ಗಟ್ಟಿ ಆಗಬೇಕಿದೆ ವೀರಶೈವ ಧರ್ಮದ ಪರಂಪರೆ

dharmasabhe in choukimatt
ಚೌಕಿಮಠದಲ್ಲಿ ವೀರಭದ್ರೇಶ್ವರ ಜಯಂತಿ ನಿಮಿತ್ತ ಧರ್ಮಸಭೆಯನ್ನು ಕೇದಾರ ಪೀಠದ ಶ್ರೀ ಭೀಮಾಶಂಕರಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಕೇದಾರ ಲಿಂಗ ಶಿವಶಾಂತ ವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಬಿ.ವೈ.ವಿಜಯೇಂದ್ರ, ಪ್ರದೀಪ್ ಕಂಕನವಾಡಿ, ಎಸ್.ಎಸ್.ಜ್ಯೋತಿಪ್ರಕಾಶ್, ಡಾ.ಧನಂಜಯ ಸರ್ಜಿ, ಎನ್.ಜೆ.ರಾಜಶೇಖರ್ ಇದ್ದರು.
Published on

ಶಿವಮೊಗ್ಗ: ವೀರಶೈವ ಧರ್ಮದ ಪರಂಪರೆ ಮತ್ತಷ್ಟು ಗಟ್ಟಿ ಆಗಬೇಕಿದೆ. ಅದು ಸಾಧ್ಯವಾಗಬೇಕಾದರೆ ಪ್ರತಿಯೊಬ್ಬರೂ ಇಷ್ಟಲಿಂಗ ಧಾರಣೆ ಮಾಡಬೇಕಿದೆ ಎಂದು ಕೇದಾರ ಪೀಠದ ಶ್ರೀ ಭೀಮಾಶಂಕರಲಿಂಗ ಸ್ವಾಮೀಜಿ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂದಿರದ ಹಿಂಭಾಗದಲ್ಲಿರುವ ಚೌಕಿಮಠದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಸಂಗೀತಯುಕ್ತ ಇಷ್ಟಲಿಂಗ ಪೂಜೆ ನೆರವೇರಿಸಿ ವೀರಭದ್ರೇಶ್ವರ ಜಯಂತ್ಯುತ್ಸವ ನಿಮಿತ್ತ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಅವರು, ಇಷ್ಟಲಿಂಗದಿಂದ ವೀರಶೈವ ಸಮಾಜಕ್ಕೆ ಮತ್ತಷ್ಟು ಶಕ್ತಿ ಬರಲಿದೆ ಎಂದರು.
ಭೂಮಿಯಲ್ಲಿ ನೀರು, ಅನ್ನ, ಒಳ್ಳೆಯ ನುಡಿಗಳು ಇದ್ದಂತೆ. ದೇಹದಲ್ಲಿ ಲಿಂಗ, ಭಸ್ಮ ಮತ್ತು ರುದ್ರಾಕ್ಷಿ ಇರಲೇಬೇಕು. ಒಂದು ಕೋಟಿ ಹಸುಗಳನ್ನು ದಾನ ಮಾಡಿದರೆ ಸಿಗುವಷ್ಟು ಪುಣ್ಯವು ಒಂದೇ ಒಂದು ರುದ್ರಾಕ್ಷಿಯನ್ನು ದಾನ ಮಾಡುವುದರಿಂದ ಪ್ರಾಪ್ತಿ ಆಗಲಿದೆ. ರುದ್ರಾಕ್ಷಿ ಮತ್ತು ಲಿಂಗ ಧರಿಸುವುದರಿಂದ ಅನೇಕ ಲಾಭಗಳಿವೆ ಎಂದರು.
ಲಿಂಗ ಎನ್ನುವುದು ಟಿಕೆಟ್ ಇದ್ದಂತೆ. ಟಿಕೆಟ್ ಇಲ್ಲದೇ ಬಸ್‌ಗಳಲ್ಲಿ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲವೋ ಬದುಕೆಂಬ ಪಯಣದಲ್ಲಿ ಲಿಂಗವಿಲ್ಲದೇ ಮುಂದೆ ಸಾಗುವುದು ಅಸಾಧ್ಯ, ಅರ್ಥರಹಿತವಾಗುತ್ತದೆ. ಜೀವನದಲ್ಲಿ ಅನೀತಿ, ಅಧರ್ಮ, ಅನಾಚಾರಗಳಿಗೆ ಅಂಜಿಕೊಳ್ಳಬೇಕೋ ವಿನಃ ಧರ್ಮ ಕಾರ್ಯಗಳಲ್ಲ. ವೀರಶೈವ ಧರ್ಮ ಜಾಗೃತಿಗೆ ಸಂಘಟನೆ ಮುಖಂಡರು ಧರ್ಮ ಕಾರ್ಯಗಳ ಮೂಲಕ ನಾಡಿನಾದ್ಯಂತ ಜಾಗೃತಿ ಮೂಡಿಸುವ ದೃಢ ಸಂಕಲ್ಪ ಮಾಡಬೇಕು. ಅದರಿಂದ ಇಡೀ ವೀರಶೈವ ಧರ್ಮದ ಸದ್ಗತಿ, ಏಳಿಗೆ ಸಾಧ್ಯವಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net