

ಬೆಂಗಳೂರು: ಹಣವಂತರು, ಮತೀಯವಾದಿ, ಕೋಮುವಾದಿ ಶಕ್ತಿಗಳು ಪ್ರಜಾಪ್ರಭುತ್ವವನ್ನು ದಮನ ಮಾಡದಂತೆ ತಡೆಯುವ, ರಕ್ಷಿಸುವ ಶಕ್ತಿ ಜನಸಾಮಾನ್ಯರು, ಮತದಾರರ ಕೈಯಲ್ಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಬಳಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರಿಗಿರುವ ಶಕ್ತಿ ಬಗ್ಗೆ ಜಾಗೃತಿ ಮೂಡಿಸಿ ಪ್ರಜಾಪ್ರಭುತ್ವದ ಬಲವರ್ಧನೆಗೆ ರಾಜ್ಯ ಸರ್ಕಾರ ದೃಢ ಸಂಕಲ್ಪ ಮಾಡಿದೆ. ಪ್ರಜಾತಂತ್ರ ವ್ಯವಸ್ಥೆಗೆ ಸಂವಿಧಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮಹತ್ವ ನೀಡಿದರು. ಸ್ವಾತಂತ್ರ್ಯ, ಸಮಾನತೆ, ನ್ಯಾಯ, ಭಾತೃತ್ವ, ಉಪಾಸನೆ, ಧಾರ್ವಿುಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಜೀವಾಳವಾಗಿದೆ ಎಂದರು. ಪ್ರಪಂಚದ ಯಾವುದೇ ದೇಶದಲ್ಲಿಲ್ಲದ ದೊಡ್ಡ ಪ್ರಜಾಪ್ರಭುತ್ವ ಆಡಳಿತ ಭಾರತದಲ್ಲಿದೆ. ಬುದ್ಧ, ಬಸವ ಕಾಲದಿಂದಲೂ ನಮ್ಮಲ್ಲಿ ಪ್ರಜಾಪ್ರಭುತ್ವವಿದೆ. ಸಮಾನತೆಯಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಡಾ.ಬಿ.ಆರ್.ಅಂಬೇಡ್ಕರ್ ಕಂಡುಕೊಂಡಿದ್ದರು ಎಂದರು.
ಗಲಿಬಿಲಿ ಸೃಷ್ಟಿಸಿದ ಆಗಂತುಕ
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡುತ್ತಿದ್ದ ವೇಳೆ ವೇದಿಕೆ ಮುಂಬದಿ ಆಸನದಲ್ಲಿ ಕುಳಿತಿದ್ದ ಆಗಂತುಕ ಯುವಕನೊಬ್ಬ ದಿಢೀರ್ ವೇದಿಕೆಯತ್ತ ನುಗ್ಗಿದ. ಇದರಿಂದಾಗಿ ಸಿಎಂ, ಸಚಿವರು ಕ್ಷಣಕಾಲ ಗಲಿಬಿಲಿಗೆ ಒಳಗಾದರು. ಕೂಡಲೇ ಮುಖ್ಯಮಂತ್ರಿ ಅಂಗರಕ್ಷಕರು, ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಯುವಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಿಸಿದಾಗ ಕನಕಪುರ ನಿವಾಸಿ, ಖಾಸಗಿ ಕಂಪನಿಯೊಂದರ ಉದ್ಯೋಗಿ ಮಹಾದೇವ ಎಂದು ಗೊತ್ತಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿ. ಶಾಲು ಹೊದಿಸಿ ಸನ್ಮಾನಿಸಲು ವೇದಿಕೆ ಏರಿದ್ದೆನೆಂಬ ಮಾಹಿತಿ ನೀಡಿದ್ದಾನೆ.
ಕ್ರೂಸರ್ ಮೇಲೆ ಮಕ್ಕಳ ಪಯಣ
ಅಭಿಯಾನವು ದೇವದುರ್ಗ ತಾಲೂಕು ಆಡಳಿತ ಅಸಮರ್ಪಕ ನಿರ್ವಹಣೆಯಿಂದಾಗಿ ಜನರಲ್ಲಿ ಗೊಂದಲ ಮೂಡಿಸಿತು. ಗೂಗಲ್ನಿಂದ ತಿಂಥಣಿ ಬ್ರಿಡ್ಜ್ವರೆಗೆ ಬರುವ ವಿವಿಧ ಶಾಲೆಗಳ ಮಕ್ಕಳನ್ನು ಆಟೋ, ಬೊಲೆರೋ, ಗೂಡ್ಸ್ ಗಾಡಿಯಲ್ಲಿ ಕರೆತರಲಾಯಿತು. ಕೆಲವು ಕಡೆ ಕ್ರೂಸರ್ ಮೇಲ್ಭಾಗದಲ್ಲಿ ಮಕ್ಕಳನ್ನು ಕೂರಿಸಿ ತರಲಾಯಿತು.
ಗಜಪಡೆ ಸಾಥ್
ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಅರಮನೆ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಬಳಿ ಭಾನá-ವಾರ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ದಸರಾ ಗಜಪಡೆಗಳು ಸಾಥ್ ನೀಡಿದ್ದು, ವಿಶೇಷವಾಗಿತ್ತು. ನಾಡಹಬ್ಬ ದಸರಾದಲ್ಲಿ ಭಾಗವಹಿಸಲು ಕಾಡಿನಿಂದ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ 13 ಆನೆಗಳು ಬೆಳಗ್ಗೆ ಬನ್ನಿಮಂಟಪದ ವರೆವಿಗೂ ತೆರಳಿ ತಾಲೀಮು- ಮುಗಿಸಿ ಬರುವಾಗ ಸಾಲಾಗಿ ನಿಲ್ಲಿಸಲಾಗಿತ್ತು. ಕಾರ್ಯಕ್ರಮಕ್ಕೆ ಡೊಳ್ಳು ಕುಣಿತ ಸೇರಿ ಇನ್ನಿತರ ಕಲಾತಂಡಗಳು ಮೆರಗು ನೀಡಿದವು.
ನವ ವಧು- ವರರು ಭಾಗಿ
ಮಾನವ ಸರಪಳಿಯಲ್ಲಿ ನವ ವಧುವರರು ಭಾಗವಹಿಸುವ ಮೂಲಕ ಗಮನಸೆಳೆದರು. ಚಾಮರಾಜನಗರದ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ತಾಲೂಕಿನ ಕಾಡಹಳ್ಳಿ ಗ್ರಾಮದ ವಕೀಲರಾದ ಮಹೇಂದ್ರ ಹಾಗೂ ಮೈಸೂರು ತಾಲೂಕಿನ ಗೋಪಾಲಪುರ ಗ್ರಾಮದ ನರ್ಸಿಂಗ್ ಶಿಕ್ಷಕಿ ಎಸ್.ರಕ್ಷಿತಾ ಅವರ ಮದುವೆ ಭಾನುವಾರ ನಿಶ್ಚಯವಾಗಿತ್ತು. ಈ ನವ ವಧು-ವರರು ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.