ಪ್ರಪಂಚ ಒಪ್ಪಿಕೊಂಡ ಶ್ರೇಷ್ಠ ಜ್ಞಾನಿ

14 bdvt 3
ಭದ್ರಾವತಿಯ ಎನ್‌ಟಿಬಿ ನಗರಸಭೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್‌ಉದ್ಘಾಟಿಸಿದರು. ಸತ್ಯ, ಚಿನ್ನಯ್ಯ, ಎಚ್.ಪ್ರಭಾಕರ್, ಎಂ.ನಿತೀಶ್ ಇತರರಿದ್ದರು.
Published on

ಭದ್ರಾವತಿ: ಶಿಕ್ಷಣ ಇಲ್ಲದಿದ್ದರೆ ಯಾವುದೇ ವ್ಯಕ್ತಿ ಅಥವಾ ದೇಶದ ಉದ್ಧಾರ ಅಸಾಧ್ಯ. ಆದ್ದರಿಂದ ಅಂಬೇಡ್ಕರ್ ಆಶಯದಂತೆ ಶಿಕ್ಷಣದ ಮಹತ್ವ ಅರಿತುಕೊಳ್ಳಬೇಕು ಎಂದು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಹೇಳಿದರು.

ನಗರದ ಜನ್ನಾಪುರ ಎನ್‌ಟಿಬಿ ನಗರಸಭೆ ಶಾಖಾ ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪೌರಕಾರ್ಮಿಕರು ಆಯೋಜಿಸಿದ್ದ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಜನಿಸದಿದ್ದರೆ ದೇಶದ ಪರಿಸ್ಥಿತಿ ಹೇಗಿರುತಿತ್ತು ಎಂಬುದನ್ನು ಊಹಿಸಲೂ ಅಸಾಧ್ಯ. ದೇಶದಲ್ಲಿನ ಬಹಳಷ್ಟು ಬದಲಾವಣೆಗೆ ಅವರ ಆಶಯಗಳೇ ಕಾರಣ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಖಜಾಂಚಿ ಸತ್ಯ ಭದ್ರಾವತಿ ಮಾತನಾಡಿ, ಬುದ್ಧ, ಬಸವಣ್ಣನ ತರುವಾಯ ದೇಶದ ಬಹುದೊಡ್ಡ ಸಮಾಜ ಸುಧಾರಕರೆಂದರೆ ಅಂಬೇಡ್ಕರ್. ಇವರನ್ನು ಇಡೀ ಪ್ರಪಂಚವೇ ಶ್ರೇಷ್ಠ ಜ್ಞಾನಿ ಎಂದು ಒಪ್ಪಿಕೊಂಡಿದೆ. ದಲಿತರು ಕಾಯಕಕ್ಕೆ ಮಹತ್ವ ನೀಡುತ್ತಾರೆ. ಜತೆಗೆ ಮಕ್ಕಳ ಶಿಕ್ಷಣದ ಕಡೆಗೂ ಗಮನಹರಿಸಬೇಕು ಎಂದು ಹೇಳಿದರು.
ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ, ನಗರಸಭೆ ಪರಿಸರ ಅಭಿಯಂತ ಎಚ್.ಪ್ರಭಾಕರ್, ಕಿರಿಯ ಆರೋಗ್ಯ ನಿರೀಕ್ಷಕ ಎಂ.ನಿತೀಶ್, ಮುಖಂಡರಾದ ಸಿ.ಜಯಪ್ಪ, ಕಾಣಿಕ್ ರಾಜ್, ಜಿಂಕ್‌ಲೈನ್ ಮಣಿ, ಅಂತೋಣಿ, ಈಶ್ವರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net