ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಿಸಲಾಗಿದ್ದ ಗೂಂಡಾ ಕಾಯ್ದೆ ರದ್ದು

crime
Published on

ಬೆಂಗಳೂರು: ಕೊಲೆ, ಬೆದರಿಕೆ, ಅನೈತಿಕ ವ್ಯವಹಾರ ಸೇರಿ ವಿವಿಧ ಪ್ರಕರಣಗಳ ಆರೋಪಿ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ(೩೨) ವಿರುದ್ಧ ದಾಖಲಿಸಲಾಗಿದ್ದ ಗೂಂಡಾ ಕಾಯ್ದೆಯನ್ನು ರಾಜ್ಯ ಸರ್ಕಾರ ರದ್ದುಪಡಿಸಿದ್ದು, ಜೈಲಿನಿಂದ ಬಿಡುಗಡೆಗೊಳಿಸಿದೆ.


ಕಳೆದ ೧೦ ವರ್ಷಗಳಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರು ನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ೧೦ ಪ್ರಕರಣಗಳು ದಾಖಲಾಗಿವೆ. ಪದೇ ಪದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರು ಕಳೆದ ಆಗಸ್ಟ್‌ನಲ್ಲಿ ಪುನೀತ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದರು. ಇದನ್ನು ಪುನೀತ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಈ ಕುರಿತ ವಿಚಾರಣೆಗೆ ರಾಜ್ಯ ಸರ್ಕಾರ ಸಲಹಾ ಸಮಿತಿ ರಚಿಸಿತ್ತು. ಈ ಸಮಿತಿಯು ಪುನೀತ್ ಕೆರೆಹಳ್ಳಿ ಅವರನ್ನು ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ಸಾಕಷ್ಟು ಕಾರಣಗಳು ಇಲ್ಲ ಎಂದು ವರದಿ ನೀಡಿತ್ತು. ಈ ವರದಿ ಆಧರಿಸಿ ಒಳಾಡಳಿತ ಇಲಾಖೆಯ(ಕಾನೂನು ಸುವ್ಯವಸ್ಥೆ) ಸರ್ಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಅವರು ಪುನೀತ್ ಕೆರೆಹಳ್ಳಿ ವಿರುದ್ಧ ಹೊರಡಿಸಿರುವ ಬಂಧನದ ಆದೇಶವನ್ನು ಹಿಂಪಡೆದು ಈ ಪ್ರಕರಣಕ್ಕೆ ಅನ್ವಯವಾಗುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಬಂಧಮುಕ್ತಗೊಳಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ. ಈ ಆದೇಶದ ಅನ್ವಯ ಶನಿವಾರ ಸಂಜೆ ಪುನೀತ್ ಕೆರೆಹಳ್ಳಿ ಅವರನ್ನು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net