ಅಪರೂಪದ 'ನೀಲಿ ಗೋಲ್ಕೊಂಡ ವಜ್ರ' ಹರಾಜಿಗೆ ದಿನಾಂಕ ಫಿಕ್ಸ್​! ಈ ದೇಶದಲ್ಲಿ ನಡೆಯಲಿದೆ ಬಿಡ್ಡಿಂಗ್​ ಪ್ರಕ್ರಿಯೆ | The Golconda Blue

ವಿಜಯವಾಣಿ - 2025-05-06T170143.603
Published on

The Golconda Blue: ಗೋಲ್ಕೊಂಡ ಗಣಿಗಳಲ್ಲಿ ಕಂಡುಬರುವ ಅಪರೂಪದಲ್ಲೇ ಅಪರೂಪದ ಈ ರಾಯಲ್ ನೀಲಿ ಬಣ್ಣದ ವಜ್ರ ಇದೇ ಮೇ.14ರಂದು ಜಿನೀವಾದಲ್ಲಿ ಹರಾಜು ಪ್ರಕ್ರಿಯೆಯ ಭಾಗವಾಗಲಿದೆ. ಈ 3.24 ಕ್ಯಾರೆಟ್ ನೀಲಿ ವಜ್ರದ ಉಂಗುರವನ್ನು ನ್ಯೂಯಾರ್ಕ್‌ನಲ್ಲಿರುವ ಕ್ರಿಸ್ಟೀಸ್ ಜ್ಯುವೆಲ್ಲರಿ ಶಾಪ್ ಹರಾಜಿಗಿಡಲು ಪ್ರಸ್ತಾಪಿಸಿದ್ದು, ಅಂತೆಯೇ ಕಡೆಗೂ ಬಿಡ್ಡಿಂಗ್ ಪ್ರಕ್ರಿಯೇಗೆ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಂಡಿದೆ.

ಈ ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ ಕೋಟ್ಯಾಧಿಪತಿಗಳು ಹರಾಜಿನಲ್ಲಿ ಖರೀದಿಸಲು ಭಾರೀ ಕುತೂಹಲ ವ್ಯಕ್ತಪಡಿಸಿದ್ದಾರೆ. ಕ್ರಿಸ್ಟೀಸ್ ಇಂಟರ್ನ್ಯಾಷನಲ್ ಜ್ಯುವೆಲ್ಲರಿ ಮುಖ್ಯಸ್ಥ ರಾಹುಲ್ ಕಡಕಿಯಾ ಮಾತನಾಡಿ, ಈ ಉಂಗುರವು ಒಮ್ಮೆ ಇಂದೋರ್ ಮಹಾರಾಜರಿಗೆ ಸೇರಿತ್ತು ಎಂದಿದ್ದಾರೆ. ಇಂಥದ್ದೊಂದು ಉಂಗುರವನ್ನು ಹಿಂದೆಂದೂ ಹರಾಜಾಗಿಟ್ಟಿರಲಿಲ್ಲ. ಈ ಹರಾಜಿನಲ್ಲಿ ಉಂಗುರದ ಬೆಲೆ ಬರೋಬ್ಬರಿ 300 ಕೋಟಿಯಿಂದ 430 ಕೋಟಿ ರೂ.ವರೆಗೆ ಇರಲಿದೆ ಎಂದು ಅಂದಾಜಿಸಿದ್ದಾರೆ.

259 ವರ್ಷಗಳ ಇತಿಹಾಸ

ಇಂತಹ ಅಪರೂಪದ ಮತ್ತು ಕೋಟಿಗೆ ಬೆಲೆಬಾಳುವ ವಜ್ರಗಳು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹರಾಜಿಗೆ ಬರುತ್ತವೆ. ಇದಕ್ಕೆ 259 ವರ್ಷಗಳ ಇತಿಹಾಸವಿದೆ ಎಂದು ವರದಿ ಹೇಳಿದೆ. ವರ್ಷಗಳಲ್ಲಿ, ಕ್ರಿಸ್ಟೀಸ್ ಸಂಸ್ಥೆ ವಿಶ್ವದ ಕೆಲವು ಪ್ರಸಿದ್ಧ ಮತ್ತು ಪ್ರಮುಖ ವಜ್ರಗಳನ್ನು ಮಾತ್ರ ಮಾರಾಟ ಮಾಡಿದೆ. ಆರ್ಚ್‌ಡ್ಯೂಕ್ ಜೋಸೆಫ್ ಡೈಮಂಡ್, ಪ್ರಿನ್ಸ್ಲಿ ಡೈಮಂಡ್ ಮತ್ತು ವಿಟ್ಟೆಲ್ಸ್‌ಬಾಚ್ ಡೈಮಂಡ್‌ಗಳನ್ನು ಈ ಹಿಂದಿನ ಹರಾಜುಗಳಲ್ಲಿ ಮಾರಾಟ ಮಾಡಿರುವುದಾಗಿ ರಾಹುಲ್​ ಹೇಳಿದ್ದಾರೆ.

ನೀಲಿ ವಜ್ರದ ಇತಿಹಾಸ

ನ್ಯೂಯಾರ್ಕ್‌ನ ಪ್ರಸಿದ್ಧ ಆಭರಣ ವ್ಯಾಪಾರಿ ಹ್ಯಾರಿ ವಿನ್‌ಸ್ಟನ್, 1947 ರಲ್ಲಿ ಈ ಅಪರೂಪದ ನೀಲಿ ವಜ್ರವನ್ನು ಖರೀದಿಸಿದ್ದರು. ಅವರು ಈ ನೀಲಿ ವಜ್ರ ಮತ್ತು ಅದೇ ಗಾತ್ರದ ಮತ್ತೊಂದು ಬಿಳಿ ವಜ್ರವನ್ನು ಬಳಸಿ ಬ್ರೂಚ್ ತಯಾರಿಸಿದರು. ಈ ಬ್ರೂಚ್ ಬರೋಡಾದಲ್ಲಿನ ಮಹಾರಾಜರನ್ನು ತಲುಪಿತು. ಕೆಲವು ವರ್ಷಗಳ ಬಳಿಕ ರಾಜಮನೆತನವು ಆ ಬ್ರೂಚ್ ಅನ್ನು ಓರ್ವ ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿತು. ಈಗ ಅದೇ ವಜ್ರ ಜಿನೀವಾದ ಫೋರ್ ಸೀಸನ್ಸ್ ಹೋಟೆಲ್ ಡೆಸ್ ಬರ್ಗೆಸ್‌ನಲ್ಲಿ ಹರಾಜಿಗೆ ಲಗ್ಗೆಯಿಡಲಿದೆ ಎಂದು ವರದಿ ಉಲ್ಲೇಖಿಸಿದೆ. ಅಸಲಿಗೆ ಇದು ಯಾವ ಕೋಟ್ಯಾಧೀಶ್ವರನ ಕೈಗೆ ಸೇರಲಿದೆ ಎಂಬ ಕುತೂಹಲ ನೆಟ್ಟಿಗರಲ್ಲಿ ಮೂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net