜರ ಕಾಲದಲ್ಲಿ ತಿರುಪತಿಯು ಸಾಕಷ್ಟು ವೈಭವಯುತವಾಗಿತ್ತು. ಆ ಬಳಿಕ ಬಂದಂತಹ ಮುಸ್ಲಿಮರ ಕಾಲದಲ್ಲಿ ದೇವಾಲಯದ ಆದಾಯವನ್ನು ರಾಜರಿಗೆ ನೀಡಬೇಕೆಂಬ ಆದೇಶ ಮಾಡಲಾಗುತ್ತದೆ. ಅಂದಿನ ಕಾಲದಲ್ಲಿಯೇ 2 ಲಕ್ಷ ರೂ.ಗಳ ಚಿನ್ನದ ವರಾಹಗಳನ್ನು ನೀಡಬೇಕಾಗಿತ್ತು. ಹೀಗಾಗಿ, ದೇವಾಲಯದಲ್ಲಿ ವೈಭವಕುಂದಿತ್ತು ಎಂದರು.

ಬಳಿಕ ಬಂದಂತಹ ಮೈಸೂರು ಮಹಾರಾಜರ ದೊಡ್ಡ ದೇವರಾಜ ಅರಸರು ತುಳಸಿತೋಟವನ್ನು ಮತ್ತು ಚಿಕ್ಕ ದೇವರಾಜ ಅರಸರು ಬಂಗಾರದ ತಟ್ಟೆ, ಇತ್ಯಾದಿ ಅಭರಣಗಳನ್ನು ನೀಡಿದರು. ಮುಮ್ಮಡಿ ಕೃಷ್ಣದೇವರಾಯರು ಪಟ್ಟಕ್ಕೇರಿದ ಬಳಿಕ ದೇವಾಲಯದ ಕೈಂಕರ್ಯಗಳು ಮುಂದುವರಿದವು. ದೀಪಾರಾದನೆ, ಸಹಸ್ರನಾಮಾರ್ಚನೆ, ನೈವೇದ್ಯ, ಗಜವಾಹನ ಮತ್ತು ದೇವಾಲಯದ ಕೆಳಗಡೆ ಭಕ್ತರು ತಂಗಲು ಛತ್ರಗಳನ್ನು ನಿರ್ಮಿಸಿದರು ಎಂದರು.

ನಿತ್ಯಾರ್ಚನೆಗೆ ವಿಜಯನಗರ ಸಾಮ್ರಾಜ್ಯದ ರಾಜರು ಆಭರಣಗಳು, ವಜ್ರಕಿರೀಟ, ಮುತ್ತು, ರತ್ನಗಳನ್ನು ನೀಡಿದ್ದರು. ಇದರಲ್ಲಿನ ಅರ್ಧಕ್ಕರ್ಧ ಆಭರಣಗಳು ಈಗ ಇಲ್ಲವಾಗಿವೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net