ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞ

skp singh
ಡಾ. ಮನಮೋಹನ್ ಸಿಂಗ್ ನಿಧನ ಹಿನ್ನೆಲೆಯಲ್ಲಿ ಶಿಕಾರಿಪುರದಲ್ಲಿ ಅಹಿಂದ ಸಂಘಟನೆ ಪದಾಧಿಕಾರಿಗಳು ಮೌನಾಚರಣೆ ಮಾಡಿದರು. ಗೋಣಿ ಮಾಲತೇಶ್, ಜಗದೀಶ್, ಕಾಗಿನೆಲ್ಲಿ ರಂಗಪ್ಪ, ನಿಂಗಪ್ಪ, ಭಂಡಾರಿ ಮಾಲತೇಶ್, ರವಿಕುಮಾರ್ ಇದ್ದರು.
Published on

ಶಿಕಾರಿಪುರ: ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞರಲ್ಲಿ ಒಬ್ಬರಾಗಿದ್ದರು. ದೇಶದ ರಾಜಕೀಯದಲ್ಲಿ ಮುತ್ಸದ್ದಿ ರಾಜಕಾರಣಿಯೊಬ್ಬರು ಇಲ್ಲದಂತಾಗಿದೆ ಎಂದು ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ ಹೇಳಿದರು.

ಅಹಿಂದ ಸಂಘಟನೆ ಶುಕ್ರವಾರ ಕನಕ ಪಾರ್ಕ್‌ನಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಅತ್ಯುತ್ತಮ ಮತ್ತು ಅತ್ಯಂತ ಜನಪರ ಆಡಳಿತ ನೀಡಿದ್ದರು. ಅವರೊಬ್ಬ ಅಜಾತಶತ್ರುವಾಗಿ ಬದುಕಿದ ನಾಯಕ ಎಂದರು.

ಅವರು ಪ್ರಧಾನಿಯಾಗಿದ್ದ ಸಂದರ್ಭ ಮುಂದುವರಿದ ಮತ್ತು ಅಕ್ಕಪಕ್ಕದ ದೇಶಗಳ ಜತೆಗೆ ಜಾಗತಿಕ ಮಟ್ಟದಲ್ಲಿ ಅವಿನಾಭಾವ ಸಂಬಂಧ ಹೊಂದಿದ್ದರು. ಅವರು ತಮ್ಮ ಆಡಳಿತದಲ್ಲಿ ಭವಿಷ್ಯದ ಭಾರತದ ಬಗ್ಗೆ ದೂರದೃಷ್ಟಿ ಹೊಂದಿದ್ದರು. ಸಂವಿಧಾನದ ಆಶಯಗಳಂತೆ ಆಡಳಿತ ನಡೆಸಿದರು. ಕೃಷಿ, ವಾಣಿಜ್ಯ, ಶಿಕ್ಷಣ, ಆರೋಗ್ಯ ಸೇರಿ ಮೂಲ ಸೌಕರ್ಯಗಳ ಬಗ್ಗೆ ಗಮನಹರಿಸಿದ್ದರು ಎಂದು ಹೇಳಿದರು.

ಮಿತಭಾಷಿಯಾಗಿದ್ದ ಅವರು ಜನಹಿತ ಕಾರ್ಯಗಳ ಮೂಲಕ ಜನಪ್ರಿಯರಾಗಿದ್ದರು. ಅತಿ ಹೆಚ್ಚು ಶಿಕ್ಷಣ ಪಡೆದ ಪ್ರಧಾನಿಯಾದರೂ ಎಂದಿಗೂ ಅಹಂಕಾರಪಡದೆ ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು. ಜಗತ್ತಿನ ಎದುರು ಭಾರತ ಅದ್ಭುತವಾದ ಶಕ್ತಿಯಾಗಿ ಬೆಳೆಯಬೇಕು ಎನ್ನುವ ಕನಸು ಹೊಂದಿದ್ದರು. ಅವರು ಭಾರತ ಕಂಡ ಅಪರೂಪದ ರಾಜಕಾರಣಿ ಎಂದು ಬಣ್ಣಿಸಿದರು.

ಡಿಎಸ್‌ಎಸ್ ತಾಲೂಕು ಅಧ್ಯಕ್ಷ ಜಗದೀಶ್ ಚುರ್ಚಿಗುಂಡಿ ಮಾತನಾಡಿ, ಆಧಾರ್ ಕಾರ್ಡ್ ಯೋಜನೆ ಅವರನ್ನು ಒಬ್ಬ ದೂರದೃಷ್ಟಿಯ ನಾಯಕನನ್ನಾಗಿ ಮಾಡಿತು. ಜತೆಗೆ ನರೇಗಾ ಯೋಜನೆಯಿಂದ ಲಕ್ಷಾಂತರ ಜನರಿಗೆ ಉದ್ಯೋಗ ಲಭಿಸಿ, ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.

ಅಹಿಂದ ಸಂಘಟನೆ ಅಧ್ಯಕ್ಷ ಕಾಗಿನೆಲೆ ರಂಗಪ್ಪ, ನಿಂಗಪ್ಪ, ಭಂಡಾರಿ ಮಾಲತೇಶ್, ಕರವೇ ತಾಲೂಕು ಅಧ್ಯಕ್ಷ ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net