ಸಕ್ಕರೆ ಕಾರ್ಖಾನೆ ಮಾಲೀಕರನ್ನು ಆನೆ ಮೇಲೆ ಕೂರಿಸಿ ಮೆರವಣಿಗೆ ಮಾಡಿದ ರೈತರು!

5000
Published on

ಬಾಗಲಕೋಟೆ: ಕಬ್ಬಿನ ಬಿಲ್ ಬಾಕಿ ಪಾವತಿಗಾಗಿ ರೈತರ ಪ್ರತಿಭಟನೆ, ಸಮರ್ಪಕ ವೇತನಕ್ಕಾಗಿ ಸಕ್ಕರೆ ಕಾರ್ಖಾನೆ ವಿರುದ್ದ ಕಾರ್ಮಿಕರ ಹೋರಾಟ ಎಂದೆಲ್ಲ ಕೇಳೋದು ಸಾಮಾನ್ಯ. ಆದರೆ, ಇಲ್ಲಿ ಒಂದು ಕಾರ್ಖಾನೆ, ಸಾವಿರಾರು ರೈತರ ಬದುಕು ಆರ್ಥಿಕವಾಗಿ ಬದಲಾಗಲು ಕಾರಣವಾಯ್ತು. ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸಿಕ್ಕಿತು. ಇದರಿಂದ ಖುಷ್ ಆದ ರೈತರು ಮತ್ತು ಕಾರ್ಮಿಕರು, ಕಾರ್ಖಾನೆ ಮಾಲೀಕರ ಕುಟುಂಬವನ್ನು ಆನೆ, ಸಾರೋಟದ ಮೇಲೆ‌ ಕೂರಿಸಿ ಭರ್ಜರಿ ಮೆರವಣಿಗೆ ಮಾಡಿದ್ದಾರೆ.

1970ರಲ್ಲಿ ಬಾಗಲಕೋಟೆ ಅಖಂಡ ವಿಜಯಪುರ ಜಿಲ್ಲೆಯ ಒಂದು ಭಾಗವಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯ ರೈತರು ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಿರಲಿಲ್ಲ. ರೈತರಿಗೆ ಜಿಲ್ಲೆಯಲ್ಲಿ ಒಂದು ಸಕ್ಕರೆ ಕಾರ್ಖಾನೆ ಅವಶ್ಯಕವಾಗಿ ಬೇಕಾಗಿತ್ತು. ಆಗ ಮುಂಬೈನಿಂದ ಬಂದ ಉದ್ಯಮಿ ಕೆಜೆ ಸೋಮಯ್ ಅವರು ಸೈದಾಪುರ ಭಾಗದಲ್ಲಿ ಗೋದಾವರಿ ಸಕ್ಕರೆ ಕಾರ್ಖಾನೆ ಆರಂಭಿಸಿದರು.

ಅಂದಿನಿಂದ ಈ ಭಾಗದಲ್ಲಿ ರೈತರು ಹೆಚ್ಚು ಪ್ರಮಾಣದಲ್ಲಿ ಕಬ್ಬು ಬೆಳೆಯಲು ಆರಂಭಿಸಿದರು. ಇದರಿಂದ ಆರ್ಥಿಕ ಅಭಿವೃದ್ಧಿಯತ್ತ ರೈತರು ಸಾಗಿದರು. ಕಾರ್ಖಾನೆ ಆರಂಭವಾದ ಮೇಲೆ ಮೂರು ಸಾವಿರಕ್ಕೂ ಅಧಿಕ ಜನರಿಗೆ ಕೆಲಸ ಸಿಕ್ಕಿದೆ. 25 ಸಾವಿರಕ್ಕೂ ಅಧಿಕ ರೈತರು ಕಾರ್ಖಾನೆಗೆ ಕಬ್ಬನ್ನು ಸಾಗಿಸುತ್ತಿದ್ದಾರೆ. ಇದೀಗ ಈ ಕಾರ್ಖಾನೆಗೆ 50 ವರ್ಷ ಪೂರೈಸಿದೆ.

ಜಿಲ್ಲೆಯ 12 ಸಕ್ಕರೆ ಕಾರ್ಖಾನೆಗಳಿಗೆ ಹೋಲಿಸಿದರೆ ಗೋದಾವರಿ ಸಕ್ಕರೆ ಕಾರ್ಖಾನೆ ರೈತರಿಗೆ ಬಿಲ್‌ ಕೊಡುವ ನಿಟ್ಟಿನಲ್ಲಿ, ಸೂಕ್ತ ಬೆಲೆ ವಿಚಾರದಲ್ಲಿ ಕಟ್ಟುನಿಟ್ಟಾಗಿದೆ. ರೈತರು, ಕಾರ್ಮಿಕರ ಜೊತೆ ಉತ್ತಮ ಸಂಬಂಧ ಹೊಂದಿದೆ. ಇದೇ ಹಿನ್ನೆಲೆಯಲ್ಲಿ ರೈತರು ಮತ್ತು ಕಾರ್ಮಿಕರು ಇಷ್ಟೊಂದು ಅದ್ದೂರಿ ಕಾರ್ಯಕ್ರಮ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net