

ಸಾಗರ: ಅಗ್ರಹಾರ ವೃತ್ತದಿಂದ ರಾಮನಗರ ಮತ್ತು ಕೆಳದಿ ರಾಣಿ ಚನ್ನಮ್ಮ ವೃತ್ತದಿಂದ ಶ್ರೀಗಂಧ ಸಂಕೀರ್ಣವರೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಅಗ್ರಹಾರ ವೃತ್ತದಲ್ಲಿ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಚನ್ನಮ್ಮ ವೃತ್ತದ ರಸ್ತೆಗೆ 5.50 ಕೋಟಿ ರೂ., ಅಗ್ರಹಾರ ವೃತ್ತದ ರಸ್ತೆಗೆ 5.50 ಕೋಟಿ ರೂ. ನೀಡಲಾಗಿದೆ. ಎರಡೂ ರಸ್ತೆಯನ್ನು ತಲಾ 46 ಅಡಿ ಅಗಲೀಕರಣ ಮಾಡಲಾಗುತ್ತಿದೆ. ಮಧ್ಯ ವಿಭಜಕ ಅಳವಡಿಸಲಾಗುತ್ತದೆ. ಗುಣಮಟ್ಟದ ರಸ್ತೆ ನಿರ್ಮಿಸಲು ಪಿಡಬ್ಲುೃಡಿಗೆ ಸೂಚಿಸಲಾಗಿದೆ. ಮೂರ‌್ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದರು.
ಅಭಿವೃದ್ಧಿ ಬಗ್ಗೆ ನನಗೆ ಬುದ್ಧಿವಾದ ಹೇಳುವುದು ಬೇಡ. ಮೂರೂವರೆ ವರ್ಷದಲ್ಲಿ ಸಾಗರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಸಾಗರದ ಎಲ್ಲ ಪ್ರಮುಖ ರಸ್ತೆ ಅಗಲೀಕರಣ ಮಾಡಲಾಗುತ್ತದೆ. ಬೈಪಾಸ್ ರಸ್ತೆ ಅಗಲೀಕರಣಕ್ಕೆ 3 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಮುಂದಿನ 15 ದಿನದೊಳಗೆ ಮಾರ್ಕೇಟ್ ರಸ್ತೆ ಅಗಲೀಕರಣದ ನೀಲಿನಕ್ಷೆ ಸಿದ್ಧಪಡಿಸಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನವನ್ನು ಕೇರಳ ಮಾದರಿ ದೇವಸ್ಥಾನದಂತೆ ಅಭಿವೃದ್ಧಿಪಡಿಸಲಾಗುತ್ತಿದೆ. ಜತೆಗೆ ಕೆರೆಕೋಡಿ ಆಂಜನೇಯ ಸ್ವಾಮಿ ದೇವಸ್ಥಾನ ಅಭಿವೃದ್ಧಿಗೂ ಚಾಲನೆ ನೀಡಲಾಗುತ್ತದೆ ಎಂದರು. ಪಿಡಬ್ಲುೃಡಿ ಎಇಇ ಅನಿಲ್, ಶಾಸಕರ ವಿಶೇಷ ಕರ್ತವ್ಯ ಅಧಿಕಾರಿ ಟಿ.ಪಿ.ರಮೇಶ್, ಗಣಪತಿ, ಸುರೇಶ ಬಾಬು, ರವಿ ಇತರರಿದ್ದರು.