

ಪಾರೋ: ಒಂದು ದೇಶದಿಂದ ಮತ್ತೊಂದು ದೇಶಕ್ಕೆ (paro) ಜಾಗತಿಕ ನಾಯಕರು ಪ್ರವಾಸ ಮಾಡುವಾಗ ಅವರ ಸುತ್ತಮುತ್ತಲೂ ಬಿಗಿ ಭದ್ರತಾ ವ್ಯವಸ್ಥೆ, ಪೊಲೀಸ್ ಪಡೆಗಳಿರುವುದು ಸಾಮಾನ್ಯ. ಆದರೆ ಇಲ್ಲೊಂದು ದೇಶದ ರಾಜ-ರಾಣಿ ಯಾರ ಸಹಾಯವಿಲ್ಲದೆ ಸ್ವತ: ತಾವೇ ವಿಮಾನ ಓಡಿಸಿ ಭೂತಾನ್ಗೆ ಭೇಟಿ ನೀಡಿ ಎಲ್ಲರಿಗೂ ಅಚ್ಚರಿಮೂಡಿಸಿದ್ದಾರೆ.
ಹೌದು, ಥೈಲ್ಯಾಂಡ್ ರಾಜ ವಜಿರಲಾಂಗ್ ಕಾರ್ನ್ ಮತ್ತು ಅವರ ಪತ್ನಿ ರಾಣಿ ಸುತಿದಾ ಅವರು ತಾವೇ ವಿಮಾನವನ್ನು ಚಲಾಯಿಸಿಕೊಂಡು ಏ.25 (ಶುಕ್ರವಾರ)ರಂದು ಭೂತಾನ್ನ ಪಾರೋಗೆ ಭೇಟಿ ನೀಡಿದ್ದಾರೆ.
ಈ ದಂಪತಿಗಳಿಬ್ಬರು ತಮ್ಮ ಬೋಯಿಂಗ್ 737-800 ವಿಮಾನದ ಮೂಲಕ ಪಾರೋದಲ್ಲಿ ಇಳಿಯುವುದನ್ನು ಕಂಡು ಜನರೆಲ್ಲಾ ಅಚ್ಚರಿಗೊಂಡಿದ್ದಾರೆ. ಥೈಲ್ಯಾಂಡ್ ರಾಜ ರಾಯಲ್ ಥಾಯ್ ಸೈನ್ಯದಲ್ಲಿ ವೃತ್ತಿ ಅಧಿಕಾರಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಮಿಲಿಟರಿ ಪೈಲಟ್ ಕೂಡ ಆಗಿದ್ದರು. ಈ ದಂಪತಿಗಳಿಬ್ಬರ ಭೂತಾನ್ ಪ್ರವಾಸದ ವೇಳೆ ರಾಣಿ ಸುತಿದಾ ಸಹ ಪೈಲಟ್ ಆಗಿ ಗಂಡನಿಗೆ ನೆರವು ನೀಡಿದ್ದಾಳೆ.
ಭೂತಾನ್ ರಾಜನ ಆಹ್ವಾನದ ಮೇರೆಗೆ ಥೈಲ್ಯಾಂಡ್ ರಾಜ ಮತ್ತು ರಾಣಿ ಭೂತಾನ್ಗೆ ಪ್ರವಾಸ ಬೆಳೆಸಿದ್ದರು. ವಿಮಾನ ಇಳಿಯುತ್ತಿದ್ದಂತೆ ರಾಜ ಮತ್ತು ರಾಣಿಗೆ ಭೂತಾನ್ಲ್ಲಿ ಅದ್ಧೂರಿ ಸ್ವಾಗತ ಮಾಡಿ ಬರಮಾಡಿಕೊಳ್ಳಲಾಯಿತು. 2019ರಲ್ಲಿ ಥಾಯ್ಲೆಂಡ್ ರಾಜನಾಗಿ ಅಧಿಕಾರಕ್ಕೇರಿದ ಬಳಿಕ ಇದು ಅವರ ಮೊದಲ ಅಧಿಕೃತ ವಿದೇಶ ಭೇಟಿಯಾಗಿದೆ. (ಏಜೆನ್ಸೀಸ್)