ಮನಸ್ಸಿನ ಶ್ರದ್ಧಾಕೇಂದ್ರ

Untitled-design-6
Published on

ವಿಗ್ರಹ, ಶಿಲುಬೆ, ಅರ್ಧಚಂದ್ರ ಇವು ದೇವ ಮೂರ್ತಿಗಳ ಚಿಹ್ನೆ ಮಾತ್ರ. ಆಧ್ಯಾತ್ಮಿಕ ಭಾವನೆಗಳನ್ನು ತೂಗುಹಾಕುವದಕ್ಕೆ ಗೋಡೆಗಳಲ್ಲಿ ಹೊಡೆದ ಮೊಳೆಗಳಷ್ಟೆ. ಮನಸ್ಸಿನ ಶೃದ್ಧಾ ಕೇಂದ್ರವಾದದ್ದು ಮೂರ್ತಿ ಪೂಜೆ. ಈ ಹೊರಗಿನ ಸಾಧನಗಳ ಸಹಾಯ ಎಲ್ಲರಿಗೂ ಅವಶ್ಯವೆಂದು ಅಲ್ಲ, ಆದರೆ ಯಾರಿಗೆ ಇದರ ಅವಶ್ಯವಿಲ್ಲವೊ ಅವರು ಇದನ್ನು ತಪ್ಪು ಎಂದು ಹೇಳಲಾಗದು. ಆಧ್ಯಾತ್ಮಿಕ ಶೈಶವಾವಸ್ಥೆಯಲ್ಲಿ ನಮಗೆ

ಸಹಾಯ ಮಾಡುವವು ಇವು. ‘ಆಕಾರವಿಡಿದು ಅರ್ಚನೆ ಮಾಡಬೇಕ ಲ್ಲದೆ...’ ಎಂಬ ವಚನದಲ್ಲಿ ಶರಣ ಆದಯ್ಯನವರು ಸಾದನೆಯ ಮಾರ್ಗದಲ್ಲಿ ಪ್ರಥಮವಾಗಿ ಆಕಾರದರ್ಚನೆ ಬೇಕೆಬೇಕು ಎಂಬುದನ್ನು ತಿಳಿಸಿದ್ದಾರೆ. ಹೇಗೆ- ಅಂಬೆಗಾಲಿಟ್ಟು ನಡೆಯುವ ಮಗುವಿಗೆ, ಹೆಜ್ಜೆ ಗಟ್ಟಿಗೊಳ್ಳುವದಕ್ಕೆ ‘ಬಂಡಿಗಾಲಿ’ ಯಂತಹ ಆಸರೆಬೇಕೋ ಹಾಗೆ. ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿ ಮೊದಲು ಚಿತ್ತವೃತ್ತಿ ನಿರೋಧ, ಮನಸ್ಸಿನ ಏಕಾಗ್ರತೆಗೆ ವಿಗ್ರಹಗಳ ಆರಾಧನೆ ಬೇಕೆಬೇಕು. ಈ ಶೈಶಾವಸ್ಥೆಯಗಳನ್ನು ಮಿರಿ ಮುಂದುವರಿಯಬೇಕು.

ಬಾಹ್ಯಪೂಜೆ, ವಿಗ್ರಹಪೂಜೆ ಸಾಧಕರ ಪ್ರಥಮ ಹಂತ. ಮಾನಸಿಕ ಪೂಜೆ ದ್ವಿತೀಯ ಹಂತ. ಮೂರನೇ ಹಂತವಾದ ಎಂದರೆ ಸಾಕ್ಷಾತ್ಕಾರವೇ ಉತ್ತಮ ಪೂಜೆ ಎಂದು ವೇದಗಳು ಸಾರುತ್ತವೆ. ಅಂತೂ ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯಕವಾದ ವಿಗ್ರಹಾರಾಧನೆಯನ್ನು ಟೀಕಿಸುವದು ಸರಿಯಲ್ಲ. ವಯಸ್ಸು ಕಳೆದುಹೋದವನು ಬಾಲ್ಯಾವಸ್ಥೆ ಅಥವಾ ಯೌವ್ವನಾವಸ್ಥೆ ಯನ್ನು ಪಾಪವೆಂದು ದೂರುವದು(ನಿಂದಿಸುವದು) ಸರಿಯೇ? ಮನುಷ್ಯನಿಗೆ ತನ್ನ ಯಥಾರ್ಥ ಸ್ವರೂಪವನ್ನು ತಿಳಿದು ಮುಕ್ತನಾಗಲು ಒಂದು ವಿಗ್ರಹದ ಮೂಲಕ ಸಾಧ್ಯವಾಗುವದಾದರೆ, ಅದು ಸಾಧನೆಯ ಹಾದಿಯೇ. ‘ಲೋಕೋಭಿನ್ನರುಚಿಃ’- ಕುರಿಯ ಹಿಕ್ಕೆಯಲ್ಲಿ ಲಿಂಗ ಕಂಡ ಗೊಲ್ಲಾಳನ ಕಥೆ, ಬಳ್ಳದಲ್ಲಿ ಲಿಂಗವ ಕಂಡ ಮಲ್ಲೇಶನ ಕಥೆ ನೆನಪು ಮಾಡಿಕೊಳ್ಳಿ. ನಾವು ನಿರಾಕರ ಪೂಜಕರು, ಅವರು ಸಾಕಾರ ಪೂಜಕರು, ನಾವು ಶ್ರೇಷ್ಠ, ಅವರು ಕನಿಷ್ಠ ಎಂಬ ಈ ತಾರತಮ್ಯ ಯೋಗ್ಯವಲ್ಲ! ಸಾಕರ (ವಿಗ್ರಹ) ಪೂಜೆ ಅಥವಾ ಆ ಸ್ಥಿತಿಯನ್ನು ದಾಟಿ, ಮುಂದೆ ನಿರಾಕಾರ ಸ್ಥಿತಿಗೆ ಹೋದ ಮೇಲೂ ಸಾಕಾರ ಪೂಜೆ ತಪ್ಪೆನ್ನುವುದು ಸರಿಯಲ್ಲ.

(ನಾಳಿನ ಅಂತರಂಗದಲ್ಲಿ: ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು, ಉತ್ತರಾದಿ ಮಠ )

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net