ಇತಿಹಾಸದಲ್ಲೇ ವಿರಾಜಪೇಟೆ ಪುರಸಭೆ ಬಜೆಟ್ ದೊಡ್ಡ ಗಾತ್ರದ್ದು

19 Vpt 4
ವಿರಾಜಪೇಟೆ ಪುರಸಭೆಯ ಬಜೆಟ್ ಮಂಡಿಸಲಾಯಿತು ಅಧ್ಯಕ್ಷೆ ದೇಚಮ್ಮ, ನಾಚಪ್ಪ , ಪಸಿಹ ತಬ್ಸುಂ ಇದ್ದರು.
Published on

ವಿರಾಜಪೇಟೆ: ವಿರಾಜಪೇಟೆ ಪುರಸಭೆಯ 2025-26ನೇ ಸಾಲಿಗೆ 60,35,311 ರೂ.ಗಳ ಉಳಿತಾಯ ಬಜೆಟ್‌ಅನ್ನು ಪುರಸಭೆಯ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಬುಧವಾರ ಮಂಡಿಸಿದರು.

ಮುಂದಿನ ಸಾಲಿಗೆ 86,80,32,250 ರೂ.ಗಳ ದೊಡ್ಡಗಾತ್ರದ ಬಜೆಟ್ ಇದಾಗಿದೆ. ಮುಂದಿನ ಸಾಲಿಗೆ 81,59,77,250 ರೂ. ಆದಾಯವನ್ನು ನಿರೀಕ್ಷಿಸಲಾಗಿದೆ. ಈ ಬಜೆಟ್‌ನಲ್ಲಿ 5,80,90,311 ರೂ. ಆರಂಭಿಕ ಶಿಲ್ಕು ಎಂದು ತೋರಿಸಲಾಗಿದೆ. ಈ ಬಜೆಟ್ ಅಶಾದಾಯಕ ಬಜೆಟ್ ಆಗಿದ್ದು ಇದು ಪುರಸಭೆಯ ಇತಿಹಾಸದಲ್ಲಿ ಪ್ರಥಮ ಬೃಹತ್ ಗಾತ್ರದ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದರು.

ಈ ಬಜೆಟ್ ವಿಚಾರದಲ್ಲಿ ಮಂಡನೆ ಬಳಿಕ ಅಧ್ಯಕ್ಷೆ ದೇಚಮ್ಮ ಮಾತನಾಡಿ, ಮೂಲಸೌಕರ್ಯ ಚರಂಡಿ ನಿರ್ಮಾಣ, ಸ್ವಚ್ಛತೆ, ರಸ್ತೆ ಅಭಿವೃದ್ದಿ ಬೀದಿದೀಪ ಅಳವಡಿಕೆ ಹೊಸದಾಗಿ ಸೇರ್ಪಡೆಗೊಂಡ ಬಿಟ್ಟಂಗಾಲ ಚಂಬೆಬೆಳ್ಳೂರು ಆರ್ಜಿ ಗ್ರಾಪಂ ವ್ಯಾಪ್ತಿಯ ಭಾಗಶಃ ಭಾಗಗಳಿಗೆ ಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಒತ್ತು ನೀಡಲಾಗುತ್ತದೆ. ವಿಶೇಷವಾಗಿ ಬೇತ್ರಿ 2ನೇ ಹಂತದ ಕುಡಿಯುವ ನೀರಿನ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ದಿನದಲ್ಲಿ ಪಟ್ಟಣದಲ್ಲಿ ನೀರಿನ ಸಮಸ್ಯೆ ನೀಗಲಿದೆ. ವಿರಾಜಪೇಟೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿತ್ತಿರುವ ಶಾಸಕರಿಗೆ ಅಭಿನಂದನೆ ಸಲ್ಲಿಸವುದಾಗಿ ಹೇಳಿದರು.

ಬಿಜೆಪಿಯ ಸದಸ್ಯೆ ಅನಿತಾ ಮಾತನಾಡಿ, ಬೆಟ್ಟ ಪ್ರದೇಶವಾದ ನೆಹರು ನಗರದಲ್ಲಿ ಪ್ರತಿ ಬೇಸಿಗೆ ದಿನದಲ್ಲಿ ಕಾಡಿಗೆ ಬೆಂಕಿ ಬಿಳುತ್ತಿದ್ದು ಪುರಸಭೆಯ ವ್ಯಾಪ್ತಿಯಲ್ಲಿ ಅಗ್ನಿಶಾಮಕ ಘಟಕವನ್ನು ಸ್ಥಾಪಿಸುವಂತೆ ಒತ್ತಾಯಿಸಿದರು. ಇವರ ಮನವಿಗೆ ಸ್ವಂದಿಸಿದ ಅಧ್ಯಕ್ಷೆ ಈಗಾಗಲೇ ಶಾಸಕರ ಅನುದಾನದಲ್ಲಿ ಸರ್ಕಾರದಿಂದ 3 ಕೋಟಿ ರೂ. ಬಿಡುಗಡೆಗೊಂಡಿದ್ದು ಪಟ್ಟಣದ ಸುತ್ತಮುತ್ತಲಿನ ಎರಡು ಎಕರೆ ಜಾಗ ಗುರುತಿಸುವಂತೆ ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಶಾಸಕರು ಸೂಚನೆ ನೀಡಿದ್ದಾರೆ. ಅತಿ ಶೀಘ್ರದಲ್ಲಿಯೇ ಅಗ್ನಿಶಾಮಕ ಘಟಕ ವಿರಾಜಪೇಟೆಯಲ್ಲಿ ಸ್ಥಾಪನೆಯಾಗುವ ಭರವಸೆ ಇದೆ ಎಂದರು.

ಕಾಂಗ್ರೆಸ್ ಸದಸ್ಯ ರಜನಿಕಾಂತ್ ಮಾತನಾಡಿ, ಹರಿಕೇರಿಯಲ್ಲಿ 54 ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಬಗ್ಗೆ ಪ್ರಸ್ತಾಪಿಸಿದಾಗ ಅಧ್ಯಕ್ಷರು ಈಗಾಗಲೇ 5 ಕುಟುಂಬಗಳ ಹಕ್ಕು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ 12 ಲಕ್ಷ ರೂ.ಗಳ ಅನುದಾನ ಮೀಸಲಿಡಲಾಗಿದೆ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅಭಿವೃದ್ಧಿಗೆ ತೊಡಕಾಗಿದೆ. ಆದರಿಂದ ನ್ಯಾಯಾಲಯದಲ್ಲಿ ಪ್ರಕರಣ ಶೀಘ್ರ ಬಗೆಹರಿದರೆ ಅವರಿಗೆ ವಸತಿ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಫಸಿಹತಬ್ಸುಂ, ಮುಖ್ಯಧಿಕಾರಿ ಪಿ.ಕೆ.ನಾಚಪ್ಪ, ಇಂಜಿನಿಯರ್ ಹೇಮಾಕುಮಾರ್, ಪರಿಸರ ಇಂಜಿನಿಯರ್ ರೀತು ಸಿಂಗ್ ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net