

ಬೀಜಿಂಗ್: ಚೀನಾದಿಂದ ಭಾರತಕ್ಕೆ ಬರುವವರಿಗೆ ನೀಡುವ ಇ-ವೀಸಾ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಚೀನಾದ ಭಾರತ ರಾಯಭಾರಿ ಕಚೇರಿ ತಿಳಿಸಿದೆ. ಈ ಮೊದಲೇ ನೀಡಿರುವ ವೀಸಾಗಳ ಮಾನ್ಯತೆಯನ್ನು ಹಿಂಪಡೆದಿರುವುದಾಗಿ ತಿಳಿಸಲಾಗಿದೆ.
ಚೀನಾದಲ್ಲಿ ಕೊರೊನಾ ವೈರಸ್ ದಾಳಿಯ ಪ್ರಮಾಣ ಹೆಚ್ಚಾಗಿದೆ. ಇದೇ ಕಾರಣದಿಂದಾಗಿ ಈ ಸಮಯದಲ್ಲಿ ಚೀನಾದ ಮೂಲದವರಿಗೆ ಮತ್ತು ಚೀನಾದಲ್ಲಿ ಪ್ರಸ್ತುತ ವಾಸವಿರುವವರಿಗೆ ಭಾರತಕ್ಕೆ ಬರಲು ಇ-ವೀಸಾಗಳನ್ನು ನೀಡಲಾಗುವುದಿಲ್ಲ ಎಂದು ಚೀನಾದ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ. ಈ ಮೊದಲೇ ಹಲವರಿಗೆ ಇ-ವೀಸಾ ವಿತರಣೆಯಾಗಿದ್ದು ಅವುಗಳ ಮಾನ್ಯತೆಯನ್ನು ತಾವು ಹಿಂಪಡೆದಿರುವುದಾಗಿ ಕಚೇರಿ ತಿಳಿಸಿದೆ. ಒಂದು ವೇಳೆ ಭಾರತಕ್ಕೆ ತೆರಳಲು ಬಲವಾದ ಕಾರಣಗಳೇನಾದರೂ ಇದ್ದರೆ, ಅಂತವರು ಬೀಜಿಂಗ್ನಲ್ಲಿರುವ ರಾಯಭಾರಿ ಕಚೇರಿ ಅಥವಾ ಶಾಂಘೈ ಹಾಗೂ ಗುವಾಂಗ್ನಲ್ಲಿರುವ ಭಾರತೀಯ ದೂತವಾಸಗಳನ್ನು ಅಥವಾ ಅಲ್ಲಿನ ವೀಸಾ ಅರ್ಜಿ ಕೇಂದ್ರಗಳನ್ನು ಸಂಪಕಿರ್ಸಬೇಕು ಎಂದು ತಿಳಿಸಲಾಗಿದೆ.
ಚೀನಾದಲ್ಲಿ ಕೊರೊನಾ ವೈರಸ್ಗೆ ಈಗಾಗಲೇ 304 ಜನರು ಮೃತರಾಗಿದ್ದು, 14,562ಕ್ಕೂ ಹೆಚ್ಚು ಜನರಲ್ಲಿ ವೈರಸ್ ಇರುವುದಾಗಿ ತಿಳಿಸಲಾಗಿದೆ. ಭಾರತ, ಅಮೆರಿಕ ಸೇರಿದಂತೆ ಒಟ್ಟು 25 ದೇಶಗಳಲ್ಲಿ ಕೊರೊನ ವೈರಸ್ ಇರುವುದು ಪತ್ತೆಯಾಗಿದೆ. (ಏಜೆನ್ಸೀಸ್)