ಗೆಜೆಟೆಡ್ ಪ್ರೊಬೆಷನರಿ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ?: 2011ರ ಬ್ಯಾಚ್​ಗೆ ತಾರ್ಕಿಕ ಅಂತ್ಯ ಕಾಣಿಸಲು ಸರ್ಕಾರದ ಹೆಣಗಾಟ..

State employees
Published on

ಬೆಂಗಳೂರು: ಕಳೆದ ಒಂದು ದಶಕದಿಂದ ತ್ರಿಶಂಕು ಸ್ಥಿತಿಯಲ್ಲಿರುವ ಕೆಪಿಎಸ್​ಸಿ 2011ರ ಬ್ಯಾಚ್ ಪ್ರಕರಣಕ್ಕೆ ರ್ತಾಕ ಅಂತ್ಯ ಕಾಣಿಸಲು ಸರ್ಕಾರ ಹೆಣಗಾಟ ಮುಂದುವರಿಸಿದೆ. ಭ್ರಷ್ಟಾಚಾರದ ಆರೋಪದಿಂದ ವಿವಾದಿತ 362 ಗೆಜೆಟೆಡ್ ಪೊ›ಬೆಷನರಿ ಅಧಿಕಾರಿಗಳ ನೇಮಕವನ್ನು ರಕ್ಷಿಸಲು ವಿಶೇಷ ನೇಮಕ ಕಾನೂನು ಜಾರಿಗೆ ಪೂರಕವಾಗಿ ಮಸೂದೆ ರೂಪಿಸಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ. ಈ ವಿಷಯದಲ್ಲಿ ಸಂಪುಟದಲ್ಲೇ ಒಮ್ಮತವಿಲ್ಲ ಎಂಬುದು ಗಮನಾರ್ಹ ಸಂಗತಿ. ಹಾಗೆಯೇ ಈ ನೇಮಕವನ್ನು ಸಕ್ರಮ ಗೊಳಿಸುವ ಸರ್ಕಾರದ ಆಸಕ್ತಿ ವಿರುದ್ಧ ಪ್ರಧಾನಿಗೂ ದೂರು ಸಲ್ಲಿಕೆಯಾಗಿತ್ತು. ಕೇಂದ್ರ ಕೂಡ ಅಭಿಪ್ರಾಯ ಕೇಳಿತ್ತು.

ಇಷ್ಟರ ನಡುವೆ ಕಾಯ್ದೆ ತರುವ ಮೂಲಕ ಅವರ ರಕ್ಷಣೆಗೆ ಮುಖ್ಯಮಂತ್ರಿ ಮುಂದಾಗಿದ್ದಾರೆಂಬ ಮಾಹಿತಿ ಇದೆ. ವಿಧೇಯಕ ಸೂಕ್ತ ಎಂದಾದರೆ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ತೀರ್ವನಕ್ಕೆ ಬಂದಿದ್ದು ಕಾನೂನು ಇಲಾಖೆ ಅಭಿಪ್ರಾಯ ಪಡೆಯಲಾಗಿದೆ. ಒಂದು ವೇಳೆ ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯವಾಗದೆ ಹೋದರೆ ಸುಗ್ರೀವಾಜ್ಞೆ ಮೂಲಕ ಅಭ್ಯರ್ಥಿಗಳಿಗೆ ರಕ್ಷಣೆ ನೀಡುವ ಮತ್ತೊಂದು ಯೋಚನೆ ಮುಕ್ತವಾಗಿರಿಸಿಕೊಂಡಿದೆ ಎನ್ನಲಾಗಿದೆ. ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಉನ್ನತ ಮೂಲಗಳು ಈ ಬೆಳವಣಿಗೆ ಕುರಿತು ಮಾಹಿತಿ ನೀಡಿದ್ದು, ಸದ್ಯದ ಬೆಳವಣಿಗೆ ಆಧಾರದಲ್ಲಿ ತೀರ್ವನವಾಗಲಿದೆ. 2011ರ ಬ್ಯಾಚ್ ಅಕ್ರಮದ ಕಾರಣಕ್ಕೆ ಹೈಕೋರ್ಟ್ 2018, ಮಾರ್ಚ್ 9ಕ್ಕೆ ಈ ನೇಮಕ ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದಲ್ಲೇ, ಸಂದರ್ಶನ ವೇಳೆಯೂ ನಿಯಮ ಉಲ್ಲಂಘನೆಯಾಗಿತ್ತು.

ತನಿಖಾ ವರದಿಯನ್ನು ಗಮನಿಸಿ ಹೈಕೋರ್ಟ್ ತೀರ್ಪು ನೀಡಿತ್ತು. ಹೈ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ವಜಾಗೊಳಿಸಿತ್ತು. ಹೀಗೂ ರಾಜಕೀಯ ಒತ್ತಡದ ಕಾರಣಕ್ಕೆ ಸಿಲುಕಿದ ಸರ್ಕಾರ ಕೆಪಿಎಸ್​ಸಿಯಿಂದ ಆಯ್ಕೆಯಾದ ಈ ಅಭ್ಯರ್ಥಿಗಳ ಸಮಸ್ಯೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಿತ್ತು. ಇದರ ಬಗ್ಗೆ 2020ರ ಬಜೆಟ್ ಅಧಿವೇಶನದಲ್ಲಿ ಚರ್ಚೆಯಾಗಿತ್ತು. ಅವ್ಯವಹಾರದ ಆರೋಪ ಹೊತ್ತ ಕೆಪಿಎಸ್​ಸಿ ಅಂದಿನ ಅಧ್ಯಕ್ಷ ಹಾಗೂ ಒಂಭತ್ತು ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡದಿರಲು ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡು ಅಚ್ಚರಿ ಮೂಡಿಸಿತ್ತು. ಅಕ್ರಮದ ತನಿಖೆ ನಡೆಸಿ, ಸಿಐಡಿ ತಯಾರಿಸಿದ್ದ ದೋಷಾರೋಪ ಪಟ್ಟಿಯಲ್ಲಿರುವ ಆರೋಪಿಗಳಿಗೆ ಸರ್ಕಾರದಿಂದ ಕ್ಲೀನ್​ಚಿಟ್ ಕೂಡ ಕೊಡಲಾಗಿತ್ತು. ಅವ್ಯವಹಾರದಲ್ಲಿ ಶಾಮೀಲು ಆಪಾದಿತ ಕೆಪಿಎಸ್​ಸಿ ಅಧ್ಯಕ್ಷ ಮತ್ತು ಒಂಭತ್ತು ಸದಸ್ಯರ ವಿರುದ್ಧದ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡದಿರುವ ಸಚಿವ ಸಂಪುಟ ನಿರ್ಣಯ ವಿವರಿಸಿ, ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ನೇರ ಪ್ರಸ್ತಾವನೆ ಸಲ್ಲಿಕೆಯಾಗಿತ್ತಾದರೂ ಅಧಿಕೃತ ಮಾರ್ಗದಲ್ಲಿ ಇಂತಹ ಕಡತ ಸಲ್ಲಿಸಿದರೆ ಮಾತ್ರ ಪರಿಶೀಲನೆ ಸಾಧ್ಯವೆಂದು ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿತ್ತು. ಅಲ್ಲದೇ ರಾಜ್ಯಪಾಲರ ಮುಖೇನ ರವಾನಿಸಲು ಹೇಳಿ ಪ್ರಸ್ತಾವನ್ನು ವಾಪಸ್ ಕಳಿಸಿತ್ತು.

ಸರ್ಕಾರದ ಮೇಲೆ ಒತ್ತಡ: ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವುದಾಗಿ ನೀಡಿದ ಭರವಸೆ ಉಳಿಸಿಕೊಳ್ಳಲು ಸರ್ಕಾರ ಹಲವಾರು ಸಭೆಗಳನ್ನು ನಡೆಸಿ, ಕಾನೂನು ತೊಡಕು ನಿವಾರಣೆ ನಿಟ್ಟಿನಲ್ಲಿ ಚರ್ಚೆಮಾಡಿದೆ. ಇದನ್ನು ರ್ತಾಕ ಅಂತ್ಯಕ್ಕೆ ಕೊಂಡೊಯ್ಯಲು ಸರ್ಕಾರದ ಮೇಲೆ ಒತ್ತಡ ಕೂಡ ಹೆಚ್ಚಾಗ ತೊಡಗಿದೆ. ಸದ್ಯಕ್ಕೆ ಈ ಪ್ರಸ್ತಾವನೆ ಮುಖ್ಯಮಂತ್ರಿ ಬಳಿಯಿದ್ದು, ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net