ಏಕತೆಯ ಆದರ್ಶ ಸರ್ದಾರ್ ವಲ್ಲಭಭಾಯಿ ಪಟೇಲ್

Patel
Published on
| ಪ್ರಕಾಶ್ ಶೃಂಗೇರಿ
ದೇಶ ಮತ್ತು ಅದರ ಏಕತೆಯ ವಿಷಯ ಬಂದಾಗ ಭಾರತದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರು ತೆಗೆದುಕೊಂಡ ನಿರ್ಧಾರಗಳು ಇಂದಿಗೂ ಪ್ರಸ್ತುತ. ಬ್ರಿಟಿಷರು ಬಿಟ್ಟು ಹೋದ ಗುಲಾಮಿ ಮಾನಸಿಕತೆಯಲ್ಲಿ ಭಾರತೀಯರು ಇದ್ದಾಗ ದೇಶವನ್ನು ಮಾನಸಿಕವಾಗಿ ಸದೃಢ ಮಾಡಿದ್ದು ಸರ್ದಾರ್ ಪಟೇಲರು. 1875 ಅಕ್ಟೋಬರ್ 31ರಂದು ಗುಜರಾತಿನ ಖೇಡ ಜಿಲ್ಲೆಯಲ್ಲಿ ಜನಿಸಿದ ಪಟೇಲರು ಚಿಕ್ಕವಯಸ್ಸಿನಿಂದಲೇ ನೇರನುಡಿಗೆ ಹೆಸರಾಗಿದ್ದರು. ಶಾಲಾದಿನಗಳಲ್ಲಿ ಶಿಕ್ಷಕರು ತಪ್ಪು ಮಾಡಿದರೂ ಖಂಡಿಸುವ ಎದೆಗಾರಿಕೆ ಬೆಳೆಸಿಕೊಂಡಿದ್ದರು. ಹೀಗಾಗಿ ಮುಂದೆ ದೃಢನಿರ್ಧಾರಗಳಿಂದಲೇ ಭಾರತದ ಇತಿಹಾಸದಲ್ಲಿ ಉಕ್ಕಿನ ಮನುಷ್ಯ ಅಥವಾ ಲೋಹಪುರುಷರೆಂದೇ ಹೆಸರುವಾಸಿಯಾದರು.

ಪ್ರೌಢಶಾಲೆಯಲ್ಲಿದಾಗ ವಲ್ಲಭಭಾಯಿ ಅವರಿಗೆ ಲಂಡನ್​ಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆಯಬೇಕು ಎಂಬ ಆಸೆ ಚಿಗುರಿತು. ಆದರೆ ಬಡತನವಿದ್ದ ಕಾರಣ ಸಹೋದರನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ದೂರಶಿಕ್ಷಣದಲ್ಲಿ ಕಾನೂನು ಪದವಿ ಪಡೆದುಕೊಂಡರು. ತದನಂತರದಲ್ಲಿ ಲಂಡನ್​ಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದುಕೊಂಡರು. ಅವರ ಬಾಲ್ಯ, ಯೌವ್ವನ ಸಂಘರ್ಷದಿಂದ ಕೂಡಿತ್ತು. ಅದನ್ನು ಸವಾಲಾಗಿ ಸ್ವೀಕರಿಸಿದ ಪಟೇಲರು ದಿನನಿತ್ಯದ ಕಷ್ಟಗಳನ್ನು ಛಲದಿಂದ ಎದುರಿಸಿ ಗೆದ್ದರು. ವಕೀಲರಾದ ಮೇಲೆ ಬಡವರ, ದೀನದಲಿತರ ಪರವಾಗಿ ಉಚಿತವಾಗಿ ಕೇಸುಗಳನ್ನು ನಡೆಸಿ ಅವರಿಗೆ ನೆರವಾಗುತ್ತಿದ್ದರು. ಮುಂದೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದು ಭಾರತದ ಪಾಲಿಗೆ ಅದೃಷ್ಟವೇ ಸರಿ.

ಗುಜರಾತಿನ ಖೇಡ ಜಿಲ್ಲೆಯಲ್ಲಿ ಶುರುವಾದ ರೈತ ಆಂದೋಲನದಲ್ಲಿ ಪಟೇಲರು ಭಾಗಿಯಾದರು. ಈ ಆಂದೋಲನದ ವಿಚಾರವಾಗಿ ‘ಗುಜರಾತ್ ಸಭಾ’ ಗಾಂಧೀಜಿ ಅವರನ್ನು ಗುಜರಾತಿಗೆ ಆಹ್ವಾನಿಸಿತು. ಇದೇ ಸಮಯದಲ್ಲಿ ಪಟೇಲರು ಗುಜರಾತ್ ಸಭಾದ ಕಾರ್ಯದರ್ಶಿಯಾಗಿದ್ದರು. ಈ ವೇಳೆ ಗಾಂಧಿ ಅವರ ಜೊತೆ ಪಟೇಲರ ಒಡನಾಟ ಮತ್ತು ಸಖ್ಯ ಶುರುವಾಯಿತು.

ಪಟೇಲರ ಹೋರಾಟದ ಜೀವನದ ಅತಿದೊಡ್ಡ ತಿರುವು ಅಂದರೆ ಅದು ಬಾರಡೋಲಿ ಸತ್ಯಾಗ್ರಹ. 1925ರ ಸಮಯದಲ್ಲಿ ಬಾಂಬೆ ಪ್ರಾಂತ್ಯದಲ್ಲಿ ರೈತರ ಮೇಲಿನ ತೆರಿಗೆಯನ್ನು ಬ್ರಿಟಿಷ್ ಸರ್ಕಾರ ಏಕಾಏಕಿ ಜಾಸ್ತಿ ಮಾಡಿತು. ಇದರ ವಿರುದ್ಧವಾಗಿ ಪಟೇಲರು ದನಿ ಎತ್ತಿ ಬಾರಡೋಲಿ ಭಾಗದ ರೈತರನ್ನು ಸಂಘಟನೆ ಮಾಡುತ್ತ ಸತ್ಯಾಗ್ರಹಕ್ಕೆ ಕರೆ ಕೊಟ್ಟರು, 1928ರ ಸಮಯದಲ್ಲಿ ಈ ಸತ್ಯಾಗ್ರಹ 80 ಸಾವಿರಕ್ಕಿಂತ ಹೆಚ್ಚಿನ ರೈತರನ್ನು ಸಂಘಟಿಸಿತು. ದಿನವೂ ಹಳ್ಳಿಹಳ್ಳಿಗಳಿಗೆ ಭೇಟಿ ನೀಡಿ, ರೈತರ ಮನೋಬಲ ಹೆಚ್ಚಿಸುತ್ತ ಹೆಚ್ಚಿನ ತೆರಿಗೆ ನೀಡದಂತೆ ಅವರ ಮನವೊಲಿಸುತ್ತಿದ್ದರು. ಪರಿಣಾಮವಾಗಿ, ಬ್ರಿಟಿಷ್ ಸರ್ಕಾರ ಈ ತೆರಿಗೆ ನೀತಿಯನ್ನು ಕೈಬಿಟ್ಟಿತು. ಈ ಸತ್ಯಾಗ್ರಹದಿಂದ ಪಟೇಲರು ಸ್ವಾತಂತ್ರ್ಯ ಸಂಗ್ರಾಮದ ಶಕ್ತಿಯಾಗಿ ಬೆಳೆದರು.

1942ರಲ್ಲಿ ನಡೆದ ‘ಕ್ವಿಟ್ ಇಂಡಿಯಾ’ ಚಳವಳಿ ದೇಶದ ತುಂಬೆಲ್ಲ ಪಸರಿಸಿತು. ಸರ್ದಾರ್ ಪಟೇಲರು ತಮ್ಮ ಭಾಷಣಗಳ ಮುಖೇನ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿಬಿಟ್ಟರು. ಇದರ ಪರಿಣಾಮ ನೇರವಾಗಿ ಬ್ರಿಟಿಷ್ ಸರ್ಕಾರದ ಮೇಲೆ ಬಿಳತೊಡಗಿತು. ನಿಜಾರ್ಥದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕಾಗಿದ್ದ ವರ್ಷ 1942 ಅಥವಾ 1943. ಆದರೆ, ಕುತಂತ್ರಿ ಬ್ರಿಟಿಷರು ಭಾರತ ಬಿಟ್ಟು ಹೋದ ಮೇಲೆಯೂ ನಾವು ದೇಶವನ್ನು ಸುಭದ್ರವಾಗಿ ಇಡಬಾರದೆಂಬ ನಿರ್ಣಯ ಮಾಡಿಕೊಂಡಿದ್ದರು. ಭಾರತವನ್ನು ಧರ್ಮಗಳ ಆಧಾರದ ಮೇಲೆ ಹಿಂದುಸ್ಥಾನ ಮತ್ತು ಪಾಕಿಸ್ತಾನ ಎಂದು ಇಬ್ಭಾಗ ಮಾಡಿದರು. ಅಲ್ಲದೆ, ರಾಜರು ಆಳ್ವಿಕೆ ಮಾಡುತ್ತಿದ್ದ ಪ್ರದೇಶಗಳನ್ನು ದೇಶದೊಳಗೆ ಪ್ರತ್ಯೇಕವಾಗಿ ವಿಂಗಡಿಸುವ ಹುನ್ನಾರ ಮಾಡಿಬಿಟ್ಟರು. ಸ್ವಾತಂತ್ರ್ಯ ಕೊಡುವ ಸಮಯದಲ್ಲಿ ದೇಶ ವಿಭಜನೆಯ ವಿಚಾರ ಬಂದಾಗ ಸರ್ದಾರ್ ಪಟೇಲರು ಅದನ್ನು ಖಂಡಿಸಿದ್ದರು ಎಂಬುದು ಏಕತೆಗಾಗಿ ಅವರ ಮನಸ್ಸು ಎಷ್ಟು ಗಟ್ಟಿಯಾಗಿತ್ತು ಎಂಬುದರ ಕನ್ನಡಿ.

ಸ್ವಾತಂತ್ರ್ಯದ ಪೂರ್ವದಲ್ಲಿ ಭಾರತದಲ್ಲಿ 565 ಸಂಸ್ಥಾನಗಳು ಇದ್ದವು. ಸಂಸ್ಥಾನದ ರಾಜರುಗಳನ್ನು ಕರೆದು ಮಾತನಾಡಿದ ಪಟೇಲರು ಬರೋಬ್ಬರಿ 562 ಸಂಸ್ಥಾನಗಳನ್ನು ಭಾರತದೊಂದಿಗೆ ವಿಲೀನಗೊಳಿಸಲು ಮನವೊಲಿಸಿದರು. ಆದರೆ, ಕಾಶ್ಮೀರ, ಜುನಾಗಢ್ ಮತ್ತು ಹೈದ್ರಾಬಾದಿನ ಸಂಗತಿಗಳು ಸ್ವಲ್ಪ ಸಂಕೀರ್ಣವಾಗಿದ್ದವು. ಮೂರು ಸಂಸ್ಥಾನಗಳನ್ನು ಭಾರತದೊಳಗೆ ಸೇರಿಸಲು ಜನಮತ ಆಯಿತು. ಜುನಾಗಢದ ಜನರು ಭಾರತದೊಳಗೆ ವಿಲೀನಗೊಳ್ಳಲು ಒಪ್ಪಿಕೊಂಡರು. ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಬಂದ ಜನರು ಗಲಭೆಗಳನ್ನು ಎಬ್ಬಿಸಿದರು. ಇನ್ನೇನು ಸರ್ದಾರ್ ಪಟೇಲರು ಪರಿಸ್ಥಿತಿ ತಿಳಿಪಡಿಸುವುದರಲ್ಲಿ ಇದ್ದರು. ಆದರೆ ನೆಹರು ಅದಕ್ಕೆ ಇನ್ನೊಂದು ಆಯಾಮದಲ್ಲಿ ‘ಪ್ರತ್ಯೇಕ ರಾಜ್ಯ’ದ ಸ್ಥಾನಮಾನ ನೀಡಿಬಿಟ್ಟರು. ಹೈದ್ರಾಬಾದ್ ಸಂಸ್ಥಾನದ ವಿಚಾರ ಬಗೆಹರಿಸಬೇಕು ಅನ್ನುವಷ್ಟರಲ್ಲಿ ಗಾಂಧಿಹತ್ಯೆ, ಕೋಮುಹತ್ಯೆಗಳು ನಡೆದವು. ಇದೇ ಸಮಯದಲ್ಲಿ ಪಟೇಲರಿಗೆ ಲಘುಹೃದಯಾಘಾತ ಆಯಿತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಒಂದು ವರ್ಷ ಒಂದು ತಿಂಗಳಾದರೂ ಹೈದ್ರಾಬಾದ್ ಸಂಸ್ಥಾನ ಭಾರತದಲ್ಲಿ ವಿಲೀನವಾಗಿರಲಿಲ್ಲ. ಕೊನೆಯದಾಗಿ ಪಟೇಲರು ಕಠಿಣ ನಿರ್ಧಾರ ತೆಗೆದುಕೊಂಡರು. ಹೈದ್ರಾಬಾದ್ ನಿಜಾಮನನ್ನು ಬಗ್ಗು ಬಡಿದು ಈ ದೇಶದ ಏಕತೆಯನ್ನು ಎತ್ತಿ ಹಿಡಿಯಬೇಕು ಎಂದು ತೀರ್ವನಿಸಿ ಭಾರತೀಯ ಸೈನ್ಯವನ್ನು ಹೈದ್ರಾಬಾದಿಗೆ ರವಾನಿಸಿಬಿಟ್ಟರು. ಸ್ವಾತಂತ್ರ್ಯ ಸಿಕ್ಕ ನಂತರವೂ ಹೈದ್ರಾಬಾದಿನ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ರಜಾಕಾರರಿಂದ ಹಿಂಸೆ, ಅನ್ಯಾಯ, ಭ್ರಷ್ಟಾಚಾರ, ಅತ್ಯಾಚಾರ, ಹಿಂದೂಗಳ ಮಾರಣಹೋಮ ನಡೆಯುತ್ತಲೇ ಇತ್ತು. ಇದನ್ನೆಲ್ಲ ನೋಡಿ, ಆಪರೇಷನ್ ಪೋಲೊ ಮೂಲಕ ಸೈನ್ಯವನ್ನು ನುಗ್ಗಿಸಿ ಹೈದ್ರಾಬಾದ್ ಸಂಸ್ಥಾನವನ್ನು ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಿಸಿದರು. ಇದು ಪಟೇಲರ ವ್ಯಕ್ತಿತ್ವ.

ದೇಶದ ಏಕತೆ, ಸ್ವಾಭಿಮಾನಕ್ಕಾಗಿ ಪಟೇಲರು ತೆಗೆದುಕೊಂಡ ನಿರ್ಧಾರಗಳು ಅಚಲವಾಗಿದ್ದವು. ಇಂತಹ ವ್ಯಕ್ತಿತ್ವದ ಪಟೇಲರಿಗೆ ಸಿಗಬೇಕಾದ ಗೌರವ ಸಿಕ್ಕಿದ್ದು ಕಳೆದ ಐದು ವರ್ಷಗಳಲ್ಲಿ ಅಂದರೆ ತಪ್ಪಾಗಲಾರದು. ದೇಶದ ಏಕತೆ ಪ್ರತಿಮೆಯಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿ ಅನಾವರಣಗೊಳಿಸಲಾಯಿತು. ಅಂದಿನಿಂದ ಇಂದಿನವರೆಗೆ ಮೂರ್ತಿಯನ್ನು 16 ಕೋಟಿ ಜನರು ವೀಕ್ಷಣೆ ಮಾಡಿ, ದೇಶದ ಏಕತೆಗಾಗಿ ಕೊಡುಗೆ ನೀಡಿದ ಪಟೇಲರ ವ್ಯಕ್ತಿತ್ವವನ್ನು ಸ್ಮರಿಸಿದ್ದಾರೆ.

(ಲೇಖಕರು ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net