ಯುದ್ಧಾನಂತರದ ರಾತ್ರಿಯ ಬೀಭತ್ಸ ದೃಶ್ಯ...

Sudina Shrirama
Published on
ವಿದೂರಥನ ರಾಜಧಾನಿಯ ಸಮೀಪದಲ್ಲಿ ನಡೆದ ಭೀಕರ ಸಂಗ್ರಾಮವನ್ನು ಕಾವ್ಯದ ಶೈಲಿಯಲ್ಲಿ ಶ್ರೀವಸಿಷ್ಠರು ವರ್ಣಿ ಸುತ್ತಿದ್ದಾರೆ. ಯುದ್ಧವು ನಿಲ್ಲಿಸಲ್ಪಟ್ಟಿದ್ದರೂ ಯುದ್ಧದಿಂದಾದ ಪರಿಣಾಮಗಳನ್ನು ತಡೆಹಿಡಿಯಲು ಬರುವುದಿಲ್ಲ. ಭರತ ಖಂಡದ ಎಲ್ಲಾ ಚಿಕ್ಕ-ದೊಡ್ಡ ರಾಜ್ಯಗಳ ಸೈನಿಕರು ದೊಡ್ಡ ಸಂಖ್ಯೆಯಲ್ಲಿ ಸೇರಿದಾಗ ಯುದ್ಧವು ಒಂದೇ ದಿನ ನಡೆದರೂ ವಿಪುಲವಾಗಿ ಸಾವುನೋವುಗಳು ಆಗಿರುತ್ತವೆ. ಆದಿನ ರಾತ್ರಿಯ ಬೀಭತ್ಸ ದೃಶ್ಯಗಳನ್ನು ಶ್ರೀವಸಿಷ್ಠರು ವರ್ಣಿಸುತ್ತಿದ್ದಾರೆ. ಬೇರೆ ಅನೇಕ ಕಾವ್ಯಗಳು ಶೃಂಗಾರ, ವೀರ, ಕರುಣೆ ಎಂಬ ರಸಗಳಲ್ಲಿಯೇ ಹೆಚ್ಚು ಸುತ್ತಾಡುತ್ತಿರುತ್ತವೆ. ಆದರೆ ವಾಸಿಷ್ಠ ರಾಮಾಯಣವು ವೀರರಸ, ಬೀಭತ್ಸರಸ ಮತ್ತು ರೌದ್ರರಸಗಳಿಗೆ ತುಂಬಾ ಆಸ್ಪದ ಕೊಟ್ಟಿದೆ. ಪುನರುಕ್ತಿ ಇಲ್ಲದೇ ವಿವಿಧ ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳಿಂದ ಯುದ್ಧರಂಗದ ದೃಶ್ಯಗಳನ್ನು ವರ್ಣಿಸುತ್ತಿದೆ. ಅಧ್ಯಾತ್ಮ ಸಾಮ್ರಾಜ್ಯದ ಚಕ್ರವರ್ತಿ ಯಂತಿರುವ ವೈರಾಗ್ಯವನ್ನು ಸಂಸಾರಿಗಳಿಗೆ ಉಂಟು ಮಾಡುವುದಕ್ಕೋಸ್ಕರ ಹೀಗೆ ವರ್ಣಿಸುತ್ತಿರಬಹುದು.

ಶ್ರೀರಾಮ! ಯುದ್ಧರಂಗದಲ್ಲಿ ಬಿದ್ದಿರುವ ಶವಗಳ ಕರುಳುಗಳನ್ನು ರಣಹದ್ದುಗಳು ಮುಂತಾದ ಮಾಂಸಾಹಾರಿ ಪಕ್ಷಿ-ಪ್ರಾಣಿಗಳು ಹೊರಗೆ ಎಳೆದು ಹಾಕಿವೆ. ಉದ್ದುದ್ದನೆಯ ಕರುಳುಗಳು ಅಲ್ಲಲ್ಲೇ ಬಿದ್ದಿರುವ ದೃಶ್ಯಗಳನ್ನು ನೋಡಿದರೆ ಯುದ್ಧರಂಗವೆಂಬ ವೀಣೆಗೆ ಕಟ್ಟಿರುವ ತಂತಿಗಳೋ! ಆ ತಂತಿಗಳ ಮೂಲಕ ವಿಧಿಯು ವೀಣೆಯನ್ನು ನುಡಿಸುತ್ತಿದ್ದಾನೋ! ಎಂಬಂತೆ ಕಾಣುತ್ತಿತ್ತು. ಅಲ್ಲಿರುವ ಪಿಶಾಚಗಳ ಗಲಾಟೆ ಎಷ್ಟು ತೀವ್ರವಾಗಿತ್ತೆಂದರೆ ಅಲ್ಲಿರುವ ಕೆಲವು ಮನುಷ್ಯರ ಮೇಲೂ ಅದರ ಪರಿಣಾಮವಾಗುತ್ತಿತ್ತು. (ಶವದಹನ ಮುಂತಾದ ಕೆಲಸಗಳಿಗೋಸ್ಕರ ಅಲ್ಲಿ ಕೆಲವರು ಮನುಷ್ಯರು ಇದ್ದರು). ಕೆಲವು ಮನುಷ್ಯರು ಪಿಶಾಚಗಳಂತೆಯೇ ಕೂಗಾಡುತ್ತಾ ವರ್ತಿಸುತ್ತಿದ್ದರು. ಹಿಂದಿನ ಜನ್ಮದಲ್ಲಿ ಪಿಶಾಚಗಳಾಗಿದ್ದು ಅದರ ವಾಸನೆ (ಸಂಸ್ಕಾರ) ಅವರ ಮನಸ್ಸಿನ ಆಳದಲ್ಲಿ ಇದ್ದಿರುವುದು ಇದಕ್ಕೆ ಕಾರಣ.

ರೂಪಿಕಾ ಎಂಬ ಒಂದು ಜಾತಿಯ ಉಗ್ರ ಪೂತನಿಯನ್ನು ನೋಡಿ ಅಲ್ಲಿ ಅರೆಜೀವ ಅವ್ಯವಸ್ಥೆಯಲ್ಲಿ ಬಿದ್ದಿರುವ ವೀರಭಟರು ಭಯಕ್ಕೆ ಒಳಗಾದರು. ಪಿಶಾಚಗಳು ಉತ್ಸಾಹದಿಂದ ಸಂತೋಷೋತ್ಸವವನ್ನು ಆಚರಿಸುತ್ತಿದ್ದರೆ ಕೆಲವು ಕಡೆ ಬೇತಾಳಗಳು ಮತ್ತು ರಾಕ್ಷಸರು ಆ ಸಂತೋಷೋತ್ಸವಕ್ಕೆ ಅಡ್ಡಿಪಡಿಸುತ್ತಿದ್ದರು. ಒಂದು ಕಡೆ ಪೂತನಿಯೊಬ್ಬಳು ಹೊತ್ತುಕೊಂಡು ಹೋಗುತ್ತಿರುವ ಶವವು ಆಕಸ್ಮಿಕವಾಗಿ ಬಿದ್ದು ಹೋಯಿತು. ಅದನ್ನು ನೋಡಿದ ಆಕೆಯ ಗಂಡನಾದ ರಾಕ್ಷಸನು ತಮ್ಮ ಆಹಾರವನ್ನು ಯಾರೋ ಕಸಿದುಕೊಳ್ಳುತ್ತಿರಬಹುದೆಂದು ಭಾವಿಸಿ ಭಯಪಟ್ಟನು. ಇನ್ನೊಂದೆಡೆ ಆಕಾಶದಲ್ಲಿ ಈ ಹಿಂದೆ ಯಾರಿಗೂ ಕಾಣಿಸಿಕೊಳ್ಳದ ವಿಚಿತ್ರವಾದ ಭೂತಗಳು ಒತ್ತಡವಾಗಿ ಜಮಾಯಿಸುತ್ತಿದ್ದವು.

ಬೇತಾಳ, ಪಿಶಾಚ, ರಾಕ್ಷಸ ಮುಂತಾದವರು ಅಲ್ಲಿ ಸೇರಿದ್ದರಿಂದ ಎಲ್ಲರೂ ಆಗತಾನೆ ಮರಣಹೊಂದುತ್ತಿರುವ ಮನುಷ್ಯರ ಹಸಿಮಾಂಸವನ್ನು ಪಡೆಯಬೇಕೆಂದು ತರಾತುರಿಯಿಂದ ಪ್ರಯತ್ನಿಸಬೇಕಾಗಿದೆ. ಹೀಗಾಗಿ ಎಲ್ಲರೂ ಅತ್ಯಂತ ಹೆಚ್ಚು ಪ್ರಯತ್ನ ಮಾಡುವ ಮೂಲಕ ಹಸಿಮಾಂಸವನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ಕೆಲವರು ತಮ್ಮವರಲ್ಲಿ ಯಾರು ಮಾಂಸಭಕ್ಷ್ಯವನ್ನು ಅಪೇಕ್ಷಿಸುತ್ತಿದ್ದಾರೋ ಅವರ ಸಮೀಪದಲ್ಲಿ ಶವಗಳನ್ನು ಎತ್ತುಕೊಂಡು ಹೋಗಿ ರಾಶಿ ಹಾಕಿಕೊಳ್ಳುತ್ತಿದ್ದಾರೆ. ನರಿಗಳು ಮಾಂಸವನ್ನು ಕಚ್ಚಿ ತಿನ್ನುತ್ತಿವೆ. ಅವುಗಳ ಬಾಯಿಗಳು ರಕ್ತದಿಂದ ಬೆಂಕಿಯ ಜ್ವಾಲೆಯಂತೆ ಕೆಂಪಾಗಿವೆ. ಅಲ್ಲದೇ ರಕ್ತದ ಪ್ರವಾಹದಲ್ಲಿಯೇ ಬಿದ್ದು ಅಖಂಡ ಮೂರ್ಛಾಸ್ಥಿತಿಯಲ್ಲಿ ಇದ್ದುಕೊಂಡು ಎಚ್ಚರಗೊಂಡು ಅನೇಕ ಪ್ರಾಣಿಗಳು ಮೈಗೆಲ್ಲಾ ರಕ್ತವನ್ನು ಲೇಪಿಸಿಕೊಂಡು ಬರುತ್ತಿವೆ. ಅಲ್ಲಿರುವ ಮನುಷ್ಯರುಗಳ ಮೈಗಳಂತೂ ರಕ್ತದಿಂದ ವ್ಯಾಪಿಸಲ್ಪಟ್ಟಿದೆ. ಹೀಗೆ ಎಲ್ಲಾ ಕಡೆಗಳಲ್ಲಿಯೂ ರಕ್ತಮಯವಾದ ದೃಶ್ಯ, ಆಗತಾನೆ ಹುಟ್ಟಿ ಮೇಲಕ್ಕೆದ್ದು ಬಂದಿರುವ ಕೆಂಪು ಬಣ್ಣದ ಅಶೋಕ ಪುಷ್ಪಗಳ ಗುಚ್ಛವೋ ಎಂಬಂತೆ ರಣಾಂಗಣವು ಕಂಡುಬರುತ್ತಿತ್ತು.

ಆ ರಣಾಂಗಣವೇ ಬಾಲ ಬೇತಾಳಗಳಿಗೆ(ಬೇತಾಳಗಳ ಮಕ್ಕಳಿಗೆ)ಆಟದ ಸ್ಥಳ. ಅವು ತಲೆ ಕತ್ತರಿಸಲ್ಪಟ್ಟು ಬಿದ್ದಿರುವ ದೇಹಗಳಿಗೆ ಆ ತಲೆಗಳನ್ನು ತಿರುಗಿ ಜೋಡಿಸಿಡುವ ಆಟದಲ್ಲಿ ತೊಡಗಿದ್ದಾರೆ. ಕೆಲವು ಯಕ್ಷ, ರಾಕ್ಷಸ ಮತ್ತು ಪಿಶಾಚಾದಿಗಳು ಕೈಯಲ್ಲಿ ಬೆಂಕಿಯ ಕೊಳ್ಳಿಗಳನ್ನು ಹಿಡಿದು ಪ್ರಕಾಶಮಾನವಾದ ರೀತಿಯಲ್ಲಿ ತಿರುಗಿಸುತ್ತಿದ್ದಾರೆ.

ಒಟ್ಟಾರೆ ಆಕಾಶ, ಪರ್ವತ, ಪರ್ವತಗಳಲ್ಲಿರುವ ಗುಹೆಗಳ ಸಂದಿಗಳು ಹೀಗೆ ಎಲ್ಲ ಕಡೆ ದಟ್ಟವಾದ ಕತ್ತಲೆಯೆಂಬ ಮೋಡವು ಆವರಿಸಿಕೊಂಡಿದೆ. ಅಂತಹ ಘೊರ ಕತ್ತಲೆಗೆೆ ರಣಾಂಗಣವು ಪೀಠದಂತೆ ಕುಳಿತುಕೊಳ್ಳುವ ಸ್ಥಳ. ಅಲ್ಲದೇ ಅಲ್ಲಿ ಸೇರಿರುವ ವಿವಿಧ ಭೂತಗಳು(ರಾಕ್ಷಸರೇ ಮೊದಲಾದ ಮತ್ತು ನರಿಗಳೇ ಮೊದಲಾದ ಜೀವಗಳು) ವೇಗವಾದ ಚಟುವಟಿಕೆಯಿಂದ ಕೂಡಿರುವುದರಿಂದ ಆ ರಣಾಂಗಣ ಆಕುಲಗೊಂಡಿದೆ. ಪ್ರಳಯಕಾಲದ ತೀವ್ರವಾದ ಗಾಳಿಯಿಂದ ಆಕ್ರಮಿಸಲ್ಪಟ್ಟ ಜನರು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವಂತೆ ಮತ್ತು ಅವರ ಗೃಹೋಪಯೋಗಿ ಪಾತ್ರಗಳೇ ಮೊದಲಾದ ಸಂಭಾರಗಳು ಹರಡಿಕೊಂಡು ಬಿದ್ದಿರುವ ಸ್ಥಿತಿಯಲ್ಲಿ ಪ್ರಳಯಕಾಲದ ಬ್ರಹ್ಮಾಂಡೋದರವು ಹೇಗೆ ಕಾಣಿಸುತ್ತೋ ಆ ರೀತಿಯಲ್ಲಿ ಆ ರಣಾಂಗಣವು ತೋರುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net