

ಟೋಕಿಯೊ: ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆ ಜಪಾನ್ನಲ್ಲಿ ನಿರ್ಬಂಧಿಸಲಾಗಿರುವ ಟೈಮಂಡ್ ಪ್ರಿನ್ಸ್ಸ್ ಹಡಗಿನಲ್ಲಿರುವ ಜನರಿಗೆ 2000 ಉಚಿತ ಆ್ಯಪಲ್ ಫೋನ್ಗಳನ್ನು ಅಲ್ಲಿನ ಸರ್ಕಾರ ನೀಡಿದೆ.
ಸುಮಾರು 3,700 ಜನರು ಇರುವಂತಹ ಡೈಮಂಡ್ ಪ್ರಿನ್ಸ್ಸ್ ಹಡಗಿನಲ್ಲಿ 350ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ವೈರಸ್ ಪತ್ತೆಯಾಗಿರುವವರನ್ನು ಪ್ರತ್ಯೇಕವಾಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು ಇನ್ನುಳಿದವರನ್ನು ಹಡಗಿನಲ್ಲಿ ತಪಾಸಣೆಯಲ್ಲಿಡಲಾಗಿದೆ. ಈ ಸಂದರ್ಭದಲ್ಲಿ ಅವರಿಗೆ ವೈದ್ಯಕೀಯ ನೆರವು ನೀಡುವ ಸಲುವಾಗಿ ಉಚಿತ ಆ್ಯಪಲ್ ಫೋನ್ಗಳನ್ನು ವಿತರಿಸಲಾಗಿದೆ.
ಜಪಾನ್ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಖಾಸಗಿ ವ್ಯವಹಾರಗಳ ಸಚಿವಾಲಯ ಮತ್ತು ಆಂತರಿಕ ವ್ಯವಹಾರ ಸಚಿವಾಲಯದ ಜತೆ ಸೇರಿಕೊಂಡ 2000 ಆ್ಯಪಲ್ ಫೋನ್ಗಳನ್ನು ಖರೀದಿಸಿ ಅದನ್ನು ಹಡಗಿಗೆ ಕಳುಹಿಸಿಕೊಟ್ಟಿದೆ. ಈ ಎಲ್ಲ ಫೋನುಗಳಲ್ಲಿ ಲೈನ್ ಆ್ಯಪ್ನ್ನು ಇನ್ಸ್ಟಾಲ್ ಮಾಡಿಡಲಾಗಿದ್ದು, ಇದು ಜನರಿಗೆ ವೈದ್ಯಕೀಯ ನೆರವು ನೀಡಲಿದೆ. ಈ ಆ್ಯಪ್ನ ಮೂಲಕ ಜನರು ವೈದ್ಯಕೀಯ ತಜ್ಞರೊಂದಿಗೆ ನೇರವಾಗಿ ಸಂವಹನ ನಡೆಸಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ತಮಗೆ ಅಗತ್ಯ ಔಷಧಗಳನ್ನು ತರಿಸಿಕೊಳ್ಳಬಹುದಾಗಿದೆ.
ಜಪಾನ್ನಲ್ಲಿ ತಯಾರಿಸಲಾಗಿರುವ ಲೈನ್ ಆ್ಯಪ್ ಬೇರೆ ದೇಶದ ಮೊಬೈಲ್ಗಳ ಆ್ಯಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್ನಲ್ಲಿ ಲಭ್ಯವಿಲ್ಲದಿರುವ ಕಾರಣ ಸರ್ಕಾರವೇ ಉಚಿತ ಫೋನ್ಗಳನ್ನು ವಿತರಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)