

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ವಿಚಾರ ಈಗ ಅಪ್ರಸ್ತುತ(The issue of changing the CM is now irrelevant) ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ(Dr G Parameswar) ಹೇಳಿದರು.
ಸದಾಶಿವನಗರದ ತಮ್ಮನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ ಕುರಿತ ಪ್ರಶ್ನೆಗೆ, ಒಂದಿಷ್ಟು ಸತ್ಯ ಹೇಳಿದರೆ ಹೊಗಳೋದು ಏನು ಬಂತು? ಸಿದ್ದರಾಮಯ್ಯ ಹದಿನಾರು ಬಜೆಟ್ ಕೊಟ್ಟಿದ್ದು ಸತ್ಯ ಹೌದಾ ಇಲ್ವಾ? ಅವರು ರಾಜ್ಯದಲ್ಲಿ ಆರ್ಥಿಕ ಸಮನ್ವಯತೆ ಸಾಧಿಸಿದ್ದಾರೆ. ಅದನ್ನು ಹೊಗಳಿಕೆ ಅಂದುಕೊಂಡ್ರೆ ಅಂದುಕೊಳ್ಳಲಿ ಎಂದು ಪ್ರತಿಕ್ರಿಯಿಸಿದರು.
ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್(ಬಿಎಂಐಸಿ) ಸಮಸ್ಯೆ ಕಳೆದ ಹಲವಾರು ವರ್ಷಗಳಿಂದ ಬಗೆಹರಿದಿರಲಿಲ್ಲ. ಸರ್ಕಾರ ಜಮೀನು ಕೊಟ್ಟಿದ್ದು, ಮುನ್ನೂರಕ್ಕೂ ಹೆಚ್ಚು ಪ್ರಕರಣ ಕೋರ್ಟ್‌ನಲ್ಲಿದೆ. ಅರ್ಧಗಂಟೆಯಲ್ಲಿ ಸಂಪುಟದಲ್ಲಿ ಬಗೆಹರಿಸಲು ಆಗುವುದಿಲ್ಲ. ಹೆಚ್ಚಿನ ಮಾಹಿತಿ ಬಗ್ಗೆ ಚರ್ಚೆ ಆಗಬೇಕು. ಹಾಗಾಗಿಯೇ ಸಂಪುಟ ಉಪಸಮಿತಿ ಮಾಡಿದ್ದಾರೆ. ನನ್ನನ್ನು ಆ ಸಮಿತಿಗೆ ಸಿಎಂ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಎಚ್.ಕೆ ಪಾಟೀಲ ಸೇರಿ ಹಿರಿಯ ಸಚಿವರೂ ಸದಸ್ಯರು ಇದ್ದಾರೆ. ಜಯಚಂದ್ರ ವರದಿಯನ್ನು ಕೂಡ ನಾವು ಅಧ್ಯಯನ ಮಾಡಿ ಒಂದು ವರದಿ ಕೊಡುತ್ತೇವೆ ಎಂದು ಹೇಳಿದರು.
ಜಾತಿಜನಗಣತಿ ವರದಿ ಜಾರಿಗೆ ವರ್ಷವಾಗಲಿದೆ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತ ಪ್ರಶ್ನೆಗೆ, ಅವರ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಕ್ಯಾಬಿನೆಟ್ ತೀರ್ಮಾನ ಮಾಡುತ್ತದೆ. ಇದು ಜಟಿಲ ಎಂದು ನನಗೇನೂ ಕಾಣುತ್ತಿಲ್ಲ. ಕೆಲವು ಸಚಿವರು ಕೇಳಿದ್ದಾರೆ, ಅದನ್ನು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ಸಿಎಂ ಮೇ 2ರಂದು ಸಭೆ ಕರೆದಿದ್ದಾರೆ ಎಂದು ಡಾ.ಪರಮೇಶ್ವರ ತಿಳಿಸಿದರು.