

ಜಗತ್ತಿನಲ್ಲಿ ಶಿಕ್ಷಕರಿಗಿಂತ ಪವಿತ್ರ ವೃತ್ತಿ ಬೇರೊಂದಿಲ್ಲ. ತಾವು ಕಷ್ಟ-ಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿದ್ದರೂ ಮಕ್ಕಳನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವ ಮಹಾನುಭಾವರು ಅವರು. ಸಂಬಳಕ್ಕಾಗಿ ದುಡಿಯದೆ, ಮಕ್ಕಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವಿಶಿಷ್ಟ ಸಮುದಾಯವೇ ಶಿಕ್ಷಕರು. ಕರೊನಾ ಸಂಕಷ್ಟದ ಸಂದರ್ಭದಲ್ಲೂ ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ನಡುವೆ ಮುರುಟಿಹೋಗದಂತೆ ಶಿಕ್ಷಕರು ವಹಿಸಿದ ಕಾಳಜಿ ಎಂದೆಂದಿಗೂ ಸ್ಮರಣೀಯ. ಕರೊನಾ ಕಾಲದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ನವನವೀನ ಪ್ರಯತ್ನ, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ ಅನುಭವಗಳನ್ನು ನಾಡಿನ ಸಾವಿರಾರು ಶಿಕ್ಷಕರು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದು, ಕೆಲವು ಆಯ್ದ ಅನುಭವಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ನಾಡಿನ ಎಲ್ಲ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.
ಸವಾಲು ಜಯಿಸಿದ ಸಂಭ್ರಮ
ಮಲೆನಾಡಿನ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯಕ್ಕೆ ಕರೊನಾದಿಂದ ಮಂಕಾಗುತ್ತಿರುವುದು ಸಹಜವಾಗಿ ಆತಂಕ ಮೂಡಿಸಿತ್ತು. ಮೊಬೈಲ್, ಇಂಟರ್ನೆಟ್ ಸೌಲಭ್ಯ ಸಮರ್ಪಕವಾಗಿ ಇರದ ಮಲೆನಾಡಿನ ಹಳ್ಳಿಗಳಲ್ಲಿ ಆನ್ಲೈನ್ ಶಿಕ್ಷಣ ಕನಸಿನ ಮಾತು. ಸಂಕಷ್ಟದ ಅರಿವಿದ್ದರೂ ಪ್ರಯತ್ನ ಮಾಡದೇ ಸೋಲೊಪ್ಪಿಕೊಳ್ಳಲು ನಾವ್ಯಾರೂ ಸಿದ್ಧರಿರಲಿಲ್ಲ. ಮೊದಲಿಗೆ ತರಗತಿಗೊಂದರಂತೆ ವಾಟ್ಸ್ಆಪ್ ಗ್ರೂಪ್ಗಳಾದವು. ಸೌಲಭ್ಯವಿಲ್ಲದ ಮಕ್ಕಳನ್ನು ಹತ್ತಿರದ ಮನೆಯ ಮಕ್ಕಳೊಂದಿಗೆ ಜೋಡಿಸಿದೆವು. ವಾರದ ಮೊದಲೇ ಪಾಲಕರಿಗೆ ಸೂಚನೆ ನೀಡಿ ಪೂರ್ವ ತಯಾರಿ ಮಾಡಿಕೊಂಡೆವು. ಆ ನಂತರ ನಾವೂ ಸಾಕಷ್ಟು ಪೂರ್ವ ತಯಾರಿ ನಡೆಸಿ ತರಗತಿಗಳನ್ನು ಪ್ರಾರಂಭಿಸಿ ತಕ್ಕ ಮಟ್ಟಿಗೆ ಯಶಸ್ಸು ಸಾಧಿಸಿದ್ದೇವೆ. ವಿದ್ಯಾರ್ಥಿಗಳು ಬರವಣಿಗೆ, ಕಲಿಕೆ ಸ್ಥಿತಿಗತಿಯನ್ನು ಫೋಟೋ, ವಿಡಿಯೋ ರೂಪದಲ್ಲಿ ಹಿಮ್ಮಾಹಿತಿ ಕಳಿಸುತ್ತಿದ್ದಾರೆ. ಈಗ ಕಣ್ಣುಗಳಿಗೆ ನೆಮ್ಮದಿಯ ನಿದ್ರೆ ದೊರೆಯುತ್ತಿದೆ.
| ಚೈತ್ರಾ ಸಹ ಶಿಕ್ಷಕಿ, ಕಮ್ಮರಡಿ, ಕೊಪ್ಪ ತಾಲೂಕು