

ಪಾಂಡವಪುರ: ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡಿರುವ ಜಮೀನು ಸರ್ವೇ ನಡೆಸಿ ಹದುಬಸ್ತಿಗಾಗಿ ತೆರಳಿದ್ದ ಅಧಿಕಾರಿಗಳು ಘಟಕ ನಿರ್ಮಾಣಕ್ಕೆ ಜಮೀನು ನೀಡಿದ್ದ ರೈತರ ನಡುವಿನ ಗೊಂದಲದಿಂದ ಸರ್ವೇ ಕಾರ್ಯ ನಡೆಸದೆ ವಾಪಸ್ಸಾದರು.
2006ರಲ್ಲಿ ಪ್ರಾರಂಭಗೊಂಡ ಒಳಚರಂಡಿ ವ್ಯವಸ್ಥೆಯ ಮಲಿನ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಪಟ್ಟಣದ ಬನ್ನಾರಿ ಮಾರಮ್ಮ ದೇವಸ್ಥಾನ ಮುಂಭಾಗದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ರೈತರ 5.20 ಎಕರೆ ಜಮೀನನ್ನು ಸ್ವಾಧೀಪಡಿಸಿಕೊಂಡು ಪುರಸಭೆಗೆ ಹಸ್ತಾಂತರಿಸಿತ್ತು. ಈ ಕಾಮಗಾರಿಗಾಗಿ ಜಮೀನು ನೀಡಿದ್ದ ರೈತರ ಜಮೀನಿನ ಮಾಲೀಕತ್ವದ ವಿಚಾರವಾಗಿ ಗೊಂದಲವೇರ್ಪಟ್ಟ ಕಾರಣ ಹದ್ದುಬಸ್ತು ಮಾಡಿಸಲು ತೆರಳಿದ್ದ ಪುರಸಭೆ, ಒಳಚರಂಡಿ ಮಂಡಳಿ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಜಮೀನು ಸರ್ವೇ ನಡೆಸದೆ ಬುಧವಾರ ಹಿಂದಿರುಗಿದರು.
ಒಳಚರಂಡಿ ನಿರ್ಮಾಣ ಕಾಮಗಾರಿಗೆ ಜಮೀನು ನೀಡಿರುವ ರೈತ ಕೆ.ನಾಗರಾಜು ಎಂಬುವರು ಸರ್ವೇ ಮಾಡಿ ಹದ್ದುಬಸ್ತು ಮಾಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರೆ ಮತ್ತೊಬ್ಬ ರೈತ ಡಿ.ಶ್ರೀನಿವಾಸ್ ಯಾವುದೇ ಕಾರಣಕ್ಕೂ ಸರ್ವೇ ಮಾಡಲು ಅವಕಾಶ ಕೊಡುವುದಿಲ್ಲ. ಮೊದಲು ನಮ್ಮ ಜಮೀನು ಎಲ್ಲಿದೆ ಎಂದು ಖಾತರಿ ಪಡಿಸಿ ಆನಂತರದಲ್ಲಿ ಸರ್ವೇ ನಡೆಸುವಂತೆ ಆಗ್ರಹಿಸಿದರು. ರೈತರ ನಡುವಿನ ಜಗಳದಿಂದಾಗಿ ಅಧಿಕಾರಿಗಳು ಯಾರ ಮಾತು ಕೇಳಬೇಕು ಎಂಬ ಗೊಂದಲಕ್ಕೆ ಸಿಲುಕಿ ಅಂತಿಮವಾಗಿ ಉಪವಿಭಾಗಾಧಿಕಾರಿ ಗಮನಕ್ಕೆ ತಂದು ಅವರ ಆದೇಶದಂತೆ ನಡೆದುಕೊಳ್ಳವುದಾಗಿ ರೈತರಿಗೆ ತಿಳಿಸಿ ಸ್ಥಳದಿಂದ ತೆರಳಿದರು.
ಸಿ.ಕೆ.ವೆಂಕಟೇಶ, ಕೆ.ನಾಗರಾಜು ಹಾಗೂ ವನಜಾಕ್ಷಮ್ಮ ಎಂಬುವರ ಜಮೀನು ಮಲಿನ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಒಳಚರಂಡಿ ಮಂಡಳಿ ಸ್ವಾಧೀನ ಪಡಿಸಿಕೊಂಡಿದೆ. ಇದರಲ್ಲಿ ಸಿ.ಕೆ.ದೇವೇಗೌಡರಿಗೆ ಮತ್ತೊಂದು ಸರ್ವೇ ನಂಬರಿನ ಜಮೀನು ಸೇರಿಲ್ಲ. ಆದರೆ ಈ ಹಿಂದಿನ ತಾಲೂಕು ಸರ್ವೇಯರ್ ಜಮೀನಿನ ನಕ್ಷೆ ಬದಲಾಯಿಸಿ ಸ್ವಾಧೀನವಾಗಿಲ್ಲದ ಸರ್ವೇ ನಂಬರ್ ಜಮೀನನ್ನು ಅಕ್ರಮವಾಗಿ ಸೇರಿಸಿ ತಪ್ಪೆಸಗಿದ್ದಾರೆ. ನಕ್ಷೆಯಂತೆ 72ನೇ ಸರ್ವೇ ನಂಬರಿನ 32 ಗುಂಟೆ ಜಮೀನು ಸ್ವಾಧೀನಕ್ಕೆ ಒಳಪಟ್ಟಿದೆ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ಕೂಡ ಹೂಡಲಾಗಿದೆ. ಅಧಿಕಾರಿಗಳು ಚೆಕ್‌ಬಂದಿ ಪ್ರಕಾರವಾಗಿ ಅಳತೆ ಮಾಡಿ ಹದ್ದುಬಸ್ತು ಪಡೆಯಬೇಕು. ಯಾರಾದರು ತೊಂದರೆ ಕೊಟ್ಟರೆ ಪೊಲೀಸ್ ರಕ್ಷಣೆಯಲ್ಲಿ ಸರ್ವೇ ಕಾರ್ಯ ನಡೆಸಿ ಎಂದು ರೈತ ಕೆ.ನಾಗರಾಜು ಅಧಿಕಾರಿಗಳ ಮುಂದೆ ವಾದಿಸಿದರು.
ಯಾವುದೇ ಕಾರಣಕ್ಕೂ ಸರ್ವೇ ಕಾರ್ಯ ನಡೆಸಲು ಬಿಡುವುದಿಲ್ಲ. ರೈತ ಡಿ.ಕೆ.ದೇವೇಗೌಡರಿಗೆ ಜಮೀನು ಸ್ವಾಧೀನಕೊಳಪಟ್ಟಿದೆ ಎಂದು ದೃಡೀಕರಣ ಪತ್ರ ನೀಡಿದರೆ ಮಾತ್ರ ಜಮೀನು ಸರ್ವೇ ಕಾರ್ಯಕ್ಕೆ ಅವಕಾಶ ಕಲ್ಪಿಸುವುದಾಗಿ ಪಟ್ಟು ಹಿಡಿದ ಪರಿಣಾಮ ಅಧಿಕಾರಿಗಳು ಸರ್ವೇ ನಡೆಸದೆ ವಾಪಸ್ಸಾದರು.
ಎರಡು ದಶಕಗಳ ಹಿಂದೆ ಪ್ರಾರಂಭವಾದ ಯುಜಿಡಿ ಕಾಮಗಾರಿಗೆ ಈವರೆಗೂ ಮುಕ್ತಿ ಕಂಡಿಲ್ಲ. ಯುಜಿಡಿ ಕಾಮಗಾರಿ ಪೂರ್ಣಗೊಳ್ಳದೆ ಇರುವ ಕಾರಣ ಪಟ್ಟಣದ ಎಲ್ಲ ರಸ್ತೆಗಳಲ್ಲಿ ಮಲಿನ ನೀರು ಉಕ್ಕಿ ಹರಿದು ಗಬ್ಬು ನಾರುತ್ತಿದೆ. ರೈತರ ನಡುವಿನ ಸಮಸ್ಯೆ ಇತ್ಯಾರ್ಥಪಡಿಸಿ ತಕ್ಷಣ ಕಾಮಗಾರಿ ಪ್ರಾರಂಭಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನಾಗರಿಕರು ಯಾತನೆ ಪಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.