ಕಸದ ರಾಶಿಗೆ ಬಿದ್ದಿದ್ದ ಬೆಂಕಿ ಜ್ವಾಲೆ ಹರಡಿ ಎರಡು ಕಾರು ಭಸ್ಮ

Fire station
Published on

ಬೆಂಗಳೂರು: ಒಣ ಕಸದ ರಾಶಿಗೆ ಬಿದ್ದಿದ್ದ ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿ ನಿಂತಿದ್ದ ಎರಡು ಕಾರುಗಳಿಗೆ ತಗುಲಿದ ಪರಿಣಾಮ ಕಾರುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ನಂದಿನಿ ಲೇಔಟ್‌ನ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ರಸ್ತೆ ಬದಿಯ ಪಕ್ಕದ ಖಾಲಿ ಖಾಗದಲ್ಲಿ ಮರದ ಒಣಗಿದ ತರಗೆಲೆ ಹಾಗೂ ಇತರೆ ಒಣ ಕಸ ಹಾಕಲಾಗಿತ್ತು. ರಾತ್ರಿ ೧೦ ಗಂಟೆ ಸುಮಾರಿಗೆ ಕಸದ ರಾಶಿಗೆ ಬೆಂಕಿ ಬಿದ್ದಿದ್ದೆ. ಕಸ ಸಂಪೂರ್ಣವಾಗಿ ಒಣಗಿದ್ದರಿಂದ ನೋಡ ನೋಡುತ್ತಿದ್ದಂತೆ ಬೆಂಕಿ ಕೆನ್ನಾಲಿಗೆ ಪಕ್ಕದಲ್ಲೇ ನಿಲುಗಡೆ ಮಾಡಿದ್ದ ಎರಡು ಕಾರುಗಳಿಗೆ ತಗುಲಿದೆ. ಪರಿಣಾಮ ಕೆಳವೇ ಕ್ಷಣಗಳಲ್ಲಿ ಕಾರುಗಳು ಸುಟ್ಟು ಕರಕಲಾಗಿದೆ. ದಟ್ಟವಾದ ಹೊಗೆ ಕಂಡು ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಎರಡು ವಾಹನಗಳ ಜತೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಕೆಲವೇ ಕ್ಷಣಗಳಲ್ಲಿ ಬೆಂಕಿ ನಂದಿಸಿದ್ದಾರೆ. ಕೊಂಚ ತಡವಾಗಿದ್ದರೂ ಪಕ್ಕದಲ್ಲೇ ನಿಲುಗಡೆ ಮಾಡಿದ್ದ ಇನ್ನಷ್ಟು ಕಾರುಗಳಿಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇತ್ತು. ಘಟನೆಗೆ ಕಸದ ರಾಶಿಗೆ ಹೊತ್ತಿಕೊಂಡ ಬೆಂಕಿಯೇ ಕಾರಣ ಎಂದು ಹೇಳಲಾಗಿದೆ. ಘಟನಾ ಸ್ಥಳದ ಸುತ್ತಾ-ಮುತ್ತ ಯಾವುದೇ ಸಿಸಿ ಕ್ಯಾಮರಾಗಳಿಲ್ಲ. ಯಾರಾದರೂ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿಯೇ ಬೆಂಕಿ ಇಟ್ಟಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net