ಚುನಾವಣೆಯಲ್ಲಿ ಸೋಲಾಗಿರಬಹುದು, ಹೋರಾಟಕ್ಕೆ ಎಂದಿಗೂ ಸೋಲಿಲ್ಲ

9ckm1 (2)
ಚಿಕ್ಕಮಗಳೂರಿನ ನಾಲ್ಕನೇ ವಾರ್ಡ್‌ನ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿದರು. ಪುಟ್ಟಸ್ವಾಮಿ, ಜಾನಯ್ಯ, ರೇವನಾಥ್, ಎಚ್.ಎಂ.ನಾರಾಯಣ್ ಇದ್ದರು.
Published on

ಚಿಕ್ಕಮಗಳೂರು: ಹಿಂದುತ್ವದ ಸಿದ್ದಾಂತ, ತತ್ವಕ್ಕಾಗಿ ರಾಜಕೀಯಕ್ಕೆ ಬಂದಿರುವ ನನಗೆ ಚುನಾವಣೆಯಲ್ಲಿ ಸೋಲಾಗಿರಬಹುದು ಆದರೆ, ನನ್ನ ಹೋರಾಟಕ್ಕೆ ಸೋಲಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಶುಕ್ರವಾರ ಸಂಜೆ ಹಿರೇಮಗಳೂರಿನಲ್ಲಿ ನಡೆದ ನಾಲ್ಕನೇ ವಾರ್ಡ್‌ನ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ದತ್ತ ಪೀಠದ ಮುಕ್ತಿಗಾಗಿ ನಿರಂತರ ಹೋರಾಟದಲ್ಲಿ ಹಿಂದುಗಳಿಗೆ ನ್ಯಾಯ ಕೊಡಿಸಿದೆ. ಜನಪರವಾಗಿ ನಡೆಸಿದ ಹೋರಾಟಗಳಲ್ಲಿ 64ಕ್ಕೂ ಹೆಚ್ಚು ಪೊಲೀಸ್ ಪ್ರಕರಣಗಳು ನನ್ನ ವಿರುದ್ಧ ದಾಖಲಾಗಿದ್ದವು. ಆದರೆ, ಚುನಾವಣೆಯಲ್ಲಿ ಅಪಪ್ರಚಾರಗಳಿಗೆ ಮಣೆ ಹಾಕಿದ ಜನರು ನನ್ನನ್ನು ಸೋಲಿಸಿದರು ಎಂದು ವಿಷಾದಿಸಿದರು.
ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಲಿಟಿ ಆಸ್ಪತ್ರೆ, ರಸ್ತೆಗಳ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯ, ಕಾಲೇಜುಗಳ ಉನ್ನತೀಕರಣ, ದೇವಾಲಯಗಳ ಜೀರ್ಣೋದ್ಧಾರ, ಯಾತ್ರಿ ನಿವಾಸಗಳ ನಿರ್ಮಾಣ, ಕ್ರೀಡಾಂಗಣ ಉನ್ನತೀಕರಣ, ಕ್ಷೇತ್ರದಾದ್ಯಂತ ಪರಿಶಿಷ್ಟ ಜಾತಿ-ವರ್ಗ ಸೇರಿದಂತೆ ಎಲ್ಲ ಜಾತಿ ಜನಾಂಗದವರಿಗೆ ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 5,300 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ನನ್ನ ಅವಧಿಯಲ್ಲಿ ಒಂದೂ ಕೋಮುಗಭೆಗಳು ಈ ಕ್ಷೇತ್ರದಲ್ಲಿ ನಡೆಯಲು ಅವಕಾಶ ನೀಡಿಲ್ಲ. ಯಾರ ವಿರುದ್ಧವೂ ದ್ವೇಷ ಸಾಧಿಸಲಿಲ್ಲ. ಕಾನೂನು ಮತ್ತು ಜಿಲ್ಲಾಡಳಿತದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಒಬ್ಬ ಮುಖ್ಯಮಂತ್ರಿ ತನ್ನ ಕ್ಷೇತ್ರದಲ್ಲಿ ಮಾಡದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳು ಚರ್ಚೆಗೆ ಬರುವ ಬದಲು ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸುವ ಮೂಲಕ ಸೋಲಿಸಿದರು ಎಂದು ಹೇಳಿದರು.
ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಜಾನಯ್ಯ, ರೇವನಾಥ್, ಎಚ್.ಎಂ.ನಾರಾಯಣ್, ಬಸವರಾಜ್, ಬಿಜೆಪಿ ನಗರ ಘಟಕ ಅಧ್ಯಕ್ಷ ಮಧುಕುಮಾರ ರಾಜ ಅರಸ್, ಕೋಟೆ ರಂಗನಾಥ್, ಸೀತರಾಮ ಭರಣ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net