

ಹನೂರು: ತಮಿಳುನಾಡಿಗೆ ಹೊಂದಿಕೊಂಡಂತಿರುವ ತಾಲೂಕಿನ ಹೂಗ್ಯಂ ಭಾಗದ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ಸುರಿದ ಜೋರು ಮಳೆಗೆ ಕೂಡಲೂರಿನ ಮೂಲಕ ಹಾದು ಹೋಗಿರುವ ಹಾಲೇರು ಹಳ್ಳವು ಹಲವು ವರ್ಷಗಳ ನಂತರ ಮೈದುಂಬಿ ಹರಿಯಿತು.
ಹಾಲೇರು ಹಳ್ಳವು ತಮಿಳುನಾಡಿನ ಕಡಂಬೂರಿನಿಂದ ತಾಲೂಕಿನ ಜಲ್ಲಿಪಾಳ್ಯ, ಹೂಗ್ಯಂ, ಕೂಡಲೂರು, ನೆಲ್ಲೂರು, ಗರಿಕೆಕಂಡಿ ಮೂಲಕ ಹಾದು ಹೋಗಿದ್ದು, ತಮಿಳುನಾಡಿನ ಪಾಲಾರ್ ನದಿಯನ್ನು ಸೇರುತ್ತದೆ. ಈ ಹಳ್ಳವು ಈ ಭಾಗಕ್ಕೆ ದೊಡ್ಡ ಹಳ್ಳವಾಗಿದೆ. ಆದರೆ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಕೆಲ ವರ್ಷಗಳಲ್ಲಿ ಈ ಹಳ್ಳವು ಬತ್ತಿ ಹೋಗಿದ್ದರೆ, ಇನ್ನು ಕೆಲ ವರ್ಷಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇತ್ತು. ಇದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಆಗಾಗ್ಗೆ ಈ ಭಾಗದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಲೇ ಇತ್ತು. ಆದರೆ ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ ರಾತ್ರಿ ಸುರಿದ ಮಳೆಗೆ ಹಲವು ವರ್ಷಗಳಿಂದ ನೀರಿಲ್ಲದೆ ಭಣಗುಡುತ್ತಿದ್ದ ಹಾಲೇರು ಹಳ್ಳವು ಪ್ರವಾಹದಂತೆ ಮೈದುಂಬಿ ಹರಿಯಿತು. ಇದರಿಂದ ಕೊಂಚ ಅಂತರ್ಜಲ ಮಟ್ಟ ಸುಧಾರಣೆಗೆ ಸಹಕಾರಿಯಾಗಿದೆ. ಇದರಿಂದ ಈ ಭಾಗದ ರೈತರಲ್ಲಿ ಸಂತಸ ವ್ಯಕ್ತವಾಗಿರುವುದು ಒಂದೆಡೆಯಾದರೆ, ನೀರನ್ನು ಹಿಡಿದಿಟ್ಟುಕೊಳ್ಳಲು ಸುವ್ಯವಸ್ಥಿತವಾದ ಚೆಕ್ ಡ್ಯಾಂ ಇಲ್ಲದ ಪರಿಣಾಮ ನೀರು ಈ ಭಾಗಕ್ಕೆ ಉಪಯೋಗವಾಗದೆ ತಮಿಳುನಾಡಿಗೆ ಹರಿದು ಹೋಗುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಹಳ್ಳಕ್ಕೆ ಅಡ್ಡಲಾಗಿ ಸುವ್ಯವಸ್ಥಿತವಾದ ಚೆಕ್ ಡ್ಯಾಂ ನಿರ್ಮಿಸುವುದರ ಮೂಲಕ ನೀರು ಸಂಗ್ರಹಕ್ಕೆ ಅನುಕೂಲ ಕಲ್ಪಿಸುವಂತೆ ಕೂಡಲೂರಿನ ರೈತ ಮುಖಂಡ ವೆಂಕಟಾಚಲ ಒತ್ತಾಯಿಸಿದ್ದಾರೆ.