ನೆರೆ ಸಂತ್ರಸ್ತರ ಹೊಟ್ಟೆ ಸೇರಬೇಕಿದ್ದ ಆಹಾರವನ್ನು ಅಧಿಕಾರಿಗಳೇ ಕಸ ಮಾಡಿದ್ರು..!

food kits
Published on

ಗದಗ: ನೆರೆ ಸಂತ್ರಸ್ತರಿಗೆಂದು ಸರ್ಕಾರ ನೀಡಿದ ಉಚಿತ ಆಹಾರ ಕಿಟ್​ಗಳು ಅಧಿಕಾರಿಗಳ ಎಡವಟ್ಟಿನಿಂದ ಹುಳುಗಳ ಪಾಲಾಗಿವೆ.

ಪ್ರವಾಹ ಬಂದು 10 ತಿಂಗಳು ಕಳೆದರೂ ರೋಣ ತಾಲೂಕಿನ ಮೆಣಸಿಗಿ ನವಗ್ರಾಮದ ಪಶು ಆಸ್ಪತ್ರೆಯ ಕೊಠಡಿಯಲ್ಲಿ ಆಹಾರ ಕಿಟ್​ಗಳು ಕೊಳೆಯುತ್ತ ಬಿದ್ದಿವೆ. ಸುಮಾರು 380 ಆಹಾರ ಕಿಟ್​ಗಳು, ನೂರಾರು ಸೀಮೆಎಣ್ಣೆ ಕ್ಯಾನ್​ಗಳು ಹಾಳಾಗಿವೆ. ನೆರೆ ಸಂತ್ರಸ್ತರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಆಹಾರ ಕಿಟ್ ವಿತರಣೆ ಮಾಡುವಲ್ಲಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.

ಪ್ರವಾಹ ಸಂಭವಿಸಿದ ಬಳಿಕ ಅದೆಷ್ಟೋ ಕುಟುಂಬಗಳು ಅನ್ನ ನೀರಿಗಾಗಿ ಪರದಾಡಿದವು. ಆ ವೇಳೆ ಸಂತ್ರಸ್ತರಿಗಾಗಿ ರಾಜ್ಯ ಸರ್ಕಾರ ಆಹಾರ ಕಿಟ್​ಗಳನ್ನು ನೀಡಿತ್ತು. ಆ ಕಿಟ್​ಗಳನ್ನು ಪಶು ಆಸ್ಪತ್ರೆಯಲ್ಲಿ ದಾಸ್ತಾನು ಮಾಡಿದ ಜಿಲ್ಲಾಡಳಿತ ಮತ್ತು ಗ್ರಾಪಂ ಅಧಿಕಾರಿಗಳು ಜನರಿಗೆ ವಿತರಿಸದೆ ಬೇಜವಾಬ್ದಾರಿ ತೋರಿದ್ದಾರೆ.

ಪ್ರತಿ ಕಿಟ್​ನಲ್ಲಿ 10 ಕೆಜಿ ಅಕ್ಕಿ, ಅಡುಗೆ ಎಣ್ಣೆ ಪಾಕೇಟ್, ಉಪ್ಪು, ತೊಗರಿ ಬೇಳೆ, ಕುಟುಂಬಕ್ಕೆ ಬೇಕಾಗುವ ಅಗತ್ಯ ವಸ್ತುಗಳು ಇವೆ. ಅಡುಗೆ ಎಣ್ಣೆ ಅವಧಿ ಮುಗಿದು 5 ತಿಂಗಳು ಗತಿಸಿದ್ದು, ನೆರೆ ಸಂತ್ರಸ್ತರ ಹೊಟ್ಟೆ ಸೇರಬೇಕಿದ್ದ ಆಹಾರ ಧಾನ್ಯಗಳು ಹುಳುಗಳ ಪಾಲಾಗಿವೆ. ಬೇಜವಾಬ್ದಾರಿಗೆ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆರೆ ಸಂತ್ರಸ್ತರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net