ಮಂಗನ ಕಾಯಿಲೆಗೆ ಮೊದಲ ಬಲಿ; ಕೆಎಫ್​ಡಿಯಿಂದ ಸಾಗರದ ಮಹಿಳೆ ಸಾವು

KFD 12 Jan 20
Published on

ಸಾಗರ: ಮಂಗನ ಕಾಯಿಲೆ(ಕೆಎಫ್​ಡಿ)ಯಿಂದ ಬಳಲುತ್ತಿದ್ದ ತುಮರಿ ಗ್ರಾಪಂ ವ್ಯಾಪ್ತಿ ಸೀಗೆಮಕ್ಕಿಯ ಮಹಿಳೆಯೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಇದು ಈ ವರ್ಷ ಕೆಎಫ್​ಡಿ ಪಡೆದ ಮೊದಲ ಬಲಿ.

ಹೂವಮ್ಮ(58) ಮೃತರು. ಗುರುವಾರ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದ ಹೂವಮ್ಮರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಸೇರಿಸಲಾಗಿತ್ತು. ನಾಲ್ಕು ತಿಂಗಳಿಂದ ಇದುವರೆಗೆ 69 ಮಂಗಗಳು ಮೃತಪಟ್ಟಿವೆ. ಆದರೆ ಯಾವುದೇ ಮಂಗದಲ್ಲಿ ಕೆಎಫ್​ಡಿ ಸೋಂಕು ಕಂಡುಬಂದಿಲ್ಲ. ಹೂವಮ್ಮಗೆ ಇತರ ಆರೋಗ್ಯದ ಸಮಸ್ಯೆಗಳಿದ್ದವು. ಮಂಗನ ಕಾಯಿಲೆ ದೃಢಪಟ್ಟಿತ್ತಲ್ಲದೇ ಅವರು ರೋಗನಿರೋಧಕ ಚುಚ್ಚುಮದ್ದು ಪಡೆದುಕೊಂಡಿರಲಿಲ್ಲ ಎಂದು ಸಾಗರ ಟಿಎಚ್​ಒ ಡಾ. ಮುನಿವೆಂಕಟರಾಜು ತಿಳಿಸಿದ್ದಾರೆ.

ಹೂವಮ್ಮ ಮತ್ತು ಅವರ ಪತಿ ತಿಮ್ಮಾನಾಯ್ಕ ಹೊರತುಪಡಿಸಿ ಕುಟುಂಬಸ್ಥರೆಲ್ಲರೂ ಚುಚ್ಚುಮದ್ದು ಪಡೆದಿದ್ದು ಆರೋಗ್ಯವಾಗಿದ್ದಾರೆ. ತಿಮ್ಮಾನಾಯ್ಕ ಅವರಿಗೂ ತುರ್ತಾಗಿ ಚುಚ್ಚುಮದ್ದು ಪಡೆಯಲು ಸೂಚಿಸಿದ್ದೇವೆ. ಮತ್ತೊಬ್ಬ ಮಂಗನ ಕಾಯಿಲೆ ಸಂತ್ರಸ್ತ ಐಟಿಐ ವಿದ್ಯಾರ್ಥಿ ಭರತ್ ಸಾಗರ ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

24X7 ಕೆಎಫ್​ಡಿ ಚಿಕಿತ್ಸಾ ಕೇಂದ್ರ

ಮಂಗನ ಕಾಯಿಲೆ ನಿಯಂತ್ರಿಸಲು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕೆಎಫ್​ಡಿ ವಿಶೇಷ ಕೊಠಡಿ ಉನ್ನತೀಕರಣಗೊಳಿಸಲಾಗಿದೆ. ಡಾ. ಮೋಹನ್ ಅವರನ್ನು ಕೆಎಫ್​ಡಿ ಚಿಕಿತ್ಸೆಗಾಗಿಯೇ ನಿಯೋಜಿಸಲಾಗಿದೆ ಎಂದು ಟಿಎಚ್​ಒ ಡಾ. ಮುನಿವೆಂಕಟರಾಜು ತಿಳಿಸಿದ್ದಾರೆ. ದಿನದ 24 ಗಂಟೆ ಸೇವೆ ನೀಡುವ ಕೆಎಫ್​ಡಿ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಮೂರು ಆಂಬುಲೆನ್ಸ್​ಗಳಲ್ಲಿ ವೆಂಟಿಲೇಟರ್ ಅಳವಡಿಸಿ ಸೇವೆಗೆ ಸಜ್ಜುಗೊಳಿಸಲಾಗಿದೆ. ಆಯುಷ್ಮಾನ್ ಕಾರ್ಡ್ ಪಡೆಯದಿದ್ದವರಿಗೆ ನಾವೇ ತುರ್ತು ಆಯುಷ್ಮಾನ್ ಕಾರ್ಡ್ ವಿತರಿಸುತ್ತಿದ್ದೇವೆ. ಎಲ್ಲ ಪ್ರಾಥಮಿಕ ಆರೋಗ್ಯ ಘಟಕಗಳಲ್ಲೂ ಡಿಎಂಪಿ ಆಯಿಲ್ ಲಭ್ಯವಿದ್ದು ರೋಗ ನಿರೋಧಕ ಚುಚ್ಚುಮದ್ದನ್ನು ಸ್ವಯಂಪ್ರೇರಿತರಾಗಿ ಪಡೆದುಕೊಳ್ಳಬೇಕು. ಯಾವುದೇ ಜ್ವರ ಬಂದರೂ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net