

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೂ ಮುನ್ನವೇ ‘ಗುಂಬಜ್’ ಮಾದರಿಯ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.
ನಗರದ ಸಯ್ಯಜಿರಾವ್ ರಸ್ತೆಯಲ್ಲಿನ ಹಸಿರು ಚಪ್ಪರದಲ್ಲಿ ಈ ಬಾರಿ ವಿಭಿನ್ನವಾಗಿ ವಿದ್ಯುತ್ ಅಲಂಕಾರ ಮಾಡಲಾಗಿದೆ. ಹಸಿರು ಬಣ್ಣ ದೀಪಾಲಂಕಾರ ಕಂಗೊಳಿಸುತ್ತಿದೆ. ಚಪ್ಪರ ಮೇಲ್ಭಾಗದಲ್ಲಿ ಹಸಿರು ಬಣ್ಣದ ದೀಪಗಳಿಂದ ‘ಗುಂಬಜ್’ ಹೋಲುವ ಮಾದರಿಯನ್ನು ನಿರ್ಮಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸರಿಮಾದರಿಯ ಫೋಟೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಸಯ್ಯಜಿರಾವ್ ರಸ್ತೆಯಲ್ಲಿರುವ ಇದನ್ನು ಬದಲಾಯಿಸಲು ಹೇಳಿದ್ದೇನೆ’ ಎಂಬುದಾಗಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಪರ, ವಿರೋಧ ಚರ್ಚೆ ಶುರುವಾಗಿದೆ.
ಈ ಹಿಂದೆ ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನ ಬಳಿಯ ಬಸ್ ನಿಲ್ದಾಣದ ಮೇಲ್ಭಾಗ ಗುಂಬಜ್ ಮಾದರಿ ನಿರ್ಮಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಬಸ್ ನಿಲ್ದಾಣದ ಮೇಲಿನ ಮೂರು ಗುಂಬಜ್‌ಗಳಲ್ಲಿ ಎರಡನ್ನು ತೆರವುಗೊಳಿಸಲಾಗಿತ್ತು. ಇದೀಗ ದಸರಾ ಮಹೋತ್ಸವದ ಉದ್ಘಾಟನೆ ವೇಳೆ ಅಂತಹದ್ದೇ ಮತ್ತೊಂದು ವಿವಾದ ಸೃಷ್ಟಿಯಾಗಿದೆ.