ಮಾಜಿ ಸಚಿವರ ಆಸ್ತಿ ವಿವರ ಕೆದಕಿದ ಜಾರಿ ನಿರ್ದೇಶನಾಲಯ

nagendra
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ), ಬಂಧಿತ ಮಾಜಿ ಸಚಿವ ಬಿ.ನಾಗೇಂದ್ರ ಅವರ ಆದಾಯ ಮತ್ತು ಆಸ್ತಿ ವಿವರವನ್ನು ಜಾಲಾಡುತ್ತಿದೆ. 2023ರ ವಿಧಾನಸಭಾ ಚುನಾವಣಾ ಪೂರ್ವ ಅಫಿಡವಿಟ್​ನಲ್ಲಿ ನಾಗೇಂದ್ರ ಘೊಷಿಸಿಕೊಂಡಿದ್ದ ಆಸ್ತಿ ವಿವರ ಮತ್ತು ಅವರ ಆದಾಯ, ಈಗಿನ ಆಸ್ತಿ ವಿವರವನ್ನು ಇಡಿ ಅಧಿಕಾರಿಗಳು ತಾಳೆ ಹಾಕಲಾರಂಭಿಸಿದ್ದಾರೆ.

ಅಫಿಡವಿಟ್​ನಲ್ಲಿ 17.20 ಕೋಟಿ ರೂ. ಗೂ ಅಧಿಕ ಮೌಲ್ಯದ ಆಸ್ತಿಯನ್ನು ಬಿ. ನಾಗೇಂದ್ರ ಘೊಷಿಸಿದ್ದರು. ಬ್ಯಾಂಕ್ ಖಾತೆ, ವಿಮಾ ಪಾಲಿಸಿ, ಖಾಸಗಿ ಕಂಪನಿಯಲ್ಲಿ ಹೂಡಿಕೆ, ವಾಹನ, ಚಿನ್ನಾಭರಣ ಸೇರಿ 12.35 ಕೋಟಿ ರೂ. ಚರಾಸ್ತಿಯನ್ನು ಉಲ್ಲೇಖಿಸಿದ್ದರು. ಇನ್ನು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಉಪ್ಪರಹೊಸಹಳ್ಳಿ ಗ್ರಾಮದ 4 ಎಕರೆ 25 ಗುಂಟೆ ಜಮೀನು, ಬಳ್ಳಾರಿಯ ನೆಹರು ಕಾಲನಿ, ಬೆಂಗಳೂರಿನ ಎಚ್​ಎಸ್​ಆರ್ ಲೇಔಟ್​ನಲ್ಲಿ ಫ್ಲಾ್ಯಟ್, ನ್ಯೂ ಬಿಇಎಲ್ ರಸ್ತೆಯಲ್ಲಿ ಫ್ಲಾ್ಯಟ್ ಸೇರಿ 4.88 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ಮಾಹಿತಿ ನೀಡಿದ್ದರು. ಈ ದಾಖಲೆಗಳ ಪ್ರಕಾರ ಆಸ್ತಿಯ ವಿವರ, ಆದಾಯದ ಮೂಲಗಳನ್ನು ಹಿಂದಿನ ಅವರ ಘೊಷಿತ ಆಸ್ತಿಯ ವಿವರದೊಂದಿಗೆ ಇ.ಡಿ ಅಧಿಕಾರಿಗಳು ತಾಳೆ ಹಾಕುತ್ತಿದ್ದಾರೆ. ತನಿಖೆ ವೇಳೆ ವ್ಯತ್ಯಾಸ ಕಂಡು ಬಂದಲ್ಲಿ ನಾಗೇಂದ್ರಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 95 ಕೋಟಿ ರೂ. ದುರ್ಬಳಕ್ಕೆ ಆಗಿರುವುದು ಬೆಳಕಿಗೆ ಬಂದಿದೆ. ಸರ್ಕಾರದ ಹಣ ದುರ್ಬಳಕ್ಕೆ ಮತ್ತು ಅಕ್ರಮ ವಹಿವಾಟು ಆರೋಪದಲ್ಲಿ ನಷ್ಟದ ಮೊತ್ತವನ್ನು ಜಪ್ತಿ ಮಾಡುವ ಉದ್ದೇಶಕ್ಕೆ ಇಡಿ ಅಧಿಕಾರಿಗಳು ನಾಗೇಂದ್ರ ಮತ್ತು ಇತರ ಆರೋಪಿಗಳ ಆಸ್ತಿಯನ್ನು ಅಗತ್ಯ ಇದ್ದರೆ ಜಪ್ತಿ ಮಾಡುವ ಸಾಧ್ಯತೆಗಳು ಇವೆ. ಅದರಿಂದ ಇಡಿ ಅಧಿಕಾರಿಗಳು ಮಾಜಿ ಸಚಿವರ ಆಸ್ತಿಯ ವಿವರಗಳನ್ನು ಸಹ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

26 ಎಫ್​ಐಆರ್, 42 ಕೋರ್ಟ್ ವಿಚಾರಣೆ: ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಲೋಕಾಯುಕ್ತ ಸಂಸ್ಥೆಯ ಎಸ್​ಐಟಿಯಲ್ಲಿ 21 ಎಫ್​ಐಆರ್ ದಾಖಲಾಗಿವೆ. ಅದೇ ರೀತಿಯಾಗಿ ಸಿಬಿಐನಲ್ಲಿ 4 ಮತ್ತು ಸಿಐಡಿಯಲ್ಲಿ 1 ಕೇಸ್ ದಾಖಲಾಗಿದ್ದು, ಬಹುತೇಕ ಗಣಿ ಹಗರಣ ಸಂಬಂಧಪಟ್ಟ ಕೇಸ್​ಗಳಾಗಿವೆ. ಇದೇ ಕೇಸ್ ಸಂಬಂಧ ಮತ್ತು ಇತರ ಪ್ರಕರಣ ಸೇರಿ 41 ಪ್ರಕರಣಗಳು ವಿವಿಧ ಕೋರ್ಟ್​ಗಳಲ್ಲಿ ವಿಚಾರಣೆ ನಡೆಯುತ್ತಿದೆ.

ನಾಗೇಂದ್ರ ಪರ ಕೋರ್ಟ್​ಗೆ ಮೊರೆ: ಇಡಿ ಅಧಿಕಾರಿಗಳ ಕಸ್ಟಡಿಯಲ್ಲಿ ಇರುವ ಬಿ. ನಾಗೇಂದ್ರ ಅವರನ್ನು ಭೇಟಿ ಮಾಡಲು ಅವಕಾಶ ಕೊಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಮಾಜಿ ಸಚಿವರ ಪರ ವಕೀಲರು, ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬಿ. ನಾಗೇಂದ್ರ ಅವರಿಗೆ ಆರೋಗ್ಯ ಸರಿ ಇಲ್ಲ. ಕೋರ್ಟ್ ಸೂಚನೆ ಇದ್ದರೂ ಅವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಿಲ್ಲ. ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುವಂತೆ ಇಡಿಗೆ ನಿರ್ದೇಶನ ಕೊಡಬೇಕೆಂದು ನಾಗೇಂದ್ರ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಜುಲೈ 18ರ ವರೆಗೂ ಇಡಿ ಕಸ್ಟಡಿಯಲ್ಲಿ ಇರುವ ನಾಗೇಂದ್ರಗೆ ಪ್ರತಿದಿನ 3 ತಾಸು ಮಾತ್ರ ವಿಚಾರಣೆ ನಡೆಸಬೇಕು. ಒಮ್ಮೆ ವಿಚಾರಣೆ ನಡೆಸಿದ ಬಳಿಕ 30 ನಿಮಿಷ ವಿಶ್ರಾಂತಿ ಕೊಡಬೇಕು. ಪ್ರತಿದಿನ ಆರೋಗ್ಯ ಪರೀಕ್ಷೆ ಮಾಡಿಸಬೇಕೆಂದು ಕೋರ್ಟ್ ಸೂಚನೆ ನೀಡಿತ್ತು. ಅದೇ ರೀತಿಯಾಗಿ ಪ್ರತಿದಿನ ಸಂಜೆ ಬೌರಿಂಗ್ ಆಸ್ಪತ್ರೆ ವೈದ್ಯರು, ಶಾಂತಿನಗರದ ಇಡಿ ಪ್ರಾದೇಶಿಕ ಕಚೇರಿಗೆ ಹೋಗಿ ನಾಗೇಂದ್ರ ಅವರ ಆರೋಗ್ಯ ತಪಾಸಣೆ ನಡೆಸಿ ಬರುತ್ತಿದ್ದಾರೆ.

ಎಸ್​ಐಟಿ ಬಲೆಗೆ ಮತ್ತೊಬ್ಬ ಆರೋಪಿ: ವಾಲ್ಮೀಕಿ ನಿಗಮದ ಹಗರಣ ಸಂಬಂಧ ಚುರುಕಿನ ತನಿಖೆ ನಡೆಸುತ್ತಿರುವ ಸಿಐಡಿಯ ವಿಶೇಷ ತನಿಖಾ ತಂಡ (ಎಸ್​ಐಟಿ) ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ. ಇಲ್ಲಿಗೆ ಸೆರೆಸಿಕ್ಕವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಹೈದರಾಬಾದ್ ಮೂಲದ ಶ್ರೀನಿವಾಸ್ ರಾವ್ ಅಲಿಯಾಸ್ ಖಾಕಿ ಶ್ರೀನಿವಾಸ್ ರಾವ್ ಬಂಧಿತ. ಗ್ರಾಫಿಕ್ ಡಿಜೈನರ್ ಆದ ಈತನ ಖಾತೆಗೆ 10 ಕೋಟಿ ರೂ. ವರ್ಗಾವಣೆಯಾಗಿತ್ತು. ಪ್ರಕರಣ ಬೆಳಕಿಗೆ ಬಂದ ಮೇಲೆ ನಾಪತ್ತೆ ಆಗಿದ್ದ ಎಂದು ಎಸ್​ಐಟಿ ಮೂಲಗಳು ಮಾಹಿತಿ ನೀಡಿವೆ. ಎಂ.ಜಿ.ರಸ್ತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಿಂದ ನಿಗಮದ ಖಾತೆಯಿಂದ ಹೈದರಾಬಾದ್​ನ 18 ಬ್ಯಾಂಕ್ ಖಾತೆಗಳಿಗೆ 94 ಕೋಟಿ ರೂ. ವರ್ಗಾವಣೆಯಾಗಿತ್ತು. ಈ ಖಾತೆಗಳ ಮೇಲ್ವಿಚಾರಣೆ ವಹಿಸಿಕೊಂಡಿದ್ದ ಬಂಧಿತ ಸತ್ಯನಾರಾಯಣ ವರ್ವ, ಈ ಬ್ಯಾಂಕ್ ಖಾತೆಯಿಂದ ಖಾಕಿ ಶ್ರೀನಿವಾಸ್ ರಾವ್ ಹೆಸರಿಗೆ 10 ಕೋಟಿ ರೂ. ವರ್ಗಾವಣೆ ಮಾಡಿದ್ದ. ಹಣ ಡ್ರಾ ಮಾಡಿಕೊಂಡಿದ್ದ ಖಾಕಿ ಶ್ರೀನಿವಾಸ್ ರಾವ್, ಪ್ರಕರಣ ಬೆಳಕಿಗೆ ಬರುತ್ತಿದಂತೆ ಎಸ್​ಐಟಿ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ನಿರಂತರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಕೊನೆಗೂ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿ ಹಣ ಜಪ್ತಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net