ಸಿಕ್ಸರ್ ಬಾರಿಸಿದ ಭಾರತೀಯ ಷೇರುಪೇಟೆ; ಆರು ವಾರಗಳ ಗರಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್

ವಿಜಯವಾಣಿ (5)
Published on

ಮುಂಬೈ: ವಿದೇಶಿ ಹೂಡಿಕೆ ಒಳಹರಿವಿನ ಹೆಚ್ಚಳ, ಬ್ಯಾಂಕಿಂಗ್, ತೈಲ ಮತ್ತು ಅನಿಲ ಕಂಪನಿಗಳ ಷೇರುಗಳಿಗೆ ಹೆಚ್ಚಿದ ಬೇಡಿಕೆ ಮತ್ತಿತರ ಕಾರಣಗಳಿಂದಾಗಿ ಸತತ ಆರನೇ ದಿನವಾದ ಸೋಮವಾರವೂ ಸೆನ್ಸೆಕ್ಸ್ ಏರಿಕೆಯಾಯಿತಲ್ಲದೆ ಒಂದೇ ದಿನ 1,078 ಅಂಕಗಳ ಹೆಚ್ಚಳದೊಂದಿಗೆ ಆರು ವಾರಗಳ ಗರಿಷ್ಠ ಮಟ್ಟ ಮುಟ್ಟಿತು.

ದಿನದ ವಹಿವಾಟಿನ ಮಧ್ಯೆ ಸೆನ್ಸೆಕ್ಸ್ 1,201 ಅಂಕ ಏರಿ 78 ಸಾವಿರದ ಮಟ್ಟ ಮೀರಿ ಮುಂದುವರಿದು 78,107ಕ್ಕೆ ತಲುಪಿತ್ತು. ಕೊನೆಯಲ್ಲಿ 1,078 ಅಂಕ ಏರಿಕೆ ದಾಖಲಿಸಿ 77,984ಕ್ಕೆ ಸ್ಥಿರವಾಯಿತು. ಫೆ. 6ರಿಂದೀಚೆಗೆ ಸೆನ್ಸೆಕ್ಸ್ ಈ ಮಟ್ಟಕ್ಕೆ ಏರಿರಲಿಲ್ಲ. ನಿಫ್ಟಿ ಕೂಡ ದಿನದ ವಹಿವಾಟಿನ ಮಧ್ಯೆ 358 ಅಂಕ ಏರಿಕೆಯಾಗಿ 23,708ಕ್ಕೆ ತಲುಪಿತ್ತು. ಕೊನೆಗೆ 307 ಏರಿಕೆ ದಾಖಲಿಸಿ 23,658ಕ್ಕೆ ಸ್ಥಿರಗೊಂಡಿತು.

ಅಮೆರಿಕ ಮತ್ತು ಯೂರೋಪಿಯನ್ ಮಾರುಕಟ್ಟೆಗಳಲ್ಲಿನ ಧನಾತ್ಮಕ ಪ್ರವೃತ್ತಿಯು ಭಾರತೀಯ ಷೇರುಪೇಟೆಯ ಏರಿಕೆಗೆ ಕಾರಣವಾಯಿತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ರೈಲ್ವೆ ಇನ್ನು ಮುಂದೆ ನವೀಕರಿಸಬಹುದಾದ ಇಂಧನ ಮತ್ತು ಅಣು ಇಂಧನ ಬಳಸಲು ಪ್ರಾರಂಭಿಸಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿದ ಸಾರ್ವಜನಿಕ ವಲಯದ ಸಂಸ್ಥೆಗಳತ್ತ ಹೂಡಿಕೆದಾರರು ಒಲವು ತೋರಿಸಿದ್ದಾರೆ. ಎನ್​ಟಿಪಿಸಿ ಷೇರು ಬೆಲೆ ಶೇ. 4.61ರಷ್ಟು ಏರಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಕೋಟಕ್ ಮಹಿಂದ್ರಾ ಬ್ಯಾಂಕಿನ ಷೇರು ಬೆಲೆ ಶೇ. 4.51ರಷ್ಟು ಏರಿತು. ಎಸ್​ಬಿಐ, ಟೆಕ್ ಮಹಿಂದ್ರಾ, ಪವರ್​ಗ್ರಿಡ್, ಬಜಾಜ್ ಫಿನ್​ಸರ್ವ್, ಆಕ್ಸಿಸ್ ಬ್ಯಾಂಕ್, ಎಚ್​ಸಿಎಲ್ ಟೆಕ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ ಸೋಮವಾರ ಲಾಭ ಗಳಿಸಿದ ಇತರ ಕಂಪನಿಗಳು. ಟೈಟನ್, ಇಂಡಸ್​ಇಂಡ್ ಬ್ಯಾಂಕ್, ಜೊಮ್ಯಾಟೊ, ಮಹಿಂದ್ರಾ ಆಂಡ್ ಮಹಿಂದ್ರಾ, ಭಾರ್ತಿ ಏರ್​ಟೆಲ್, ನೆಸ್ಲೆ, ಇನ್​ಫೋಸಿಸ್ ಷೇರುಗಳು ನಷ್ಟ ಅನುಭವಿಸಿದವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 7,470 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net