

ರಿಪ್ಪನ್‌ಪೇಟೆ: ನೂರಾರು ವರ್ಷಗಳ ಹಿಂದೆ ಜಿನದತ್ತರಾಯ ಪ್ರತಿಷ್ಠಾಪಿಸಿರುವ ಯಕ್ಷಿ ಪದ್ಮಾವತಿ ದೇವಿಯ ಮಹಿಮೆ ಅಪಾರ. ರಾಜ ಜಿನದತ್ತರಾಯನ ದುರಾಸೆಯನ್ನು ಪರೀಕ್ಷಿಸಿದ ತಾಯಿ ಇತರರನ್ನು ಪರೀಕ್ಷಿಸದೆ ಇರಲಾರಳು ಎಂದು ಹೊಂಬುಜ ಜೈನಮಠದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಹೊಂಬುಜ ಜೈನಮಠದಲ್ಲಿ ವಾರ್ಷಿಕ ರಥಯಾತ್ರೆ ಅಂಗವಾಗಿ ಭಾನುವಾರ ಸಿದ್ಧಾಂತ ಕೀರ್ತಿ ಪ್ರಶಸ್ತಿ ಪ್ರದಾನ, ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಜೈನಧರ್ಮದ 24 ತೀರ್ಥಂಕರರು ಧರ್ಮೋಪದೇಶ ನೀಡಿದರೆ, ಯಕ್ಷ-ಯಕ್ಷಿಯರು ಧರ್ಮಮಾರ್ಗದಲ್ಲಿ ನಡೆಯುವ ಜನರ ಶ್ರೇಯೋಭಿವೃದ್ಧಿ ಕರುಣಿಸಿದವರು. ದೇಶದ ಒಂದೊಂದು ಭಾಗದಲ್ಲಿ ಯಕ್ಷ-ಯಕ್ಷಿಣಿಯರ ಬಗ್ಗೆ ಬೇರೆಬೇರೆ ಅಭಿಪ್ರಾಯಗಳಿದ್ದರೂ ಇವರು ಅಂದಿನಿಂದಲೂ ಎಂದಿಗೂ ಶಾಶ್ವತವಾಗಿ ಇದ್ದಾರೆ, ಇರುತ್ತಾರೆ ಎಂದು ಜಿನ ಧರ್ಮಗ್ರಂಥದಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಹೊಂಬುಜದಲ್ಲಿ ನೆಲೆನಿಂತ ಚತುರ್ಭುಜ ಪದ್ಮಾವತಿಯು ಭಕ್ತರಿಗೆ ಜಯ, ಅರ್ಥ, ಸಂಪತ್ತನ್ನು ಕರುಣಿಸುವ ಸರ್ವದಾ ವರದಾಯಿನಿಯಾಗಿದ್ದಾಳೆ. ಇವಳು ನೆಲೆ ನಿಂತ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಪವಾಡ ರೂಪದಲ್ಲಿ ಈಡೇರಿಸುತ್ತಿದ್ದಾಳೆ. ಹಾಗಾಗಿ ಅತಿಶಯ ಕ್ಷೇತ್ರವೆಂದೇ ಪ್ರಸಿದ್ಧಿಯಾಗಿದೆ. ಸಮಾಜದವರು ತಪ್ಪುಗಳನ್ನು ಮಾಡದೆ ಎಲ್ಲ ಜೀವಿಗಳೊಂದಿಗೆ ಸಾಮರಸ್ಯದಿಂದ ಜೀವಪರವಾಗಿರಬೇಕು. ಜೈನಧರ್ಮದ ಅಹಿಂಸೆ, ಸತ್ಯ, ಸಮಾನತೆ, ಭ್ರಾತ್ವತ್ವಗಳನ್ನು ಅಧ್ಯಯನದೊಂದಿಗೆ ಅನುಸರಿಸಿದರೆ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಪೂರ್ವಜರಿಂದ ಉಪಕಾರ: ಜೈನಮುನಿಗಳು, ತೀರ್ಥಂಕರರು ತಮ್ಮ ಮಹತ್ಕಾರ್ಯಗಳಿಂದ ದೇಶವನ್ನು ಬೆಳಗಿದ್ದಾರೆ. ನಮ್ಮ ಪೂರ್ವಜರು ವಿಶ್ವಕ್ಕೆ ಉಪಕಾರ ಮಾಡಿದ್ದಾರೆ. ಜನಸಂಖ್ಯೆಯಲ್ಲಿ ನಾವು ಕಡಿಮೆಯಿರಬಹುದು. ಆದರೆ ಗೌರವ ಸಂಪಾದನೆಯಲ್ಲಿ ಮೊದಲಿಗರಾಗಿದ್ದೇವೆ ಎಂದು ಹಿರಿಯ ಜೈನ ವಿದ್ವಾಂಸ ರತನ್‌ಚಂದ್ ನೇಮಿನಾಥ ಕೋಟಿ ಹೇಳಿದರು. ನಮ್ಮಲ್ಲಿ ಭಕ್ತಿ, ಯುಕ್ತಿ, ಸರಳ, ಪ್ರಾಮಾಣಿಕವಾಗಿರಬೇಕು. ಪ್ರತಿದಿನ ಆತ್ಮ ಚಿಂತನೆಯನ್ನು ಮಾಡಿ, ಮಕ್ಕಳಿಗೆ ಯೋಗ್ಯ ಸಂಸ್ಕಾರ ನೀಡಿ ವಿದ್ಯಾಭ್ಯಾಸ, ನೀತಿ, ಪ್ರಾಮಾಣಿಕ ದುಡಿಮೆ ಕಲಿಸುವ ಅಗತ್ಯವಿದೆ. ಏಕೆಂದರೆ ಸತ್ಕರ್ಮಗಳಿಂದ ನಾವು ದೇವರಿಗೆ ಸಮೀಪವಾಗಬಹುದು ಎಂದರು.
ಹಿರಿಯ ಜೈನ ವಿದ್ವಾಂಸ ವಿಜಯಪುರ ಜಿಲ್ಲೆಯ ಇಂಡಿಯ ರತನ್‌ಚಂದ ನೇಮಿನಾಥ ಕೋಟಿ ಅವರಿಗೆ ಸಿದ್ಧಾಂತ ಕೀರ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾತ್ರಿ ಜಾತ್ರೋತ್ಸವದ ನಿಮಿತ್ತ ದೇವಿಯ ಬೆಳ್ಳಿ ಹಾಗೂ ಪುಷ್ಪ ರಥೋತ್ಸವಗಳು ಜರುಗಿದವು. ಅಮರ ಕೀರ್ತಿ ಮುನಿಶ್ರೀ, ಅಮೋಘ ಕೀರ್ತಿ ಮುನಿಶ್ರೀ, ಶಾಂಬಪುರ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಸೋಂದ ಮಠದ ಶ್ರೀ ಭಟ್ಟಕಲಂಕ ಭಟ್ಟಾರಕ ಸ್ವಾಮೀಜಿ, ಇಂಫಾಲದ ವಿಜಯಪಾಟ್ನಿ, ಗುವಾಹಟಿಯ ರಾಜೇಂದ್ರ ಛಾಬ್ರಾ, ಮನೋಜ್‌ಕುಮಾರ್ ಪಾಟ್ನಿ ಉಪಸ್ಥಿತರಿದ್ದರು.