ದ್ವಿಚಕ್ರ ವಾಹನ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ : ಅಪ್ಪನೇ ಮಗನ ಎದೆಗೆ ಇರಿದು ಹತ್ಯೆ

Crime Logo
Published on

ಬೆಂಗಳೂರು: ದ್ವಿಚಕ್ರ ವಾಹನ ವಿಚಾರಕ್ಕೆ ಅಪ್ಪ-ಮಗನ ನಡುವೆ ನಡೆದ ಜಗಳದ ವೇಳೆ ಅಡುಗೆ ಮನೆಯಲ್ಲಿದ್ದ ಚಾಕು ತಂದು ಅಪ್ಪನೇ ಮಗನ ಎದೆಗೆ ಇರಿದು ಹತ್ಯೆ ಮಾಡಿದ್ದಾನೆ.
ಡಿ ಗ್ರೂಪ್ ಲೇಔಟ್‌ನ ಮುದ್ದಿನಪಾಳ್ಯದಲ್ಲಿ ಸೋಮವಾರ ಬೆಳಗ್ಗೆ ೯ ಗಂಟೆಗೆ ಈ ಘಟನೆ ನಡೆದಿದೆ. ಅಂಜನ್ ಕುಮಾರ್(೨೭) ಕೊಲೆಯಾದ ಮಗ. ಕೊಲೆ ಮಾಡಿದ ಆರೋಪದಡಿ ಅಪ್ಪ ವೆಂಕಟೇಶ್(೫೭) ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿ ವೆಂಕಟೇಶ್ ಮಗ ಅಂಜನ್ ಕುಮಾರ್, ಮಗಳು ಹಾಗೂ ಪತ್ನಿ ಜತೆಗೆ ಮುದ್ದಿನಪಾಳ್ಯದಲ್ಲಿ ನೆಲೆಸಿದ್ದಾರೆ. ವೆಂಕಟೇಶ್ ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡಿದರೆ, ಮಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಮಗ ಅಂಜನ್ ಕುಮಾರ್ ಪಿಯುಸಿಗೆ ವ್ಯಾಸಂಗ ಮೊಟಕುಗೊಳಿಸಿದ್ದು, ಯಾವುದೇ ಕೆಲಸವಿರಲಿಲ್ಲ. ಭಾನುವಾರ ಸಂಜೆ ವೆಂಕಟೇಶ್, ಮಗಳ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೊರಗೆ ಹೋಗಿದ್ದರು. ರಾತ್ರಿ ಮನೆಗೆ ಬಂದಾಗ ದ್ವಿಚಕ್ರ ವಾಹನ ತಂದಿರಲಿಲ್ಲ. ಇದೇ ವಿಚಾರಕ್ಕೆ ಸೋಮವಾರ ಬೆಳಗ್ಗೆ ಅಂಜನ್ ಕುಮಾರ್, ತಂದೆ ವೆಂಕಟೇಶ್‌ನನ್ನು ಪ್ರಶ್ನೆ ಮಾಡಿದ್ದಾನೆ. ಆಗ ವೆಂಕಟೇಶ್ ಎಲ್ಲೋ ನಿಲ್ಲಿಸಿದ್ದೇನೆ. ಈಗ ತರುತ್ತೇನೆ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಅಪ್ಪ-ಮಗನ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಆಕ್ರೋಶಗೊಂಡ ಅಂಜನ್ ಕುಮಾರ್ ಹೆಲ್ಮೆಟ್‌ನಿಂದ ತಂದೆ ವೆಂಕಟೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪೋದ್ರಿಕ್ತರಾದ ವೆಂಕಟೇಶ್, ಅಡುಗೆ ಮನೆಗೆ ತೆರಳಿ ಚಾಕು ತಂದು ಅಂಜನ್ ಕುಮಾರ್‌ಗೆ ಎಡಭಾಗದ ಎದೆಗೆ ಇರಿದಿದ್ದಾರೆ. ಈ ವೇಳೆ ಅಂಜನ್ ಕುಮಾರ್ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಅಂಜನ್ ಕುಮಾರ್ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ವೆಂಕಟೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net