ಪತ್ನಿಯ ಕೊಂದು ಆತ್ಮಹತ್ಯೆ ಕತೆ ಕಟ್ಟಿದ ಪತಿ

Murder Crime
Published on

ಬೆಂಗಳೂರು : ಕೌಟುಂಬಿಕ ಕಲಹದಿಂದ ಪತ್ನಿಯನ್ನು ಕೊಲೆ ಮಾಡಿ ಬಳಿಕ ನೇಣು ಬಿಗಿದು ಆತ್ಮಹತ್ಯೆ ಎಂದು ಸುಳ್ಳು ಕತೆ ಕಟ್ಟಿದ್ದ ಪತಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಎಚ್‌ಆರ್‌ಬಿಆರ್ ಲೇಔಟ್ 1ನೇ ಹಂತದ ನಿವಾಸಿ ಕೆಂಚಮ್ಮ (19) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಮೃತಳ ಪತಿ ಸಿದ್ದಪ್ಪನನ್ನು ಬಂಧಿಸಲಾಗಿದೆ. ಕೌಟುಂಬಿಕ ಕಲಹದಿಂದ ಸೋಮವಾರ ರಾತ್ರಿ ದಂಪತಿ ನಡುವೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪತ್ನಿಯ ಕತ್ತು ಹಿಸುಕಿ ಸಿದ್ದಪ್ಪ ಹತ್ಯೆ ಮಾಡಿದ್ದಾನೆ.

ಶವವನ್ನು ನೇಣು ಬಿಗಿದು ಮರುದಿನ ಬೆಳಗ್ಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಿದ್ದಪ್ಪ ಹೇಳಿದ್ದ. ಸ್ಥಳಕ್ಕೆ ತೆರಳಿದ ಪೊಲೀಸರು, ಪರಿಶೀಲನೆ ನಡೆಸಿದಾಗ ಸಿದ್ದಪ್ಪ ಹೇಳಿಕೆಗಳು ಅನುಮಾನಬಂದು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆ ಬಸವಬಾಗೇವಾಡಿ ತಾಲೂಕಿನ ಟೆಂಕಲಗಿ ಗ್ರಾಮದ ಸಿದ್ದಪ್ಪ ಮತ್ತು ಕೆಂಚಮ್ಮ 6 ತಿಂಗಳ ಹಿಂದೆ ವಿವಾಹವಾಗಿದ್ದರು. 2 ತಿಂಗಳ ಹಿಂದಷ್ಟೇ ಕೆಲಸ ಅರಸಿಕೊಂಡು ನಗರಕ್ಕೆ ದಂಪತಿ ಬಂದಿದ್ದರು. ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಗ್ಯಾಸ್ ಹಂಚಿಕೆದಾರರ ಮನೆಯಲ್ಲಿ ಕೆಲಸ ಮಾಡಿಕೊಂಡು ಅದೇ ಮನೆಯ ಆವರಣದಲ್ಲಿ ಸಿದ್ದಪ್ಪ ದಂಪತಿ ವಾಸವಾಗಿದ್ದರು.

ಇದೀಗ ಸಣ್ಣಪುಟ್ಟ ಕೌಟುಂಬಿಕ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net