ಸೋದರ ಅಳಿಯನ ಹತ್ಯೆಗೈದು ಠಾಣೆಗೆ ಬಂದು ಶರಣಾದ ಮಾವ

Arrest Kaidhi
Published on

ಬೆಂಗಳೂರು: ಆನ್‌ಲೈನ್ ಗೇಮ್ ಗೀಳಿಗೆ ಬಿದ್ದು ಹಣಕ್ಕಾಗಿ ಪೀಡಿಸುತ್ತಿದ್ದ ಸೋದರ ಅಳಿಯನನ್ನೇ ಮಾವ ಹತ್ಯೆಗೈದು ಬಳಿಕ ಸೋಲದೇವನಹಳ್ಳಿ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ.

ಕುಂಬಾರಹಳ್ಳಿಯ ವಿನಾಯಕ ಲೇಔಟ್ ನಿವಾಸಿ ಅಮೋಘ ಕೀರ್ತಿ(೧೪) ಕೊಲೆಯಾದವ. ಆತನ ಸೋದರ ಮಾವ ನಾಗಪ್ರಸಾದ್(೫೦) ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಅಮೋಘ ಕೀರ್ತಿ ಆನ್‌ಲೈನ್ ಗೇಮ್ ಆಟಕ್ಕೆ ಹೂಡಿಕೆ ಮಾಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹೀಗಾಗಿ ಹತ್ಯೆಗೈದಿದ್ದೇನೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಆರೋಪಿ ನಾಗಪ್ರಸಾದ್ ನಗರದ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಅವರ ಸಹೋದರಿ ಶಿಲ್ಪಾ ಪುತ್ರನ ಜತೆ ಕುಂಬಾರಹಳ್ಳಿಯಲ್ಲೇ ಪ್ರತ್ಯೇಕವಾಗಿ ವಾಸವಾಗಿದ್ದರು. ಆದರೆ, ೮ ತಿಂಗಳ ಹಿಂದೆ ತಾಯಿ ಜತೆ ಜಗಳ ಮಾಡಿಕೊಂಡ ಅಮೋಘ ಕೀರ್ತಿ, ಸಮೀಪದಲ್ಲಿರುವ ತನ್ನ ಸೋದರ ಮಾವನ ಮನೆಗೆ ಬಂದು ವಾಸವಾಗಿದ್ದ. ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ಅಮೋಘಕೀರ್ತಿ, ಆನ್‌ಲೈನ್ ಗೇಮ್ ಗೀಳಿಗೆ ದಾಸನಾಗಿದ್ದ. ಹೀಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಅದನ್ನು ಮಾವ ನಾಗಪ್ರಸಾದ್ ಹಲವು ಬಾರಿ ತೀರಿಸಿದ್ದರು. ಆನ್‌ಲೈನ್ ಗೇಮ್‌ನಲ್ಲಿ ಹಣ ಹೂಡಿಕೆ ಮಾಡಲು ತನ್ನ ಮಾವನಿಗೆ ಪೀಡಿಸುತ್ತಿದ್ದ. ಈ ಕಾರಣಕ್ಕೆ ಆ.೪ರಂದು ಮುಂಜಾನೆ ೪ ಗಂಟೆಗೆ ಮಾವ ಅಳಿಯನ ನಡುವೆ ಜಗಳ ನಡೆದಿತ್ತು. ಅದು ವಿಕೋಪಕ್ಕೆ ಹೋದಾಗ ಕೋಪಗೊಂಡ ನಾಗಪ್ರಸಾದ್, ಅಮೋಘ್ ಕೀರ್ತಿಯ ಕತ್ತು ಕೊಯ್ದು ಹತ್ಯೆಗೈದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ದಿನಗಳ ನಂತರ ಖಾಕಿಗೆ ಶರಣು:

ಕೃತ್ಯ ಎಸಗಿದ ಬಳಿಕ ಆರೋಪಿ ಮನೆಗೆ ಬೀಗ ಹಾಕಿಕೊಂಡು ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದ. ಮೆಜೆಸ್ಟಿಕ್‌ನಲ್ಲೇ ಮೂರು ದಿನಗಳ ಕಾಲ ತಂಗಿದ್ದ. ಆದರೆ, ಗುರುವಾರ ರಾತ್ರಿ ಪೊಲೀಸ್ ಠಾಣೆಗೆ ಬಂದು ಹತ್ಯೆಗೈದಿರುವ ವಿಚಾರ ತಿಳಿಸಿ ಶರಣಾಗಿದ್ದಾನೆ. ಬಳಿಕ ಆತನ ಮಾಹಿತಿ ಮೇರೆಗೆ ಮನೆಗೆ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಅಮೋಘ್ ಕೀರ್ತಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ:

ಸೋದರ ಅಳಿಯನ ಹತ್ಯೆಗೈದ ಬಳಿಕ ಆತಂಕಗೊಂಡ ಆರೋಪಿ, ಕುಂಬಾರಹಳ್ಳಿಯಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ, ಕೆರೆಯಲ್ಲಿ ಕಡಿಮೆ ನೀರು ಇದ್ದಿದ್ದರಿಂದ ಆತ ಮುಳುಗಿಲ್ಲ. ನಂತರ ಮೆಜೆಸ್ಟಿಕ್ ಕಡೆ ಹೋಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net