

ಮಡಿಕೇರಿ: ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ವ್ಯಕ್ತಿತ್ವದ ವಿಕಸನ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಿ.ಎಂ.ಸುಬ್ರಮಣ್ಯ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮಹಾತ್ಮರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು. ಪ್ರತಿಯೊಬ್ಬರಲೂ ಕೌಶಲ್ಯ, ಜ್ಞಾನ, ಆರೋಗ್ಯ, ಸಂತೃಪ್ತಿ ಗುಣಗಳು ಇರಬೇಕು. ಈ ೪ ಗುಣಗಳು ಇದ್ದಾಗ ಮಾತ್ರ ಉತ್ತಮ ಮನುಷ್ಯನಾಗಲು ಸಾಧ್ಯ ಎಂದು ಹೇಳಿದರು.
ಮನುಷ್ಯನಲ್ಲಿ ಆತ್ಮವಿಶ್ವಾಸ ಇದ್ದರೆ ಸಾಧನೆ ಮಾಡಬಹುದು. ನಿರಂತರ ಶ್ರಮದಿಂದ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಪ್ರತಿಯೊಬ್ಬರಲೂ ಪ್ರತಿಭೆ ಇರುತ್ತದೆ. ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಾಗ ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಿ.ಜೆ.ಜವರಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಚಟುವಟಿಕೆಯ ಜತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ, ಪ್ರತಿಭಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಪಠ್ಯ ಶಿಕ್ಷಣ, ಕ್ರೀಡೆ ಹಾಗೂ ಕಲೆ ಮತ್ತು ಸಾಂಸ್ಕೃತಿಕ ವಿಭಾಗಗಳು ಶಿಕ್ಷಣದ ಅವಿಭಾಜ್ಯ ಅಂಗ ಎಂದರು.
ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಬೋಧಿಸಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬೇಕು. ಕಲಿಯುವ ಹುಮ್ಮಸ್ಸು ಪ್ರತಿಯೊಬ್ಬರಲ್ಲೂ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಿ ಬದುಕಲು ಸಾಧ್ಯ. ವಿದ್ಯೆ ಬದುಕನ್ನು ಸದೃಢಗೊಳಿಸುತ್ತದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಿಸುವುದು ಅವಶ್ಯ ಎಂದು ಹೇಳಿದರು.
ಸಹ ಪ್ರಾಧ್ಯಾಪಕರು ಹಾಗೂ ಕಾಲೇಜು ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ಡಿ.ಕನ್ನಿಕಾ, ಕಾಲೇಜು ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು ಇತರರು ಇದ್ದರು.