ಮಗು ಮಾಡಿಕೊಳ್ಳುವ ವಿಚಾರಕ್ಕೆ ನಡೆದ ಜಗಳ: ಪತ್ನಿ ಕತ್ತು ಹಿಸುಕಿ ಕೊಂದ ಪತಿ

arrest
Published on

ಬೆಂಗಳೂರು: ಮಗು ಮಾಡಿಕೊಳ್ಳುವ ವಿಚಾರಕ್ಕೆ ನವವಿವಾಹಿತ ದಂಪತಿ ನಡುವೆ ಜಗಳವಾಗಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಮೂಲತಃ ಭಟ್ಕಳ ನಿವಾಸಿ ಗಿರಿಜಾ (೩೦) ಕೊಲೆಯಾದ ನತದೃಷ್ಟೆ. ಆರೋಪಿ ಪತಿ ನವೀನ್‌ಕುಮಾರ್ (೩೧) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮನಗರ ತಾಲೂಕಿನ ಮಾಯಗಾನಹಳ್ಳಿಯವರಾದ ನವೀನ್ ಕುಮಾರ್ ಮಾಡ್ರನ್ ಬ್ರೆಡ್ ಡಿಸ್ಟಿಬ್ಯೂಟರ್. ಇವರು ಅಂಗಡಿ ಹಾಗೂ ಬೇಕರಿಗಳಿಗೆ ಬ್ರೆಡ್ ಸರಬರಾಜು ವೃತ್ತಿ ಮಾಡುತ್ತಿದ್ದಾರೆ. ಯಶವಂತಪುರದಲ್ಲಿ ಈ ಹಿಂದೆ ಗಿರಿಜಾ ಪಾಲಕರು ನೆಲೆಸಿದ್ದ ಸಂದರ್ಭದಲ್ಲಿ ನವೀನ್ ಅವರಿಗೆ ಪರಿಚಯವಾಗಿದೆ. ಎರಡೂ ಕುಟುಂಬದವರೂ ಸೇರಿ ಎಂಟು ತಿಂಗಳಯಿಂದೆಯಷ್ಟೇ ಗಿರಿಜಾ-ನವೀನ್‌ಕುಮಾರ್ ವಿವಾಹ ಮಾಡಿಸಿದ್ದಾರೆ. ಈ ದಂಪತಿ ಅನ್ನಸಂದ್ರಪಾಳ್ಯದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಗೃಹಿಣಿ ಗಿರಿಜಾ ಮನೆಯಲ್ಲೇ ಇರುತ್ತಿದ್ದರು. ಗಿರಿಜಾ ಅವರಿಗೆ ಇತ್ತೀಚೆಗೆ ಗರ್ಭಪಾತವಾಗಿತ್ತು. ನಂತರ ಮಗು ಮಾಡಿಕೊಳ್ಳುವ ವಿಚಾರವಾಗಿ ದಂಪತಿ ನಡುವೆ ಮನಸ್ತಾಪವಾಗಿದೆ. ಪತಿ ಮಗು ಬೇಕೆಂದರೆ, ಪತ್ನಿ ತಕ್ಷಣಕ್ಕೆ ಮಗು ಬೇಡವೆಂದು ವಾದಿಸುತ್ತಿದ್ದರು. ಇದೇ ವಿಚಾರವಾಗಿ ಶುಕ್ರವಾರ ರಾತ್ರಿ ೧೦.೩೦ರ ಸುಮಾರಿನಲ್ಲಿ ದಂಪತಿ ನಡುವೆ ಜಗಳವಾಗಿದೆ. ಕೋಪಗೊಂಡ ನವೀನ್ ಕುಮಾರ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದನು. ಗೃಹಿಣಿಯ ಕೊಲೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಚ್‌ಎಎಲ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ನವೀನ್ ಕುಮಾರ್‌ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಗಿರಿಜಾ ಪಾಲಕರಿಗೆ ಮಾಹಿತಿ ನೀಡಿದು,್ದ ಅವರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಹಸ್ತಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net