ಗ್ಯಾರಂಟಿ ಹೊರೆ ಆರ್ಥಿಕತೆಗೆ ಬರೆ! ಗುತ್ತಿಗೆದಾರರ ಹಣ ಬಾಕಿ

ವಿಜಯವಾಣಿ (5)
Published on

ಬರುತ್ತಿಲ್ಲ ಗೃಹಲಕ್ಷ್ಮಿ | ರೈತರಿಗಿಲ್ಲ ಪ್ರೋತ್ಸಾಹಧನ | ಬಿಜೆಪಿ ತೀವ್ರ ಆಕ್ರೋಶ

ಬೆಂಗಳೂರು: ಪಂಚ ಗ್ಯಾರಂಟಿ ಯೋಜನೆಯನ್ನು ಪರಿಷ್ಕರಿಸಬೇಕು, ಇಲ್ಲದ ಹೊರತು ನಮಗೆ ‘ಉಳಿಗಾಲವಿಲ್ಲ’ ಎಂಬ ಕೂಗು ಆಡಳಿತಾರೂಢ ಪಕ್ಷದ ಶಾಸಕರಿಂದ ಕೇಳಿಬರುತ್ತಿರುವ ಹೊತ್ತಲ್ಲಿ, ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಚರ್ಚೆ ಶುರುವಾಗಿದೆ. ಇತ್ತೀಚಿನ ಕೆಲವು ಬೆಳವಣಿಗೆಗಳು ಹಾಗೂ ತೀರ್ವನಗಳು ಇಂತಹದ್ದೊಂದು ಚರ್ಚೆ ಹುಟ್ಟಿಹಾಕಿದೆ. ಆರ್ಥಿಕ ಪರಿಸ್ಥಿತಿ ನಿಭಾಯಿಸುವುದು ಅಷ್ಟು ಸಲೀಸಲ್ಲ ಎಂಬ ಅಭಿಪ್ರಾಯ ಅಧಿಕಾರಿಗಳ ವಲಯದಲ್ಲೂ ಇದೆ.

‘ವಿದ್ಯುತ್ ಸರಬರಾಜು ಕಂಪನಿಗಳು ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ವಿದ್ಯುತ್ ಖರೀದಿ ಶುಲ್ಕ ಪಾವತಿಸಲು ಹಾಗೂ ಕಂಪನಿಯ ಇತರ ವೆಚ್ಚಗಳನ್ನು ಭರಿಸಲು ಕಷ್ಟಕರವಾಗುತ್ತಿದೆ’ ಎಂಬ ಅಂಶ ಇಂಧನ ಇಲಾಖೆ ನಡಾವಳಿಯಲ್ಲೇ ಉಲ್ಲೇಖವಾಗಿದೆ. ಅಷ್ಟೇ ಅಲ್ಲದೇ, ‘ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಖರೀದಿ, ಪ್ರಸರಣ ವೆಚ್ಚ ತೀರುವಳಿ ಮಾಡಲು, ಸಾಲ ಮರುಪಾವತಿ, ಆಡಳಿತ ವೆಚ್ಚ, ಶಾಸನಬದ್ಧ ವೆಚ್ಚ ಪಾವತಿಸುವುದರ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಉಂಟಾಗಿ ಕಂಪನಿಗಳ ಹಣಕಾಸಿನ ಸ್ಥಿತಿ ಗಂಭೀರವಾಗಿದೆ’ ಎಂಬ ಪ್ರಸ್ತಾಪವಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ ‘ವಿದ್ಯುತ್ ಸರಬರಾಜು ಕಂಪನಿಗಳು ವಿವಿಧ ಹಣಕಾಸು ಸಂಸ್ಥೆಗಳಿಂದ (ಪಿಎಫ್​ಸಿ/ಆರ್​ಇಸಿ), ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಸಾಲ ಪಡೆದು ಕಂಪನಿಯ ದೈನಂದಿನ ವೆಚ್ಚ ಭರಿಸುತ್ತಿದೆ.

ಅಲ್ಲದೆ ವಿದ್ಯುತ್ ಖರೀದಿದಾರ ಕಂಪನಿಗಳಿಗೆ ನಿಗದಿತ ಅವಧಿಯೊಳಗೆ ಖರೀದಿ ಶುಲ್ಕ ಪಾವತಿಸಲು ಸಾಧ್ಯವಾಗದೆ ಲೇಟ್ ಪೇಮೆಂಟ್ ಸರ್ಚಾರ್ಜ್ ಪಾವತಿಸುತ್ತಿದೆ ಎಂಬ ಅಂಶವೂ ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರುತ್ತಿದೆ. ಇದು ಗೃಹಜ್ಯೋತಿಯ ಸೈಡ್ ಎಫೆಕ್ಟ್ ಆಗಿದ್ದರೆ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ನಮಗೆ ಹಣ ಬಂದಿಲ್ಲ ಎಂದು ಹೋದಲ್ಲಿ ಬಂದಲ್ಲಿ ಚರ್ಚೆ ಮಾಡುತ್ತಿದ್ದು ಇದೂ ಸರ್ಕಾರದ ಗಮನಕ್ಕೆ ಬಂದಿದೆ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ನಿಲ್ಲಿಸಲಾಗುತ್ತದೆ ಎಂಬ ರಾಜಕೀಯ ಹೇಳಿಕೆಗಳು, ಗ್ಯಾರಂಟಿ ಯೋಜನೆಯಲ್ಲಿ ನ್ಯೂನತೆಗಳಿವೆ ಸರಿಪಡಿಸಬೇಕು ಮತ್ತು ಫಲಾನುಭವಿಗಳ ಪಟ್ಟಿ ಪರಿಷ್ಕರಣೆಯಾಗಬೇಕೆಂಬ ಸರ್ಕಾರದ ಮಟ್ಟದಲ್ಲಿನ ಕೂಗು ಮತ್ತು ರೈತರಿಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆಯಾಗದೇ ಇರುವುದು ಸಹ ಜನಸಾಮಾನ್ಯರ ಚರ್ಚೆಯನ್ನು ಬೇರೆ ದಿಕ್ಕಿನತ್ತ ಕೊಂಡೊಯ್ದಿದೆ. ಮೂರನೇ ಪ್ರಮುಖ ಅಂಶ ಎಂದರೆ, ಸರ್ಕಾರಿ ನೌಕರರ ವೇತನ ಪರಿಷ್ಕರಣೆ ವಿಳಂಬಕ್ಕೆ ಬೊಕ್ಕಸದಲ್ಲಿ ಹಣದ ಕೊರತೆಯೇ ಕಾರಣ ಎನ್ನಲಾಗಿದೆ. ಮಾಹಿತಿಗಳ ಪ್ರಕಾರ ಆಗಸ್ಟ್ ನಿಂದ ವೇತನ ಪರಿಷ್ಕರಣೆ ಜಾರಿ ಎಂದು ಹೇಳಲಾಗುತ್ತಿದೆಯಾದರೂ ಉದ್ದೇಶಪೂರ್ವಕ ವಿಳಂಬಕ್ಕೆ ಹಣಕಾಸು ಪರಿಸ್ಥಿತಿ ಕಾರಣವೆಂದು ಹೇಳಲಾಗುತ್ತಿದೆ. ಕಳೆದ ಸರ್ಕಾರದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದ ಗುತ್ತಿಗೆದಾರರು ಇದೀಗ ಪುನಃ ಕೆರಳಿ ನಿಂತಿದ್ದಾರೆ. ಬಿಬಿಎಂಪಿಯಿಂದಲೇ ಎರಡುಕಾಲು ಸಾವಿರ ಕೋಟಿ ರೂ. ಬಾಕಿ ಬರಬೇಕಾಗಿದೆ ಎಂದು ಗುತ್ತಿಗೆದಾರರು ದನಿ ಎತ್ತಿದ್ದಾರೆ. ಹಾಗೆಯೇ, ಜಲಸಂಪನ್ಮೂಲ, ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆಗಳಲ್ಲಿ ಎಲ್​ಒಸಿ ಬಿಡುಗಡೆ ವಿಳಂಬವಾಗುತ್ತಿರುವುದು ಹಾಗೂ ಹಿಂದಿನ ಅವಧಿಗಳಿಗೆ ಹೋಲಿಸಿದರೆ ಕಡಿಮೆ ಮೊತ್ತ ಬಿಡುಗಡೆಗೂ ಹಣಕಾಸು ಹೊಂದಾಣಿಕೆ ಸರ್ಕಾರಕ್ಕೆ ಕಷ್ಟವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಖ್ಯವಾಗಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರಿಶಿಷ್ಟ ಜಾತಿ, ಪಂಗಡದ ಉಪ ಯೋಜನೆಗೆ ಮೀಸಲಾದ ಹಣವನ್ನು ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಅನ್ನಭಾಗ್ಯ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ಸರ್ಕಾರದ ಒಟ್ಟು ಬಜೆಟ್ ಮೇಲಾಗುವ ಹೊರೆಯನ್ನು ತಗ್ಗಿಸಲು 14 ಸಾವಿರ ಕೋಟಿ ರೂ.ನಷ್ಟು ಸೇರಿದಂತೆ ಒಟ್ಟಾರೆ 16 ಸಾವಿರ ಕೋಟಿ ರೂ. ಬಳಸಲು ಒಪ್ಪಿಗೆ ಕೊಡಲಾಗಿದೆ. ಗ್ಯಾರಂಟಿ ಹಾಗೂ ಇತರೆ ಯೋಜನೆಗಳಲ್ಲಿ ಎಸ್ಸಿ, ಎಸ್ಟಿ ಫಲಾನುಭವಿಗಳ ಸಂಖ್ಯೆ ಪ್ರಸ್ತಾಪಿಸಿ ಆ ಪ್ರಕಾರ ಅನುದಾನವನ್ನು ಡೈವರ್ಟ್ ಮಾಡಲಾಗಿದೆ. ಈ ಮೂಲಕ ಎಸ್ಸಿಎಸ್ಪಿ ಟಿಎಸ್ಪಿ ಅನುದಾನದ ಶೇ.35ನ್ನು

ಗ್ಯಾರಂಟಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಕ್ರಮದಿಂದ ಸರ್ಕಾರದ ನಿರ್ದಿಷ್ಟ ಉದ್ದೇಶ ಈಡೇರಿದರೂ ಪರಿಶಿಷ್ಟ ಜಾತಿ, ಪಂಗಡದ ಉಪ ಯೋಜನೆ ಕಾನೂನಿನ ಪರಿಕಲ್ಪನೆಗೆ ತದ್ವಿರುದ್ಧ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಪ್ರತಿಪಕ್ಷ ಕೂಡ ಸರ್ಕಾರದ ನಿಲುವನ್ನು ಖಂಡಿಸಿದ್ದು, ಎಸ್ಸಿಎಸ್ಟಿ ಸಮುದಾಯದ ನಡುವೆ ಜಾಗೃತಿ ಮೂಡಿಸಲು ಯೋಜನೆ ರೂಪಿಸುತ್ತಿದೆ.

ರಾಜ್ಯದ ಬೊಕ್ಕಸವನ್ನೂ ಬರಿದು ಮಾಡಿಕೊಂಡು ಜನಸಾಮಾನ್ಯರ ಮೇಲೆ ದಿನಕ್ಕೊಂದು ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ರಾಜ್ಯ ಸರ್ಕಾರ ಜನ ವಿರೋಧಿ.

| ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷಸಿದ್ದನಾಮಿಕ್ಸ್​ಗೆ ಅಗ್ನಿಪರೀಕ್ಷೆ

ಅತೀ ಹೆಚ್ಚು ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರ ಅನುಭವ ಈ ಸಂಕಷ್ಟ ಸಂದರ್ಭದಲ್ಲಿ ನೆರವಿಗೆ ಬರಬಹುದೆಂಬ ವಾದ ಕಾಂಗ್ರೆಸ್​ನಲ್ಲಿದೆ. ಹಣಕಾಸು ಸಚಿವರಾಗಿ ಮತ್ತು ಮುಖ್ಯಮಂತ್ರಿಯಾಗಿ ಅರ್ಥವ್ಯವಸ್ಥೆ ಬಗ್ಗೆ ತಿಳಿದುಕೊಂಡಿ ರುವುದರಿಂದ ತಕ್ಷಣಕ್ಕೆ ಎದುರಾಗುತ್ತಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವರೆಂಬ ಅಂದಾಜು ಕೈ ನಾಯಕರದ್ದಾಗಿದೆ. ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಿಸಿದ್ದೂ ಸಹ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಭಾಗ, ಇದೇ ರೀತಿ ಇನ್ನಷ್ಟು ಮೂಲಗಳಿಂದ ಆದಾಯ ಹೆಚ್ಚಿಸುವ ಪ್ರಯತ್ನ ಸಾಗಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ರಾಜ್ಯ ಸರ್ಕಾರ ದಿವಾಳಿ ಆಗಿರೋದು ಪ್ರತಿ ಹೆಜ್ಜೆಯಲ್ಲಿ ಪ್ರದರ್ಶನ ಮಾಡುತ್ತಿದೆ. ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಿದ್ದಾರೆ, ಗ್ಯಾರಂಟಿ ಯೋಜನೆಗಳಿಗೆ ಅನುದಾನವನ್ನು ವರ್ಗಾಯಿಸುತ್ತಿದ್ದಾರೆ. ಸರ್ಕಾರ ಆರ್ಥಿಕವಾಗಿ ಸುಭದ್ರವಾಗಿದ್ದರೆ ಅವರ ಹಣಕ್ಕೆ ಯಾಕೆ ಕೈ ಹಾಕಿದ್ದಾರೆ?

| ಬಸವರಾಜ ಬೊಮ್ಮಾಯಿ ಸಂಸದ

ದಲಿತರ ಅಭಿವೃದ್ಧಿಗಾಗಿ ಮೀಸಲಿರಿಸಿದ್ದ ಹಣವನ್ನು ಗ್ಯಾರಂಟಿಗಳಿಗೆ ಹಂಚಿಕೆ ಮಾಡಿ ಪರಿಶಿಷ್ಟ ಜಾತಿಗೆ ಅನ್ಯಾಯ ಮಾಡಿದ್ದಾರೆ. ನಿಗಮವೊಂದರ 188 ಕೋಟಿ ರೂ. ಹಣ ಆಂಧ್ರದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಮುಡಾ ಹಗರಣ, ಗ್ಯಾರಂಟಿಗಳು ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ತುಪ್ಪದಂತಾಗಿದೆ. ಮುಂದಿನ ದಿನಗಳಲ್ಲಿ ಶೇ.50 ಗ್ಯಾರಂಟಿಗಳು ಕಡಿತಗೊಳ್ಳಲಿವೆ. ಜಿಪಂ ಚುನಾವಣೆ ಬಳಿಕೆ ಎಲ್ಲದರ ಬೆಲೆಗಳು ಏರಿಕೆ ಆಗಲಿವೆ.

| ಆರ್.ಆಶೋಕ್ ಪ್ರತಿಪಕ್ಷ ನಾಯಕಬಿಜೆಪಿ ನಾಯಕರ ತೀವ್ರ ವಿರೋಧ

ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕಾದ ಹಣವನ್ನು ಗ್ಯಾರಂಟಿ ಯೋಜನೆಯಲ್ಲಿ ಬಳಸಿಕೊಳ್ಳುತ್ತಿರುವುದು ಪ್ರತಿಪಕ್ಷ ಬಿಜೆಪಿ ನಾಯಕರನ್ನು ಕೆರಳಿಸಿದ್ದು, ಸಿದ್ದರಾಮಯ್ಯ ಹೇಳುವುದು ಒಂದು ಮಾಡುವುದು ಇನ್ನೊಂದು, ನುಡಿದಂತೆ ನಡೆಯುತ್ತಿಲ್ಲ ಎಂದು ಮಾತಲ್ಲೇ ಚುಚ್ಚಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇನಾದರೂ ಬಹುಶಃ ಇವತ್ತು ಬದುಕಿದ್ದರೆ, ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕಿ ತಕ್ಕ ಶಾಸ್ತಿ ಮಾಡುತ್ತಿದ್ದರು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net