

ಗುಂಡ್ಲುಪೇಟೆ: ನಮ್ಮ ದೇಶದ ಆದಿಕವಿ ವಾಲ್ಮೀಕಿ ಮಹರ್ಷಿ ಅವರು ರಚಿಸಿದ ಮಹಾಕಾವ್ಯ ರಾಮಾಯಣ ಸರ್ವಕಾಲಿಕ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಭಿಪ್ರಾಯಪಟ್ಟರು.
ತಾಲೂಕು ಅಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಗುರು ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಮುದಾಯ ಬೆಳೆಯಲು ಎಲ್ಲರ ಸಹಕಾರ ಅಗತ್ಯ. ಎಲ್ಲರನ್ನೂ ನಮ್ಮ ಮನೆಯ ಮಗನೆಂದು ಪ್ರೀತಿಸಿ, ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಬಸವಣ್ಣನವರು ಹೇಳುತ್ತಾರೆ. ಬಸವಣ್ಣನ ವಚನವು ಸಾಮಾಜಿಕ ಸಮಾನತೆ ಮತ್ತು ಮಾನವೀಯತೆಯ ತತ್ವಗಳನ್ನು ಸಾರುತ್ತದೆ. ಏಕೆಂದರೆ ಇದು ಜಾತಿ, ಕುಲ, ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಬೆಸೆಯುವ ಮೂಲಕ ಎಲ್ಲರೂ ಸಮಾನರು ಎಂದೇಳುತ್ತದೆ ಎಂದರು.
ಮುಖ್ಯ ಭಾಷಣಕಾರ ಕರ್ನಾಟಕ ರಾಜ್ಯ ಮುಕ್ತ ವಿವಿ ಮನೋವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ತಮ್ಮ ರಾಮಾಯಣ ಮಹಾಕಾವ್ಯದ ಮೂಲಕ ನೀಡಿದ ಚಿಂತನೆಗಳು ದಿನೇ ದಿನೆ ಪ್ರಸಿದ್ಧಿ ಪಡೆದುಕೊಂಡು ಸಮಾಜಕ್ಕೆ ಸರ್ವಕಾಲಕ್ಕೂ ದಾರಿದೀಪವಾಗಿದೆ. ರಾಮಾಯಣ ಮಹಾಕಾವ್ಯದ ಶ್ಲೋಕಗಳು ಸಾಮಾಜಿಕ ಮೌಲ್ಯಗಳು, ಆದರ್ಶ ಪರಂಪರೆ, ಮಾನವೀಯ ಮೌಲ್ಯಗಳು, ಮಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮದ ಸಂದೇಶಗಳಾಗಿವೆ ಎಂದು ಬಣ್ಣಿಸಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಪಿ.ಶಶಿಧರ್(ದೀಪು) ಉಪಾಧ್ಯಕ್ಷ ಶ್ರೀನಿವಾಸ್ ಕಣ್ಣಪ್ಪ, ಸದಸ್ಯರಾದ ಪಿ.ಗಿರೀಶ್, ಎನ್. ಕುಮಾರ್, ಎಸ್.ಕುಮಾರ್, ಅಣ್ಣಯ್ಯಸ್ವಾಮಿ, ಮುಖಂಡರಾದ ಎನ್.ಮಲ್ಲೇಶ್, ಪುರಸಭೆ ಮಾಜಿ ಉಪಾಧ್ಯಕ್ಷ ಕಾರ್ಗಳ್ಳಿ ಸುರೇಶ, ಪಿ.ಲಿಂಗರಾಜು, ಹಂಗಳ ವೃಷಭೇಂದ್ರ ಮಹೇಶ್, ಬಿಳಿಗಿರಿ ರಂಗನಾಯಕ, ಸಿದ್ದನಾಯಕ ಸೇರಿದಂತೆ ಇತರರಿದ್ದರು.