

ಬೆಂಗಳೂರು: ಜಿಮ್ ತರಬೇತುದಾರನೊಬ್ಬ, ಪತ್ನಿಗೆ ವಿಡಿಯೋ ಕರೆ ಮಾಡಿ ನೇಣು ಬಿಗಿದುಕೊಳ್ಳುತ್ತೇನೆ ಎಂದು ಹೆದರಿಸಲು ಹೋಗಿ ಕೊನೆಗೆ ಅದೇ ನೇಣು ಕುಣಿಕೆ ಬಿಗಿದುಕೊಂಡು ಮೃತಪಟ್ಟಿದ್ದಾನೆ.
ಬಿಹಾರ ಮೂಲದ ಅಮಿತ್ ಕುಮಾರ್ ಸಾಹು(೨೮) ಮೃತಪಟ್ಟವನು.
ಕೆಲಸವನ್ನು ಅರಸಿ ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿರುವ ಅಮಿತ್ ಕುಮಾರ್ ಸಾಹು, ದಾಸರಹಳ್ಳಿಯಲ್ಲಿರುವ ಜಿಮ್‌ವೊಂದರಲ್ಲಿ ತರಬೇತುದಾರನಾಗಿದ್ದ. ಒಂದು ವರ್ಷದ ಹಿಂದೆ ದಾಸರಹಳ್ಳಿ ನಿವಾಸಿ ಯುವತಿಯನ್ನು ಪ್ರೀತಿಸಿ, ಆಕೆಯ ಪಾಲಕರ ವಿರೋಧದ ನಡುವೆಯೇ ಮದುವೆಯಾಗಿದ್ದ. ದಂಪತಿ ಆರಂಭದಲ್ಲಿ ಅನ್ಯೂನ್ಯವಾಗಿಯೇ ಇದ್ದರು. ಈ ಮಧ್ಯೆ ನರ್ಸಿಂಗ್ ಕೋರ್ಸ್‌ಗೆ ಸೇರಿದ್ದ ಪತ್ನಿ ತನಗೆ ಸಮಯ ನೀಡುತ್ತಿಲ್ಲ. ಸೇಹಿತರೊಂದಿಗೆ ಹೆಚ್ಚು ಮಾತನಾಡುತ್ತಿದ್ದಳು ಎಂದು ಹೇಳಲಾಗಿದೆ. ಇದೇ ವಿಚಾರಕ್ಕೆ ದಂಪತಿ ನಡುವೆ ಹೆಚ್ಚು ಗಲಾಟೆ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಾಗ ಬ್ಲಾೃಕ್‌ಮೇಲ್ ಮಾಡುತ್ತಿದ್ದ:
ಪತಿಯ ವರ್ತನೆಯಿಂದ ಬೇಸತ್ತಿದ್ದ ಪತ್ನಿ ಸಮೀಪದಲ್ಲಿರುವ ತವರು ಮನೆಗೆ ಹೆಚ್ಚು ಹೋಗುತ್ತಿದ್ದಳು. ಅದರಿಂದ ತನ್ನೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಸಮಯ ಕೂಡ ಕೊಡುತ್ತಿರಲಿಲ್ಲ ಎಂದು ಬೇಸರಗೊಂಡಿದ್ದ ಅಮಿತ್ ಕುಮಾರ್, ಪತ್ನಿ ತವರು ಮನೆಗೆ ಹೋದಾಗಲೆಲ್ಲ, ಆಕೆಗೆ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬ್ಲಾೃಕ್‌ಮೇಲ್ ಮಾಡಿ, ಮನೆಗೆ ಕರೆಸಿಕೊಳ್ಳುತ್ತಿದ್ದ. ಬುಧವಾರ ಕೂಡ ತವರು ಮನೆಗೆ ಹೋಗಿದ್ದ ಪತ್ನಿಗೆ ನಾಲ್ಕೈದು ಬಾರಿ ಕರೆ ಮಾಡಿದ್ದಾನೆ. ಆದರೆ, ಆಕೆ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ವಿಡಿಯೋ ಕಾಲ್ ಮಾಡಿ, ಕೂಡಲೇ ಮನೆಗೆ ಬಾರದಿದ್ದರೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ, ಹಗ್ಗವನ್ನು ಫ್ಯಾನ್‌ಗೆ ಹಾಕಿಕೊಂಡು ನೇಣು ಕುಣಿಕೆಗೆ ಕೊರಳು ಹಾಕಿಕೊಂಡು ಹೆದರಿಸಿದ್ದಾನೆ. ಅದರಿಂದ ಗಾಬರಿಗೊಂಡ ಪತ್ನಿ ಕೂಡಲೇ ಮನೆ ಬಳಿ ಬಂದಾಗ ಕೋಣೆಯೊಂದರ ಬಾಗಿಲನ್ನು ಒಳಭಾಗದಿಂದ ಅಮಿತ್ ಕುಮಾರ್ ಸಾಹು, ಲಾಕ್ ಮಾಡಿಕೊಂಡಿರುವುದು ಗೊತ್ತಾಗಿದೆ. ಎಷ್ಟೇ ಬಾಗಿಲು ಬಡಿದರು ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಸ್ಥಳೀಯರ ನೆರವು ಪಡೆದು ಬಾಗಿಲು ಒಡೆದು ನೋಡಿದಾಗ ಅಮಿತ್ ಕುಮಾರ್ ಸಾಹು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ವೈದ್ಯರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಹಿಡಿಯಲು ಹೋಗಿ ಸತ್ತ:
ವಿಡಿಯೋ ಕಾಲ್ ಮಾಡಿ ಪತ್ನಿಗೆ ಹೆದರಿಸಲು ಮುಂದಾಗಿದ್ದು ಈ ವೇಳೆ ಕೈನಲ್ಲಿದ್ದ ಮೊಬೈಲ್ ಜಾರಿ ಬಿದ್ದಿದ್ದು, ಅದನ್ನು ಹಿಡಿಯಲು ಹೋದಾಗ ಅಚಾನಕ್ ಆಗಿ ನೇಣು ಕುಣಿಕೆಯಲ್ಲಿದ್ದ ಕೊರಳಿಗೆ ಉರುಳು ಬಿಗಿದುಕೊಂಡು ಅಮಿತ್ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಮೃತರು ಮತ್ತು ಆತನ ಪತ್ನಿಯ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.