ಕಿಟಕಿಯಲ್ಲಿದ್ದ ಕೀ ತೆಗೆದುಕೊಂಡು ಕಳ್ಳತನ ಮಾಡಿದ್ದ ಚಾಲಕ ಸೆರೆ

arrested
Published on

ಬೆಂಗಳೂರು: ಡ್ರಾಪ್ ಮಾಡಿದ ಬಳಿಕ ಪ್ರಯಾಣಿಕರ ಮನೆಗೆ ವಾಪಾಸ್ ಬಂದು ನಗದು ಸೇರಿ ಚಿನ್ನಾಭರಣ ಕಳವು ಮಾಡಿದ್ದ ಆಟೋ ಚಾಲಕನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆನೇಕಲ್‌ನ ಬ್ಯಾಟರಾಯನದೊಡ್ಡಿಯ ಗ್ರಾಮದ ಕಾರ್ತಿಕ್ ಕುಮಾರ್ ಅಲಿಯಾಸ್ ಟ್ಯಾಟೋ ಕಾರ್ತಿ(೨೫) ಬಂಧಿತ. ಆರೋಪಿಯಿಂದ ೮ ಲಕ್ಷ ರೂ. ಮೌಲ್ಯದ ೧೪೧ ಗ್ರಾಂ ಚಿನ್ನಾಭರಣ, ೨೫೦ ಗ್ರಾಂ ಬೆಳ್ಳಿವಸ್ತುಗಳು, ಎರಡು ಸಾವಿರ ರೂ. ನಗದು, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋ ಜಪ್ತಿ ಮಾಡಲಾಗಿದೆ. ಜ.೭ರಂದು ಕಾಮಾಕ್ಷಿಪಾಳ್ಯ ವೃಷಭಾವತಿನಗರ ನಿವಾಸಿ ಪ್ರೇಮನಾಥ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿನ್ನಾಭರಣ, ನಗದ ಕಳವು:

ಪ್ರೇಮನಾಥ ಅವರು ಜ.೭ರಂದು ಬೆಳಗ್ಗೆ ವೈಯಕ್ತಿಕ ಕೆಲದ ನಿಮಿತ್ತ ನೆಲಮಂಗಲಕ್ಕೆ ತೆರಳಿದ್ದಾರೆ. ಬೆಳಗ್ಗೆ ೧೧ ಗಂಟೆ ಪ್ರೇಮನಾಥ ಅವರ ಪತ್ನಿ ಮತ್ತು ಪುತ್ರ ಸಂಬಂಧಿಕರೊಬ್ಬರನ್ನು ಸ್ಯಾಟ್‌ಲೆಟ್ ಬಸ್ ನಿಲ್ದಾಣಕ್ಕೆ ಬಿಟ್ಟುಬರುವ ಸಲುವಾಗಿ ಆ್ಯಪ್‌ನಲ್ಲಿ ಆಟೋ ಬುಕ್ ಮಾಡಿದ್ದಾರೆ. ಈ ವೇಳೆ ಆರೋಪಿ ಕಾರ್ತಿಕ್ ಪ್ರೇಮನಾಥ ಅವರ ಮನೆಗೆ ಬಳಿ ಬಂದಿದ್ದಾನೆ. ಈ ವೇಳೆ ಪ್ರೇಮನಾಥ ಅವರ ಪತ್ನಿ, ಪುತ್ರ ಹಾಗೂ ಸಂಬಂಧಿಕನೊಬ್ಬ ಆಟೋ ಹತ್ತಿಕೊಂಡು ಸ್ಯಾಟ್‌ಲೆಟ್ ಬಸ್ ನಿಲ್ದಾಣದತ್ತ ತೆರಳಿದ್ದಾರೆ.

ನಂತರ ಪ್ರೇಮನಾಥ ಅವರ ಪತ್ನಿ ಮತ್ತು ಮಗ ಮಧ್ಯಾಹ್ನ ಸುಮಾರು ೧ ಗಂಟೆಗೆ ಮನೆಗೆ ವಾಪಾಸ್ ಬಂದು ಕಿಟಕಿಯಲ್ಲಿ ಇರಿಸಿದ್ದ ಕೀ ತೆಗೆದುಕೊಂಡು ಮನೆ ಬೀಗ ತೆಗೆದು ಒಳಗೆ ಹೋದಾಗ, ಬೀರುವಿನ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಪರಿಶೀಲನೆ ಮಾಡಿದಾಗ ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿವಸ್ತುಗಳು ಹಾಗೂ ನಗದು ಹಣ ಕಳ್ಳತನವಾಗಿರುವುದು ಗೊತ್ತಾಗಿದೆ. ಬಳಿಕ ಪತಿ ಪ್ರೇಮನಾಥಗೆ ಮಾಹಿತಿ ನೀಡಿದ್ದಾರೆ. ಅವರು ದೂರು ದಾಖಲಿಸಿದ್ದರು.

ಕೀ ಇಡುವುದನ್ನು ಗಮನಿಸಿದ್ದ ಚಾಲಕ:

ಆರೋಪಿ ಆಟೋ ಚಾಲಕ ಕಾರ್ತಿಕ್, ಪ್ರೇಮನಾಥ ಅವರ ಪತ್ನಿ ಹಾಗೂ ಮಗನನ್ನು ಪಿಕಪ್ ಮಾಡಲು ಮನೆ ಬಳಿ ಬಂದಿದ್ದಾಗ, ಮನೆಯ ಬೀಗದ ಕೀ ಅನ್ನು ಕಿಟಕಿಯಲ್ಲಿ ಇರಿಸುವುದನ್ನು ಗಮನಿಸಿದ್ದ. ಬಳಿಕ ಮೈಸೂರು ರಸ್ತೆಯ ಸ್ಯಾಟ್‌ಲೆಟ್ ಬಸ್ ನಿಲ್ದಾಣದ ಬಳಿ ಅವರನ್ನು ಡ್ರಾಪ್ ಮಾಡಿ ನಂತರ ಪ್ರೇಮನಾಥ ಅವರ ಮನೆ ಬಳಿ ಬಂದಿದ್ದಾನೆ. ಕಿಟಿಕಿಯಲ್ಲಿ ಇರಿಸಿದ್ದ ಬೀಗ ಕೀ ತೆಗೆದುಕೊಂಡು ಬೀಗ ತೆರೆದು ಮನೆ ಪ್ರವೇಶಿಸಿ, ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿವಸ್ತುಗಳು ಹಾಗೂ ನಗದು ಕಳವು ಮಾಡಿದ್ದಾನೆ. ನಂತರ ಮತ್ತೆ ಮನೆಗೆ ಬೀಗ ಹಾಕಿ ಕೀ ಅನ್ನು ಕಿಟಕಿಯಲ್ಲಿ ಇರಿಸಿ ಪರಾರಿಯಾಗಿದ್ದಾನೆ. ತನಿಖೆ ವೇಳೆ ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಕಳವು ಮಾಡಿದ್ದಾಗಿ ಆರೋಪಿ ಕಾರ್ತಿಕ್ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿಂದೆ ಆರೋಪಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net