

ಬೆಂಗಳೂರು: ಹದಿನೈದನೇ ವಿಧಾನಸಭೆ ಕಲಾಪ ಶುಕ್ರವಾರ ಇತಿಹಾಸದ ಪುಟ ಸೇರಿತು. ಮೇ 23ರಂದು ಪ್ರಸಕ್ತ ವಿಧಾನಸಭೆ ಅವಧಿ ಕೊನೆಗೊಳ್ಳಲಿದ್ದು, ಅಷ್ಟರೊಳಗೆ ನಡೆಯುವ ಸಾರ್ವತ್ರಿಕ ಚುನಾವಣೆಯು ಮುಂದಿನ ಶಾಸನಸಭೆಯನ್ನು ರೂಪಿಸಲಿದೆ.
15ನೇ ವಿಧಾನಸಭೆ ಹಲವು ಅಚ್ಚರಿ ಸಂಗತಿಗಳಿಗೂ ಸಾಕ್ಷಿಯಾಗಿದೆ. ಒಂದಷ್ಟು ರಾಜಕೀಯ ವ್ಯತ್ಯಾಸಗಳು, ಪರಸ್ಪರ ಟೀಕೆ-ಟಿಪ್ಪಣಿಗಳ ನಡುವೆ ಅರ್ಥಪೂರ್ಣ ಚರ್ಚೆಗೂ ಸಾಕ್ಷಿಯಾದ ವಿಧಾನಸಭೆ ಶುಕ್ರವಾರ ತನ್ನ ಕೊನೆಯ ಕಲಾಪ ನಡೆಸಿತು. ಚುನಾವಣೆ ಸುಧಾರಣೆ, ಸಂವಿಧಾನ ಕುರಿತ ವಿಶೇಷ ಚರ್ಚೆಗೂ ಅವಕಾಶ ಸೃಷ್ಟಿಯಾಗಿತ್ತು. ದೇಶವೇ ತಿರುಗಿ ನೋಡುವಂತಹ ಬೃಹನ್ನಾಟಕವನ್ನೊಳಗೊಂಡ ರಾಜಕೀಯ ಪಲ್ಲಟ, ಸಾಂವಿಧಾನಿಕ ಬಿಕ್ಕಟ್ಟಿನ ಸನ್ನಿವೇಶ, ಮಹತ್ವದ ಕಾನೂನು ಜಾರಿಗೂ ಸಾಕ್ಷಿಯಾಯಿತು. ಅಲ್ಲದೇ ರಾಜ್ಯದ ಪ್ರಮುಖ ನಾಯಕನೊಬ್ಬನ ಚುನಾವಣಾ ರಾಜಕೀಯದ ನಿವೃತ್ತಿಯನ್ನೂ ಕಂಡಿತು. ಮುಂದಿನ ಎರಡೂವರೆ ತಿಂಗಳು ರಾಜಕೀಯ ಬಹಿರಂಗ ಕದನ ನಡೆಯಲಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ಗರಿಷ್ಠತಮ ಹೋರಾಟ ನಿಚ್ಚಳ. ಮಾರ್ಚ್ ಎರಡನೇ ವಾರದ ಹೊತ್ತಿಗೆ ನೀತಿಸಂಹಿತೆ ಜಾರಿಯಾಗಲಿದೆ.
ಮೇ ನಾಲ್ಕನೇ ವಾರದಲ್ಲಿ ಹೊಸ ಸರ್ಕಾರ ರಚನೆಯ ಸಡಗರವಿರಲಿದೆ. ಆರಂಭದಲ್ಲಿ ಅತಂತ್ರ ವಿಧಾನಸಭೆ ನಡುವೆಯೇ ಎರಡು ದಿನದ ಸರ್ಕಾರ, ಬಳಿಕ ಪರಸ್ಪರ ಅಪನಂಬಿಕೆ ಹೊಂದಿದ ಮೈತ್ರಿ ಸರ್ಕಾರ ರಚನೆ, ಆಪರೇಷನ್ ಕಮಲದ ಪರಿಣಾಮ ವಿಶ್ವಾಸಮತದಲ್ಲಿ ಸೋಲಾಗಿ ಮೈತ್ರಿ ಸರ್ಕಾರ ಪತನ, ಬಿಜೆಪಿಯಿಂದ ಸರ್ಕಾರ ರಚನೆ, ಉಪ ಚುನಾವಣೆಯಲ್ಲಿ ಗೆಲುವಿನೊಂದಿಗೆ ಬಹುಮತ ಗಳಿಕೆ- ಈ ಅವಧಿಯ ಸಾರಾಂಶ.
ನೆನಪಿನ ಹೆಜ್ಜೆ: 2018ರ ಮೇ 12ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸೋಲೊಪ್ಪಿಕೊಂಡಿತು. ಯಾವುದೇ ಪಕ್ಷ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಹೊಂದಿಲ್ಲದ ಕಾರಣ ರಾಜ್ಯಪಾಲರು ಅತಿದೊಡ್ಡ ಪಕ್ಷವಾಗಿದ್ದ ಬಿಜೆಪಿಯನ್ನು (104 ಸ್ಥಾನ) ಆಹ್ವಾನಿಸಿದ್ದರು. ಮೇ 17ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ರಾಜ್ಯಪಾಲರು 15 ದಿನದೊಳಗೆ ಬಹುಮತ ಸಾಬೀತಿಗೆ ಅವಕಾಶ ನೀಡಿದ್ದರು. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಸುಪ್ರಿಂಕೋರ್ಟ್ ಮೆಟ್ಟಿಲೇರಿತು. 24 ಗಂಟೆಯಲ್ಲೇ ಬಹುಮತ ಸಾಬೀತಿಗೆ ಕೋರ್ಟ್ ಸೂಚಿಸಿತು. ಮೇ 19ರಂದು ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚಿಸಬೇಕಿತ್ತು. ಬಹುಮತ ಸಾಬೀತು ಕಷ್ಟ ಎಂದರಿತ ಯಡಿಯೂರಪ್ಪ ಭಾವನಾತ್ಮಕ ಭಾಷಣ ಮಾಡಿ ರಾಜೀನಾಮೆ ನೀಡಿದರು. ಇದು ಅತೀ ಕಡಿಮೆ ಅವಧಿಯ ಸಿಎಂ ಎಂಬ ದಾಖಲೆ ಸೃಷ್ಟಿಸಿತು.
ಈ ಬೆಳವಣಿಗೆಗೆ ಮುನ್ನ ಕಾಂಗ್ರೆಸ್ ನಾಯಕರು ದೇವೇಗೌಡರ ಮನೆ ಕದ ತಟ್ಟಿ ಮೈತ್ರಿ ಸರ್ಕಾರ ರಚನೆಯನ್ನು ಖಾತ್ರಿ ಮಾಡಿಕೊಂಡಿದ್ದರು. ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗುವಂತೆ ದೇವೇಗೌಡರು ಸಲಹೆಯನ್ನೂ ನೀಡಿದ್ದರು. ಆದರೆ, ಖರ್ಗೆಯವರು ರಾಜಕೀಯ ಬೆಳವಣಿಗೆಯ ದೂರದೃಷ್ಟಿ ಅರಿತು ಈ ಅವಕಾಶ ಒಪ್ಪಲಿಲ್ಲ. ಅಂತಿಮವಾಗಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಅವಕಾಶ ಒದಗಿಬಂತು. 2018ರ ಮೇ 23ರಿಂದ 2019ರ ಜುಲೈ 23ರವರೆಗೂ ಎಚ್ಡಿಕೆ ತೂಗುಯ್ಯಾಲೆಯಲ್ಲೇ ಸರ್ಕಾರ ನಡೆಸಿದರು. ಮುಂಬೈನಲ್ಲಿ ಶಾಸಕರ ವಾಸ್ತವ್ಯ, ಶಾಸಕರ ರಾಜೀನಾಮೆ, ಬಹುಮತ ಸಾಬೀತುಪಡಿಸುವಲ್ಲಿ ವಿಫಲದ ಬಳಿಕ ಎಚ್ಡಿಕೆ ಅವಧಿ ಮುಕ್ತಾಯವಾಯಿತು.
ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ 17 ಅತೃಪ್ತ ಶಾಸಕರು ಅನರ್ಹತೆ ಶಿಕ್ಷೆಗೂ ಗುರಿಯಾದರು. ಈ ನಡುವೆ ಸಂಖ್ಯಾಬಲದ ವ್ಯತ್ಯಾಸದಿಂದ ಬಿಜೆಪಿಗೆ ಅಧಿಕಾರ ದಕ್ಕಿದರೆ, ಶಾಸಕರ ಅನರ್ಹತೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಶಾಸಕರು ಪುನಃ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಪಡೆದರು. ಬಹುಪಾಲು ಮಂದಿ ಗೆದ್ದರು, ಕೆಲವರು ಸೋತರು. ಗೆದ್ದವರಲ್ಲಿ ಪ್ರಭಾವಿಗಳು ಸಚಿವ ಸ್ಥಾನಕ್ಕೆ ಗಿಟ್ಟಿಸಿದರು ಎಂಬಲ್ಲಿಗೆ ಡೋಲಾಯಮಾನ ರಾಜಕೀಯ ಬೆಳವಣಿಗೆ ಸಹಜತೆಗೆ ಮರಳಿತು.
ಇದಕ್ಕೂ ಮುನ್ನ ಜುಲೈ 29ರಂದು ಯಡಿಯೂರಪ್ಪ ಬಹುಮತ ಯಾಚಿಸಿ ಗೆಲುವಿನ ನಗೆ ಬೀರಿದ್ದರು. ಶಾಸಕರ ಅನರ್ಹತೆಯಿಂದ ವಿಧಾನಸಭೆ ಬಲ 208ಕ್ಕೆ ಕುಸಿದಿತ್ತು. 105 ಶಾಸಕ ಬಲ ಹೊಂದಿದ್ದ ಬಿಎಸ್ವೈ ಧ್ವನಿಮತದಿಂದ ಗೆಲುವು ಸಾಧಿಸಿದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆದುಕೊಂಡಿದ್ದರಿಂದ ಮ್ಯಾಜಿಕ್ ನಂಬರ್ ದಾಟಿ ತನ್ನ ನೆಲೆ ಭದ್ರಪಡಿಸಿಕೊಂಡಿತ್ತು.
ನಂತರದ ಬೆಳವಣಿಗೆಯಲ್ಲಿ ಬಿಎಸ್ವೈ ರಾಜೀನಾಮೆ ಪರ್ವ ಮಹತ್ವದ್ದೆನಿಸಿತು. 2021ರ ಜುಲೈ 26ರಂದು ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಎಸ್ವೈ ಆಪ್ತ ವಲಯದಲ್ಲಿದ್ದ ಬಸವರಾಜ ಬೊಮ್ಮಾಯಿಯವರಿಗೆ ಸಿಎಂ ಸ್ಥಾನ ಅರಸಿ ಬಂತು. ಜುಲೈ 28ರಂದು ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಈವರೆಗೂ ಮುಂದುವರಿದಿದ್ದಾರೆ.
15ನೇ ವಿಧಾನಸಭೆಯಲ್ಲಿ ರಮೇಶ್ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಪತಿ ಸ್ಥಾನ ಅಲಂಕರಿಸಿ ಶಾಸನಸಭೆ ಮುನ್ನಡೆಸಿದರೆ, ಯಡಿಯೂರಪ್ಪ ಎರಡು ಬಾರಿ, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ವಿಧಾನಸಭೆ ಪ್ರತಿಪಕ್ಷ ಸ್ಥಾನವನ್ನು ಮೂರೂವರೆ ವರ್ಷ ಸಿದ್ದರಾಮಯ್ಯ ನಿಭಾಯಿಸಿದರೆ, ಆ ಜವಾಬ್ದಾರಿ ಒಂದೂವರೆ ವರ್ಷ ಯಡಿಯೂರಪ್ಪ ಹೆಗಲೇರಿತ್ತು. ಮೇಲ್ಮನೆಯ ಈ ಅವಧಿಯ ಬಹುಪಾಲು ಅವಧಿ ಕಾಂಗ್ರೆಸ್ ಹಿಡಿತದಲ್ಲೇ ಇತ್ತು. ಬಸವರಾಜ ಹೊರಟ್ಟಿ ಸಭಾಪತಿಯಾಗಿದ್ದರು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಬಹುಮತ ಗಳಿಸಿತು. ಹೊರಟ್ಟಿ ಬಿಜೆಪಿಯಿಂದಲೇ ಕಣಕ್ಕಿಳಿದು ಸಭಾಪತಿಯಾಗಿ ಆಯ್ಕೆಯಾದರು. ಮೇಲ್ಮನೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಸಭಾನಾಯಕರಾದರೆ, ಬಿ.ಕೆ. ಹರಿಪ್ರಸಾದ್ ಪ್ರತಿಪಕ್ಷ ನಾಯಕನಾಗಿ ಅವಕಾಶ ಸದುಪಯೋಗಪಡಿಸಿಕೊಂಡರು.