ಯುವಕನ ಅಪಹರಣ ಸುಖಾಂತ್ಯ

raju
Published on

ಬೆಂಗಳೂರು: ಎಂ.ಜಿ. ರಸ್ತೆ ಹೋಟೆಲ್ ಮುಂಭಾಗ ಯುವಕನನ್ನು ಅಪಹರಣ ಮಾಡಿದ್ದ ಇಬ್ಬರನ್ನು ಬಂಧಿಸಿದ ಹಲಸೂರು ಪೊಲೀಸರು, ಅಪಹೃತನನ್ನು ರಕ್ಷಣೆ ಮಾಡಿದ್ದಾರೆ.

ತೆಲಂಗಾಣ ಮೂಲದ ದೇವರಕೊಂಡ ಶಿವಕೃಷ್ಣಾಚಾರಿ ಮತ್ತು ಜಾ ಜೋಸ್ನಾ ಬಂಧಿತರು. ಜೂ. 16ರಂದು ಎಂ.ಜಿ.ರಸ್ತೆ ಹೋಟೆಲ್ ಮುಂಭಾಗ ತೆಲಂಗಾಣದ ಅಜ್ಮೀರ್ ರಾಜು ಎಂಬಾತನನ್ನು ಕಾರಿನಲ್ಲಿ ಅಪಹರಣ ಮಾಡಿದ್ದರು. ಕಾರ್ಯಾಚರಣೆ ನಡೆಸಿ ತೆಲಂಗಾಣದ ರೆಸಾರ್ಟ್‌ನಲ್ಲಿ ರಾಜು ರಕ್ಷಣೆ ಮಾಡಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದ್ದ ರಾಜು, ವಿಲಾಸಿ ಜೀವನ ನಡೆಸುತ್ತಿದ್ದ. ಖ್ಯಾತನಾಮರ ಜೊತೆಗೆ ಪೋಟೋ ತೆಗೆಸಿಕೊಂಡು ಶ್ರೀಮಂತನಂತೆ ಬಿಂಬಿಸಿಕೊಂಡಿದ್ದ. 6 ತಿಂಗಳ ಹಿಂದೆ ಎಂ.ಜಿ. ರಸ್ತೆಯ ಹೋಟೆಲ್‌ವೊಂದರಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದ. ಜೂ. 16ರ ರಾತ್ರಿ ಹೋಟೆಲ್ ನೌಕರ ಜೊತೆಗೆ ಬೈಕ್‌ನಲ್ಲಿ ಊಟ ಮಾಡಲೆಂದು ಹೊರಗಡೆ ಹೋಗಿ ತಡರಾತ್ರಿ ವಾಪಸ್ ಬಂದಿದ್ದ. ಅಲ್ಲಿಯೇ ಕಾಯುತ್ತಿದ್ದ ಆರೋಪಿಗಳು, ರಾಜುನನ್ನು ಕಾರಲ್ಲಿ ಅಪಹರಣ ಮಾಡಿ ತೆಲಂಗಾಣದ ರೆಸಾರ್ಟ್‌ನಲ್ಲಿ ಕೂಡಿಟ್ಟಿದ್ದರು. ಇತ್ತ ಹೋಟೆಲ್ ನೌಕರರು, ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿ ವಿಷಯ ಮುಟ್ಟಿಸಿದರ‌್ದು.

ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ ಪೊಲೀಸರು, ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ರಾಜು ಮೊಬೈಲ್ ಲೊಕೇಷನ್ ತೆಲಂಗಾಣಕ್ಕೆ ತೋರಿಸಿತ್ತು. ಅಷ್ಟೊತ್ತಿಗೆ ಅಪಹರಣಕಾರರು, ರಾಜು ಮೇಲೆ ಹಲ್ಲೆ ನಡೆಸಿ ವಿದೇಶಿ ಬ್ಯಾಂಕ್‌ನಲ್ಲಿ ಇರುವ 5 ಕೋಟಿ ರೂ. ತಮ್ಮ ಬ್ಯಾಂಕ್‌ಗೆ ವರ್ಗಾವಣೆ ಮಾಡುವಂತೆ ಬೇಡಿಕೆ ಒಡ್ಡಿದ್ದರು. ಆರೋಪಿಗಳ ಬೆನ್ನತ್ತಿದ್ದ ಹಲಸೂರು ಪೊಲೀಸರು, ತೆಲಂಗಾಣದ ರೆಸಾರ್ಟ್ ಮೇಲೆ ದಾಳಿ ನಡೆಸಿ ರಾಜುನನ್ನು ರಕ್ಷಣೆ ಮಾಡಿ ಈತನ ಕಾವಲಿಗೆ ಇದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ. ಈ ಕೇಸಿನಲ್ಲಿ ಮತ್ತಷ್ಟು ಆರೋಪಿಗಳ ಕೈವಾಡ ಇರುವುದು ಬೆಳಕಿಗೆ ಬಂದಿದ್ದು, ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಲಾಗಿದೆ.

ಅಪಹರಣಕ್ಕೆ ಒಳಗಾಗಿದ್ದ ರಾಜು, ಸುಳ್ಳು ಹೇಳಿ ನಮ್ಮ ಬಳಿ ಹಣ ಪಡೆದಿದ್ದ. ಕೊನೆಗೆ ಹಣ ಕೊಡದೆ ಊರು ಬಿಟ್ಟು ಬಂದಿದ್ದ ಕಾರಣಕ್ಕೆ ಕರೆದುಕೊಂಡು ಹೋಗಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net